ಪ್ಯಾರಿಸ್: ಮೂರನೇ ಶ್ರೇಯಾಂಕದ ಮರಿನ್ ಸಿಲಿಕ್ ಐದು ಸೆಟ್‌ಗಳ ಮ್ಯಾರಥಾನ್ ಸೆಣಸಾಟದಲ್ಲಿ ಫ್ಯಾಬಿಯೊ ಫಾಗ್ನಿನಿ ಅವರನ್ನು ಸೋಲಿಸಿ ಫ್ರೆಂಚ್ ಓಪನ್ ಟೆನಿಸ್ ಕೂಟದ ಕ್ವಾರ್ಟರ್‌ಫೈನಲ್ ತಲುಪಿದರು. ಪಾದದ ಗಾಯಕ್ಕೆ ಎರಡು ಬಾರಿ ಚಿಕಿತ್ಸೆ ಪಡೆದಿದ್ದ ಫಾಗ್ನಿನಿ ಅಂತಿಮವಾಗಿ 6-4, 6-1, 3-6, 6-7 (4-7), 6-3 ಸೆಟ್‌ಗಳಿಂದ ಸಿಲಿಕ್‌ಗೆ ಶರಣಾದರು.
44 ವಿಜಯಿ ಹೊಡೆತ ನೀಡಿದ್ದ ಸಿಲಿಕ್ ಕ್ವಾರ್ಟರ್‌ಫೈನಲ್ ಹೋರಾಟದಲ್ಲಿ ಐದನೇ ಶ್ರೇಯಾಂಕದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರನ್ನು ಎದುರಿಸಲಿದ್ದಾರೆ. ಪೊಟ್ರೊ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಜಾನ್ ಇಸ್ನರ್ ಅವರನ್ನು 6-4, 6-4, 6-4 ಸೆಟ್‌ಗಳಿಂದ ಸೋಲಿಸಿದ್ದರು. ಪೊಟ್ರೊ 2012ರ ಬಳಿಕ ಇದೇ ಮೊದಲ ಬಾರಿ ಇಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
10 ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಅವರಿಗೆ ಪ್ರಬಲ ಸವಾಲು ನೀಡುವವರಲ್ಲಿ ಒಬ್ಬರೆಂದು ಹೇಳಲಾದ ಡೆಲ್ ಪೊಟ್ರೊ ಅವರು ಪಂದ್ಯದುದ್ದಕ್ಕೂ ಸರ್ವ್ ಕಾಪಾಡಿಕೊಳ್ಳಲು ಯಶಸ್ವಿಯಾಗಿದ್ದರು. ನಾನು ಚೆನ್ನಾಗಿ ಆಡಿದ್ದೇನೆ. ಇದು ಪಂದ್ಯದ ಪ್ರಮುಖ ಅಂಶವಾಗಿದೆ. ಎದುರಾಳಿಯ ಸರ್ವ್ ಅನ್ನು ಮೂರು ಬಾರಿ ಬ್ರೇಕ್ ಮಾಡಿದ್ದೇನೆ. ಪ್ರಮುಖ ಅಂಕ ಗಳಿಸುವ ವೇಳೆ ನನ್ನ ಆಟ ಭರ್ಜರಿಯಾಗಿತ್ತು ಎಂದು ಪೊಟ್ರೊ ಹೇಳಿದರು.
ಈ ಪಂದ್ಯದ ವೇಳೆ ಪ್ರೇಕ್ಷಕರು ಯುಎಸ್‌ಎ ಯುಎಸ್‌ಎ ಎಂದು ಕಿರುಚಿ ಇಸ್ನರ್ ಅವರಿಗೆ ಬೆಂಬಲ ನೀಡುತ್ತಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೊಟ್ರೊ ಇಲ್ಲಿ ಯುಎಸ್‌ಎ ಯುಎಸ್‌ಎ ಹೇಳುವ ಪ್ರೇಕ್ಷಕರೆದುರು ಆಡಲು ಇಷ್ಟಪಡುತ್ತೇನೆ ಎಂದರು.