Advertisement

ಸಂಚಾರಕ್ಕೆ ಸಂಕಷ್ಟ: ಬಜಗೋಳಿ -ನಲ್ಲೂರು ರಸ್ತೆ ಅಭಿವೃದ್ಧಿಗೆ ಬೇಡಿಕೆ

07:29 PM Nov 06, 2020 | mahesh |

ಕಾರ್ಕಳ: ಗ್ರಾಮಗಳನ್ನು ಸಂಪರ್ಕಿಸುವ ಬಜಗೋಳಿ -ಮುಂಡಿಬೆಟ್ಟು – ನಲ್ಲೂರು ಕಚ್ಚಾ ರಸ್ತೆ ಅಭಿವೃದ್ಧಿ ಬೇಡಿಕೆಗೆ ಇನ್ನೂ ಈಡೇರಿಲ್ಲ. ರಾಷ್ಟ್ರೀಯ ಹೆದ್ದಾರಿ 169 ಬಜಗೋಳಿ ಅಂಚೆ ಕಚೇರಿ ಬಳಿಯಿಂದ ಮುಂಡಿಬೆಟ್ಟು ನಲ್ಲೂರಿಗೆ ತೆರಳುವ ರಸ್ತೆ ಇದಾಗಿದೆ. ಈ ರಸ್ತೆ ಕಿರಿದಾಗಿದ್ದು ಇದೇ ರಸ್ತೆಯಲ್ಲಿ 1 ಕಿ.ಮೀ ನಷ್ಟು ದೂರ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದೆ. ಮಳೆಗಾಲದಲ್ಲಿ ಹೊಂಡ ಕೆಸರಿನಿಂದ ತುಂಬಿರುತ್ತಿದ್ದು ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತ್ತಾರೆ.

Advertisement

ಶಾಶ್ವತ ಅಭಿವೃದ್ಧಿಯಾದರೆ ಅನುಕೂಲ
ಕೃಷಿ ಅವಲಂಬಿತರು, ಕೂಲಿ ಕಾರ್ಮಿಕರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಬೆಳೆದ ಫ‌ಸಲಿನ ಸಾಗಾಟಕ್ಕೆ, ಕೂಲಿಗೆ ತೆರಳಲು ರಸ್ತೆ ಸರಿಯಿಲ್ಲದೆ ತೊಂದರೆ, ವೆಚ್ಚ ದುಪ್ಪಟ್ಟಾಗುತ್ತಿದೆ. ರಸ್ತೆ ಅಭಿವೃದ್ಧಿಗೊಂಡರೆ ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ರಸ್ತೆ ಅಭಿವೃದ್ಧಿ ಪಡಿಸಿ ಎಂದು ಸ್ಥಳೀಯ ಮಟ್ಟದಿಂದ ಶಾಸಕರಿಗೆ ಮನವಿ ಮಾಡಿದ್ದೇವೆ. ಭರವಸೆ ಸಿಕ್ಕಿದೆ. ಆದಷ್ಟು ಬೇಗ ರಸ್ತೆ ಅಭಿವೃದ್ಧಿಗೊಂಡಲ್ಲಿ ಅನುಕೂಲವಾಗುತ್ತದೆ ಎಂದು ಬಜಗೋಳಿಯ ವಿನ್ಸೆಂಟ್‌ ಡಿ’ಸೋಜ ತಿಳಿಸಿದ್ದಾರೆ.

