ಕಲಬುರಗಿ: ಸಾಕ್ಷರತೆ, ಆರೋಗ್ಯ ಮತ್ತು ತಲಾ ಆದಾಯ ಆಯಾ ದೇಶದ ಅಭಿವೃದ್ಧಿಯ ಮಾನದಂಡಗಳಾಗಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು. ಶನಿವಾರ ನಗರದ ಸಾರ್ವಜನಿಕ ಉದ್ಯಾನವನದ ರೋಟರಿ ಶಾಲೆ ಸಭಾಂಗಣದಲ್ಲಿ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ಭಾರತ ಸಾಕ್ಷಾರತಾ ಅಭಿಯಾನದಡಿ ಸರಕಾರಿ ಪ್ರೌಢಶಾಲೆ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಸಮಗ್ರ ರಸಾಯನಶಾಸ್ತ್ರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಸಾಕ್ಷರತಾ ಪ್ರಮಾಣ ಶೇ.75, ಕರ್ನಾಟಕದ್ದು ಶೇ.76 ಮತ್ತು ಕಲಬುರಗಿ ಜಿಲ್ಲೆಯದು ಶೇ 68 ರಷ್ಟು ಇದೆ. ಸಾಕ್ಷರತೆ ಪ್ರಮಾಣವನ್ನು ಶತ ಪ್ರತಿಶತವಾಗಿಸುವ ಪ್ರಯತ್ನವನ್ನು ಶಿಕ್ಷಣ ಇಲಾಖೆ ನಡೆಸುತ್ತಿದೆ. ಈ ಕಾರ್ಯದಲ್ಲಿ ರೋಟರಿ ಕ್ಲಬ್‌ನಂತಹ ಸಂಸ್ಥೆಗಳು ಉದಾತ್ತ ಮನಸ್ಸಿನಿಂದ ಶಿಕ್ಷಣ ಇಲಾಖೆ ಜತೆ ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದರು. ರೋಟರಿ ಕ್ಲಬ್ ಜಿಲ್ಲಾ ಸಾಕ್ಷಾರತಾ ಸಮಿತಿ ಅಧ್ಯಕ್ಷ ಡಾ| ಬಿ.ಇ. ರಂಗಸ್ವಾಮಿ ಮಾತನಾಡಿ, ಪೋಲಿಯೋ ನಿರ್ಮೂಲನಾ ಅಭಿಯಾನದಲ್ಲಿ ತೊಡಗಿಸಿಕೊಂಡ ರೋಟರಿ ಕ್ಲಬ್ ಇದೀಗ ಸಾಕ್ಷಾರತಾ ಆಂದೊಲನ ಕೈಗೆತ್ತಿಕೊಂಡಿದೆ. ಕಳೆದ 3ವರ್ಷದಲ್ಲಿ ಸುಮಾರು 15ಸಾವಿರ ಶಿಕ್ಷಕರಿಗೆ ವಿವಿಧ ವಿಷಯದ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ವಿವಿಧ ಶಾಲೆಗಳಿಗೆ 200 ಇ ಕಲಿಕಾ ಉಪಕರಣ ವಿತರಿಸಲಾಗಿದೆ. ಶಾಲೆ ಬಿಟ್ಟ 6 ರಿಂದ 13 ವರ್ಷದದೊಳಗಿನ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶ ರೋಟರಿ ಸಂಸ್ಥೆ ಹೊಂದಿದ್ದು, ಇದಕ್ಕಾಗಿಯೇ ಕಲಿಕಾಕೇಂದ್ರ ತೆರೆಯಲಾಗುವುದು. ವಿದ್ಯಾರ್ಥಿಗಳ ಅಭಿಪ್ರಾಯವನ್ನು ಆಧರಿಸಿ ಶಿಕ್ಷಕರನ್ನು ಗುರತಿಸಿ ಶಿಕ್ಷಕರ ದಿನಾವಾದ ಸಪ್ಟೆಂಬರ್ 5ರಂದು ಗೌರವಿಸಲಾಗುತ್ತಿದೆ ಎಂದರು. ರೋಟರಿ ಕ್ಲಬ್ ಅಸಿಸ್ಟಂಟ್ ಗೌರ್ನರ್ ಲಕ್ಷ್ಮೀಕಾಂತಮೈಲಾಪುರ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿಆಗಮಿಸಿದ ಪದ್ಮಾಪ್ರಭು, ಕರೀಮ ಅಂಜುಮ್, ವಲಯ ಕಾರ್ಯದರ್ಶಿ ಚೇತನ ಜೋಶಿ, ರೋಟರಿ ಕ್ಲಬ್ ಅಧ್ಯಕ್ಷರಾದ ಚಂದ್ರಶೇಖರ ತಳ್ಳಳ್ಳಿ, ಧನರಾಜ ಭಾಷಗಿ, ಎಂ.ಮುರಳಿಧರ, ಚಂದ್ರಶೇಖರ ಸುತ್ರಾವೆ, ಮಂಜುನಾಥ ಮಂಗಾಣೆ ಹಾಜರಿದ್ದರು. ರೋಟರಿ ಕ್ಲಬ್ ಸಾಕ್ಷರತಾ ವಲಯ ಅಧ್ಯಕ್ಷರಾದ ಡಾ| ಕೇಶವ ಬಿರಾದಾರ ಸ್ವಾಗತಿಸಿದರು. ಸುಮಾರು 160ಕ್ಕಿಂತ ಹೆಚ್ಚು ಶಿಕ್ಷಕ ಶಿಕ್ಷಕಿಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.