Advertisement

ಬಡವರ ಮಾನದಂಡ ಪರಿಷ್ಕಾರ

11:23 AM Oct 11, 2017 | Team Udayavani |

ವಿವಿಧ ಸರಕಾರಿ ಸವಲತ್ತುಗಳು, ಯೋಜನೆಗಳ ಪ್ರಯೋಜನ ಅನರ್ಹರ ಪಾಲಾಗಬಾರದೆಂದು ನಗರ ಪ್ರದೇಶಗಳಲ್ಲಿರುವ ಬಡವರ ಯಾದಿಯನ್ನು ಪರಿಷ್ಕರಿಸುವ ಶಿಫಾರಸುಗಳನ್ನು ನೀತಿ ಆಯೋಗದ ಸದಸ್ಯ ಮತ್ತು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಮುಖ್ಯಸ್ಥ ವಿವೇಕ್‌ ದೇಬ್‌ರಾಯ್‌ ನೇತೃತ್ವದ ಸಮಿತಿ ಮಂಡಿಸಿದೆ. ಭಾರತದ ವಿವಿಧ ನಗರ ಪ್ರದೇಶಗಳಲ್ಲಿ ಇರುವ ಜನರಲ್ಲಿ ಎಷ್ಟು ಮಂದಿ ಬಡವರು ಎಂಬುದನ್ನು ಗುರುತಿಸುವ ಮಾನದಂಡಗಳನ್ನು ಈ ಸಮಿತಿ ಪರಿಷ್ಕರಿಸಿದೆ. ಸರಕಾರಿ ಸೌಲಭ್ಯಗಳನ್ನು ಸಿರಿವಂತರೂ ನಿರ್ಲಜ್ಜೆಯಿಂದ ಅನುಭೋಗಿಸುವ ಸಂಸ್ಕೃತಿಯಿರುವ ಭಾರತದಲ್ಲಿ ಅರ್ಹ ಫ‌ಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸುವುದು ಸುಲಭವಲ್ಲ. ಈ ದೃಷ್ಟಿಯಿಂದ, ಕೆಲವು ಮಿತಿಗಳ ಹೊರತಾಗಿಯೂ, ಈ ಸಮಿತಿಯ ಶಿಫಾರಸುಗಳು ಸ್ವಾಗತಾರ್ಹವಾಗಿವೆ.

Advertisement

ಯುಪಿಎ ಸರಕಾರದ ಅವಧಿಯಲ್ಲಿ, 2011ರಲ್ಲಿ ಇದೇ ಉದ್ದೇಶಕ್ಕಾಗಿ ರಚಿಸಲಾಗಿದ್ದ ಎಸ್‌.ಆರ್‌. ಹಾಶಿಮ್‌ ನೇತೃತ್ವದ ಸಮಿತಿ ನೀಡಿದ್ದ ಶಿಫಾರಸುಗಳನ್ನು ದೇಬ್‌ರಾಯ್‌ ನೇತೃತ್ವದ ಸಮಿತಿ ಇನ್ನಷ್ಟು ನಿಖರಗೊಳಿ ಸಿದೆ. ಹೊಸ ಶಿಫಾರಸುಗಳ ಆಧಾರದಲ್ಲಿ ನೋಡುವುದಾದರೆ ನಗರ ಪ್ರದೇಶಗಳಲ್ಲಿರುವ ಬಡವರ ಸಂಖ್ಯೆ 18 ಕೋಟಿಗಳಿಂದ 7.20 ಕೋಟಿಗಳಿಗೆ, ಅಂದರೆ ಅರ್ಧದಷ್ಟು ಇಳಿಕೆಯಾಗಲಿದೆ. ಅಷ್ಟು ಮಂದಿ ಸಿರಿವಂತರ ಯಾದಿಗೆ ಸೇರ್ಪಡೆಯಾಗಲಿದ್ದಾರೆ. ಬಡವರ ಯಾದಿ ಯಿಂದ ಹೊರಗಿದ್ದು, ವಿವಿಧ ಸರಕಾರಿ ಕಲ್ಯಾಣ ಯೋಜನೆಗಳಿಗೆ ತಾನೇ ತಾನಾಗಿ ಸೇರ್ಪಡೆಗೊಳ್ಳದಿದ್ದರೂ ಕನಿಷ್ಠ ಒಂದು ಸರಕಾರಿ ಕಲ್ಯಾಣ ಕಾರ್ಯಕ್ರಮದ ಪ್ರಯೋಜನಕ್ಕೆ ಅರ್ಹರಾಗುವ ನಗರವಾಸಿ ಕುಟುಂಬ ಗಳ ಸಂಖ್ಯೆಯೂ ಹೊಸ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ಇಳಿಕೆಯಾಗಲಿದೆ. ಹಾಶಿಮ್‌ ಸಮಿತಿಯ ಮಾನದಂಡಗಳ ಆಧಾರದಲ್ಲಿ ಲೆಕ್ಕ ಹಾಕುವುದಾದರೆ 35% ಇದ್ದ ಈ ಕುಟುಂಬಗಳ ಪ್ರಮಾಣ ಹೊಸ ಸಮಿತಿಯ ಶಿಫಾರಸುಗಳ ಆಧಾರದಲ್ಲಿ 30.9%ಕ್ಕಿಳಿಯುತ್ತದೆ.  

