Advertisement

ಶಾಸಕ ರೇವೂರ ವಿರುದ್ಧ ಟೀಕೆ : ಕ್ಷಮೆ ಕೇಳಲು ಎಚ್ ಡಿಕೆ ಗೆ ಆಗ್ರಹ

11:15 AM Mar 02, 2018 | Team Udayavani |

ಕಲಬುರಗಿ: ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ವಿರುದ್ಧ ಟೀಕಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಹೇಳಿಕೆ ಮರಳಿ ಪಡೆದು ಕ್ಷಮೆ ಕೇಳಬೇಕು ಎಂದು ಬಿ.ಎಸ್‌. ಯಡಿಯೂರಪ್ಪ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬಾಬುರಾವ ಎಸ್‌. ಬಸವಂತವಾಡಿ ಒತ್ತಾಯಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಜಾತ್ಯತೀತ ಜನತಾದಳದ ಜಿಲ್ಲಾ ಕಚೇರಿ ಆವರಣದಲ್ಲಿ ನಡೆದ ಸಮಾವೇಶದಲ್ಲಿ ಕುಮಾರಸ್ವಾಮಿ ರೇವೂರ ಅವರ ವಿರುದ್ಧ ಕಟುವಾಗಿ ಟೀಕಿಸಿದ್ದಕ್ಕೆ ಖಂಡಿಸಿದರು. 

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಯಾರಿಗೆ ಬೇಕಾದರೂ ಟೋಪಿ ಹಾಕುತ್ತಾನೆ ಎಂದು ಏಕವಚನದಲ್ಲಿಯೇ ಕುಮಾರಸ್ವಾಮಿ ಅವರು ನಿಂದಿಸಿದ್ದಕ್ಕೆ ಆಕ್ಷೇಪಿಸಿದ ಅವರು, ಟೋಪಿ ಹಾಕುವವರು ರೇವೂರ ಅವರು ಅಲ್ಲ, ಬದಲಾಗಿ ಕುಮಾರಸ್ವಾಮಿ ಎಂದು ತಿರುಗೇಟು ನೀಡಿದರು.
 
ಟೋಪಿ ಹಾಕುವುದರಲ್ಲಿ ಕುಮಾರಸ್ವಾಮಿ ಅವರು ಇಡೀ ಕರ್ನಾಟಕ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ ಎಂದು ಆರೋಪಿಸಿದ ಅವರು, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ತಂದೆ ದಿವಂಗತ ಚಂದ್ರಶೇಖರ ಪಾಟೀಲ ರೇವೂರ ಅವರು ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಜೆಡಿಎಸ್‌ ಮತ್ತು ಬಿಜೆಪಿ ಒಗ್ಗೂಡಿಸಿ ಅಧಿಕಾರಕ್ಕೆ ತಂದರು.

 ಅದು 20-20 ತಿಂಗಳು ಅಧಿಕಾರ ಹಂಚಿಕೆಯಲ್ಲಿ ಸಮ್ಮಿಶ್ರ ಸರ್ಕಾರ ಬಂತು. ಆಗ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು ತಮ್ಮ ಅವಧಿ ಕೊನೆಗೊಂಡರೂಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದೇ ಟೋಪಿ ಹಾಕಿದರು. ದಿ| ಚಂದ್ರಶೇಖರ ಪಾಟೀಲ ರೇವೂರ ಅವರು ಸಮ್ಮಿಶ್ರ ಸರ್ಕಾರ ತರಲು ಮಾಡಿದ ಸಹಾಯವನ್ನು ನೆನಪಿಸಿಕೊಳ್ಳದೇ ಕುಮಾರಸ್ವಾಮಿ ಅವರು ಅವರ ಪುತ್ರ ದತ್ತಾತ್ರೇಯ ಪಾಟೀಲ ರೇವೂರ ಅವರ ವಿರುದ್ಧ ಹರಿಹಾಯ್ದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಇನ್ನು ಮುಂದೆ ಯಾವುದೇ ಕಾರಣಕ್ಕೂ ಶಾಸಕ ದತ್ತಾತ್ರೇಯ ಪಾಟೀಲ ಅವರನ್ನು ಟೀಕಿಸಬಾರದು. ಒಂದು ವೇಳೆ ಟೀಕೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರು ನಗರಕ್ಕೆ ಆಗಮಿಸಿದಾಗ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
 
ಪ್ರಕಾಶ ಮಾಲಿಪಾಟೀಲ, ಯೋಗೇಶ ಬಿರಾದಾರ, ನಾಗೇಂದ್ರ ಚಿಂಚೋಳಿ, ಅನಿಲಕುಮಾರ ಎಳಮೇಲಿ, ಸುಭಾಷ
ಪದ್ಮಾಜಿ ಸುದ್ದಿಗೋಷ್ಠಿಯಲ್ಲಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next