ಮೈಸೂರು: ಹೊಸ ಕಾಯಿಲೆಗಳಿಗೆ ಚಿಕಿತ್ಸೆ ಹುಡುಕುವ ಸಂದಿಗ್ಧ ಪರಿಸ್ಥಿತಿ ಸರ್ಕಾರ ಮತ್ತು ಸಮಾಜದಲ್ಲಿ ಎದುರಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ್ ವಿಷಾದ ವ್ಯಕ್ತಪಡಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ಆಯೋಜಿಸಿದ್ದ ನಗರದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಎಂ.ವೀರಪ್ಪ ದತ್ತಿ ಹಾಗೂ ಡಿ.ವಿ.ಹಾಲಭಾವಿ ಪ್ರಶಸ್ತಿಗಳ ಪ್ರದಾನ, ಕೃತಿ ಬಿಡುಗಡೆ ಹಾಗೂ ಜೆಎಸ್‌ಎಸ್ ಭೌತಿಕ ಚಿಕಿತ್ಸೆ ಮತ್ತು ಪುನಶ್ಚೇತನ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಜನರ ಆರೋಗ್ಯ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿದ್ದರೂ ಅನೇಕ ಕಾಯಿಲೆಗಳು ಸಮಾಜದಲ್ಲಿ ಕಾಡುತ್ತಿದೆ. ಈ ನಡುವೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 1600 ರೋಗಗಳಿಗೆ ಚಿಕಿತ್ಸೆ ಕೊಡಿಸುವ ಉದ್ದೇಶವನ್ನು ಹೊಂದಿದ್ದರೂ, ಎರಡೂ ಸರ್ಕಾರಗಳ ಬಳಿಯಲ್ಲಿ ಅಂಗವಿಕಲತೆ, ಮರೆಗುಳಿತನಕ್ಕೆ ಚಿಕಿತ್ಸೆ ಕೊಡಿಸಲು ಹಣವಿಲ್ಲ.
ಆದರೆ ಸಮಾಜದ ಸ್ವಾಸ್ತ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲವು ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಮುಂದಾಗಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ ಎಂದರು. ವಿವಿಧ ಪ್ರಶಸ್ತಿ ಪ್ರದಾನ: ಚಿತ್ರ ಕಲಾವಿದ ಜಿ.ಎಂ. ಹೆಗಡೆ ಹಾಗೂ ಶಿಲ್ಪಕಲಾವಿದ ಆರ್.ಪುಟ್ಟರಾಜು ಅವರಿಗೆ “ಶ್ರೀ ವೀರಪ್ಪ ದತ್ತಿ ಪ್ರಶಸ್ತಿ’ ಹಾಗೂ ಚಿತ್ರ ಕಲಾವಿದೆ ಪೊ›.ಎಂ.ಜೆ.ಕಮಲಾಕ್ಷಿ ಹಾಗೂ ಸಂಶೋಧಕ ಮತ್ತು ಕಲಾವಿದರಾದ ಡಾ.ಎಸ್.ಸಿ.ಪಾಟೀಲ ಅವರಿಗೆ “ಶ್ರೀ ಹಾಲಭಾವಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಲೇಖಕ ಸಿ.ಅಂಕಪ್ಪ ರಚಿಸಿರುವ ಹಾಗೂ ಡಾ.ನಂದೀಶ್ ಹಂಚೆ ಸಂಪಾದಕತ್ವದ “ಶ್ರೀಪಾದಕ್ಕೆ ನಮೋ ನಮೋ’ ಕೃತಿಯನ್ನು ಶಾಸಕ ಎಸ್.ಎ.ರಾಮದಾಸ್ ಲೋಕಾರ್ಪಣೆ ಮಾಡಿದರು. ಸಮಾರಂಭದಲ್ಲಿ ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್, ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎಂ.ಎಸ್. ಮೂರ್ತಿ ಇನ್ನಿತರರು ಹಾಜರಿದ್ದರು.