ನಗರ ಪ್ರದೇಶದ ಬಡವರ ಯಾದಿಯಲ್ಲಿ ಸೇರ್ಪಡೆಗೊಳ್ಳುವುದರಿಂದ ವಿವಿಧ ಸರಕಾರಿ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ತಾನೇ ತಾನಾಗಿ ಲಭಿಸುತ್ತದೆ. ಇವುಗಳಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಯಲ್ಲಿ ಮನೆ ನಿರ್ಮಾಣ, ನ್ಯಾಶನಲ್‌ ಅರ್ಬನ್‌ ಲೈವಿಹುಡ್‌ ಮಿಶನ್‌ ಕಾರ್ಯಕ್ರಮದಡಿ ಉದ್ಯೋಗ ಅಥವಾ ಕೌಶಲ ತರಬೇತಿ, ರಾಷ್ಟ್ರೀಯ ಸ್ವಾಸœé ವಿಮಾ ಯೋಜನೆಯಡಿ ವಿವಿಧ ಆರೋಗ್ಯ ಸೇವಾ ಸೌಲಭ್ಯಗಳು, ಉಜ್ವಲ ಯೋಜನೆಯಡಿ ಉಚಿತ ಎಲ್‌ಪಿಜಿ ಅನಿಲ ಸಂಪರ್ಕ ಇತ್ಯಾದಿ ಸೇರಿವೆ. ಹೀಗಾಗಿ ಮಾನದಂಡಗಳನ್ನು ನಿಖರಗೊಳಿಸದೆ, ಪರಿಷ್ಕರಿಸದೆ ಇದ್ದರೆ ಅನರ್ಹರೂ ಈ ಸೌಲಭ್ಯಗಳ ಪ್ರಯೋಜನ ಪಡೆಯುವ ಸಾಧ್ಯತೆಯಿದೆ; ಸೌಲಭ್ಯಗಳ ಅರ್ಹರ ಕೈತಪ್ಪಿಹೋಗಬಹುದು. ಹಾಶಿಮ್‌ ಸಮಿತಿ ಮತ್ತು ಪ್ರಸ್ತುತ ಸಮಿತಿ – ಎರಡೂ 2011ರ ಸಾಮಾಜಿಕ-ಆರ್ಥಿಕ ಜಾತಿವಾರು ಗಣತಿ (ಎಸ್‌ಇಸಿಸಿ-2011)ಯ ಅಂಕಿಅಂಶಗಳನ್ನು ಆಧರಿಸಿ ಈ ಶಿಫಾರಸುಗಳನ್ನು ಮಾಡಿವೆ. ಎಸ್‌ಇಸಿಸಿ ಅಂಕಿಅಂಶಗಳು ಕೇಂದ್ರ, ರಾಜ್ಯ ಸರಕಾರಗಳಿಗೆ ಒಪ್ಪಿತ ಅಂಕಿಅಂಶವಾದ ಕಾರಣ ಅದನ್ನು ಆಧರಿಸಿ ವಿವಿಧ ಸರಕಾರಿ ಸೌಲಭ್ಯ, ಯೋಜನೆಗಳ ಹಂಚಿಕೆ ಯುಕ್ತವಾಗಿರುತ್ತದೆ.

