Advertisement

ಶಾಲೆಗೆ ಮಕ್ಕಳ ಸೇರಿಸುವ ಮುನ್ನ ಪಟ್ಟಿ ಪರಿಶೀಲಿಸಿ

12:14 AM May 23, 2024 | Team Udayavani |

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯದಲ್ಲಿರುವ ಅಧಿಕೃತ ಅನುದಾನರಹಿತ ಶಾಲೆ (ಖಾಸಗಿ ಶಾಲೆ)ಗಳ ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

Advertisement

ಪ್ರತೀ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿರುವ ಶಾಲೆಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಈಗಾಗಲೇ ಅಪ್‌ಲೋಡ್‌ ಮಾಡಲಾಗಿದೆ.

ಮಕ್ಕಳನ್ನು ಶಾಲೆಗೆ ಸೇರಿಸುವ ಮುಂಚಿತವಾಗಿ ಈ ಪಟ್ಟಿಯನ್ನು ