ಸಾಗರ: ನಾನು ವಿದೇಶ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕೆಲವರು ಟೀಕೆ ಮಾಡಿದ್ದು ನನ್ನ ಗಮನದಲ್ಲಿದೆ. ಹಿಂದೆ ಮಾಜಿ ಶಾಸಕರು ಅನಾರೋಗ್ಯ ನಿಮಿತ್ತ ಆರು ತಿಂಗಳು ಆಸ್ಪತ್ರೆಯಲ್ಲಿದ್ದರು. ಆದರೆ ನಾವು ಅವರನ್ನು ಟೀಕೆ ಮಾಡಿರಲಿಲ್ಲ ಎಂದು ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗೆ ನೀರನ್ನು ಹೊರಕ್ಕೆ ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಪತ್ರಕರ್ತರ ಜೊತೆ ಮಾತನಾಡಿ, ಪ್ರತಿಯೊಬ್ಬರಿಗೂ ವೈಯಕ್ತಿಕ ಜೀವನವಿರುತ್ತದೆ. ಸಮಯ ಸಂದರ್ಭ ಬರುತ್ತದೆ. ನಾನು ಪತ್ನಿ, ಮಗನ ಜೊತೆ ಮಗಳ ಮನೆಗೆ ಹೋಗಿದ್ದೆನೇ ವಿನಾ ಮಜಾ ಮಾಡಲು ವಿದೇಶ ಪ್ರವಾಸ ಮಾಡಿರಲಿಲ್ಲ. ಪ್ರವಾಸ ತೆರಳಿದೆ ಎಂದ ಮಾತ್ರಕ್ಕೆ ಅಭಿವೃದ್ಧಿ ಕೆಲಸದಲ್ಲಿ, ಸಂಕಷ್ಟ ಸಂದರ್ಭದಲ್ಲಿ ನಾವು ವಿಳಂಬ ಮಾಡುತ್ತಿಲ್ಲ. ಪರಿಹಾರ ಕಲ್ಪಿಸುವಲ್ಲಿ ಯಾವುದೇ ವಿಳಂಬ ಮಾಡಿಲ್ಲ ಎಂದು ಹೇಳಿದರು.
ಕಳೆದ ವರ್ಷ ಅನಾವೃಷ್ಟಿಯಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ. ಈ ಬಾರಿ ಲಿಂಗನಮಕ್ಕಿ ಡ್ಯಾಂ ಭರ್ತಿಯಾಗಿದ್ದು ಅತೀವ ಸಂತೋಷ ತಂದಿದೆ. ಮಳೆ ಬರುತ್ತಿರುವುದರಿಂದ ಡ್ಯಾಂಗೆ ಇನ್ನಷ್ಟು ನೀರು ಬರುವ ಸಾಧ್ಯತೆ ಇದೆ. ಒಂದು ಕಡೆ ಲಿಂಗನಮಕ್ಕಿ ಆಣೆಕಟ್ಟು ಭರ್ತಿಯಾಗಿದ್ದು ಸಂತೋಷ ತಂದಿದ್ದರೇ ಇನ್ನೊಂದು ಕಡೆ ಮಳೆಯಿಂದ ಹಾನಿಯಾಗಿರುವುದು ತೀರ ಬೇಸರ ತರಿಸಿದೆ. ನೂರಾರು ಮನೆ, ರಸ್ತೆ, ಚರಂಡಿ, ಶಾಲೆ, ಅಂಗನವಾಡಿ, ಸೇತುವೆಗಳಿಗೆ ಹಾನಿಯಾಗಿದೆ ಎಂದರು.
ಮಳೆಯಿಂದ ಜಲ ಒಡೆಯುತ್ತಿದ್ದು ರಸ್ತೆ ತುಂಬಾ ಹಾನಿಯಾಗಿದೆ. ಈಗಾಗಲೇ ಹಾನಿಯ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ನಷ್ಟದ ಅಂದಾಜನ್ನು ಸರ್ಕಾಕ್ಕೆ ಸಲ್ಲಿಸಿ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ. ಅಧಿಕೃತ ಮತ್ತು ಅನಧಿಕೃತ ಮನೆಗಳಿಗೆ ತಾರತಮ್ಯ ಇಲ್ಲದೆ ಪರಿಹಾರ ನೀಡಲು ಗಮನ ಹರಿಸಲಾಗಿದೆ. ನಿರಂತರವಾಗಿ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡುವ ಜೊತೆಗೆ ಅಗತ್ಯ ನೆರವು ಕಲ್ಪಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಕಲಸೆ ಚಂದ್ರಪ್ಪ, ಅನಿತಾ ಕುಮಾರಿ, ಸೋಮಶೇಖರ ಲ್ಯಾವಿಗೆರೆ, ಅಶೋಕ ಬೇಳೂರು, ಗಣಪತಿ ಮಂಡಗಳಲೆ, ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಹಾಜರಿದ್ದರು.