ಹಾಶಿಮ್‌ ಸಮಿತಿ 2011ರಲ್ಲಿ ರಚನೆಯಾಗಿದ್ದು, ಆಗಷ್ಟೆ ನಡೆದ ಎಸ್‌ಇಸಿಸಿಯ ಅಂಕಿಅಂಶಗಳನ್ನು ಅದರ ಶಿಫಾರಸುಗಳು ಆಧರಿಸಿದ್ದವು. ಆದರೆ, ಗಣತಿ ನಡೆದು ಈಗ ಸಾಕಷ್ಟು ವರ್ಷಗಳು ಸಂದಿರುವ ಕಾರಣ ಅಂಕಿಅಂಶಗಳು ಬದಲಾಗಿರುವ ಸಾಧ್ಯತೆಯಿದೆ. ಹೀಗಾಗಿ ದೇಬ್‌ರಾಯ್‌ ಸಮಿತಿಯ ಶಿಫಾರಸುಗಳು ಪರಿಪೂರ್ಣ ಎನ್ನುವ ಹಾಗಿಲ್ಲ. ಅಂಕಿಅಂಶಗಳು ಕಾಲಕಾಲಕ್ಕೆ ಪರಿಷ್ಕಾರಗೊಳ್ಳುತ್ತಿದ್ದರಷ್ಟೇ ಇಂತಹ ಶಿಫಾರಸುಗಳು ಪ್ರಸ್ತುತವಾಗಿರಲು ಸಾಧ್ಯ. ಒಟ್ಟಲ್ಲಿ ಸೌಲಭ್ಯಗಳು ಅನರ್ಹರ ಪಾಲಾಗದೆ ಅರ್ಹರಿಗೆ ಲಭ್ಯವಾಗುವ ದೃಷ್ಟಿಯಿಂದ ಬಡವರನ್ನು ಗುರುತಿಸುವ ಮಾನದಂಡಗಳನ್ನು ಪರಿಷ್ಕರಿಸಿರುವುದು ಉತ್ತಮ ಹೆಜ್ಜೆ. ಅನೇಕ ಸರಕಾರಿ ಯೋಜನೆಗಳ ಫ‌ಲವನ್ನು ಅನರ್ಹರೇ ಭೋಗಿಸುತ್ತಾರೆ ಎಂಬುದು ಭಾರತದ ಮಟ್ಟಿಗೆ ಕಟುವಾಸ್ತವ. ಅರ್ಹರು ಸೌಲಭ್ಯವಂಚಿತರಾಗದಂತೆ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಂಡು ಸರಕಾರ ಈ ಶಿಫಾರಸುಗಳನ್ನು ಅಂಗೀಕರಿಸಬಹುದು. ಅದಕ್ಕೂ ಮುನ್ನ ಶಿಫಾರಸುಗಳ ಬಗ್ಗೆ ಸಾರ್ವಜನಿಕರ, ವಿವಿಧ ಕ್ಷೇತ್ರಗಳ ಅಭಿಪ್ರಾಯಗಳನ್ನೂ ಪರಿಗಣಿಸುವ ಕಾರ್ಯ ನಡೆದರೆ ಇನ್ನಷ್ಟು ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next