ದಶಕದ ಬೇಡಿಕೆ
ಸುಮಾರು ಮೂರು ದಶಕಗಳಿಂದ ಈ ಭಾಗದ ನಿವಾಸಿಗಳು ರಸ್ತೆ ಅಭಿವೃದ್ಧಿಪಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಎಲ್ಲರಿಂದಲೂ ಭರವಸೆ ದೊರಕಿದೆ ಆದರೂ ರಸ್ತೆ ದುರಸ್ತಿಯಾಗಿಲ್ಲ. ಶಾಸಕರ ಕಚೇರಿಯಿಂದ ಅಲ್ಪಸಂಖ್ಯಾಕರ ಕೋಟಾದಲ್ಲಿ ಮೊದಲ ಪ್ರಾಶಸ್ತ್ಯದಲ್ಲಿ ರಸ್ತೆ ದುರಸ್ತಿಯ ಭರವಸೆ ದೊರಕಿದೆ. ಕೋವಿಡ್‌ ಸೋಂಕಿನಿಂದಾಗಿ ಇದು ಈಡೇರಿಲ್ಲ. ಅನುದಾನ ಮಂಜೂರಾತಿ ನಿರೀಕ್ಷೆಯಲ್ಲಿ ನಾವಿದ್ದೇವೆ ಎನ್ನುತ್ತಾರೆ ಈ ಭಾಗದ ನಿವಾಸಿಗಳು.

ಸಂಪರ್ಕ ರಸ್ತೆ
ಸುಮಾರು 35ಕ್ಕೂ ಅಧಿಕ ಕುಟುಂಬಗಳು ವಾಸವಿರುವಲ್ಲಿಗೆ ಸಂಪರ್ಕಿಸುವ ರಸ್ತೆಯಿದು. ನಲ್ಲೂರು ಗ್ರಾಮ, ಬಜಗೋಳಿಯಿಂದ ನಲ್ಲೂರಿಗೆ ಹೋಗುವ ಅತ್ಯಂತ ಹತ್ತಿರದ ರಸ್ತೆ ಕೂಡ ಇದಾಗಿದೆ. ನಿತ್ಯ ಸಂಚರಿಸುವವರಿಗೆ ರಸ್ತೆ ಅಭಿವೃದ್ಧಿಯಾಗದೆ ಕಿರಿಕಿರಿ ಅನುಭವಿಸುವಂತಾಗಿದೆ.

1 ಕಿ.ಮೀ. ಅಭಿವೃದ್ಧಿಗೆ ಬಾಕಿ
ಮುಡಾರು , ನಲ್ಲೂರು ಗ್ರಾ.ಪಂ.ಗಳಿಗೆ ಸೇರಿದ ರಸ್ತೆ ಇದಾಗಿದೆ. ಇವೆರಡು ಪಂಚಾಯತ್‌ಗಳ ಪೈಕಿ ಮುಡಾರುಗೆ ಸೇರಿದ 200 ಮೀ. ಮತ್ತು ನಲ್ಲೂರು ಪಂಚಾಯತ್‌ಗೆ ಸೇರಿದ 900 ಮೀ. ಒಟ್ಟು ಸೇರಿ 1.01 ಕಿ.ಮೀ ವ್ಯಾಪ್ತಿಯಷ್ಟೇ ಅಭಿವೃದ್ಧಿಗೆ ಬಾಕಿ ಇದೆ. ಇದರ ಅಭಿವೃದ್ಧಿಯಾದರೆ ಇಲ್ಲಿನವರು ಅನುಭವಿಸುವ ದೊಡ್ಡ ಸಮಸ್ಯೆ ನಿವಾರಣೆಯಾಗುತ್ತದೆ.

Advertisement

ಲಭ್ಯ ಅನುದಾನದಲ್ಲಿ ದುರಸ್ತಿ
ಹದಗೆಟ್ಟ ರಸ್ತೆಗಳನ್ನು ಪಂಚಾಯತ್‌ನ ಲಭ್ಯ ಅನುದಾನದಲ್ಲಿ ಪ್ರತಿ ವರ್ಷ ದುರಸ್ತಿಗೊಳಿಸಿದ್ದೇವೆ. ಇದರ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳು ಪಂಚಾಯತ್‌ಗೆ ಲಭ್ಯವಿಲ್ಲ. ಸಾರ್ವಜನಿಕರಿಂದ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ಮನವಿ ಬಂದಲ್ಲಿ ನಾವು ಸಂಬಂಧಿಸಿದ ಇಲಾಖೆಗೆ ಮನವಿ ಮಾಡುತ್ತೇವೆ.
-ಸದಾಶಿವ ಮೂಲ್ಯ, ಪಿಡಿಒ , ನಲ್ಲೂರು ಮತ್ತು ಮುಡಾರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next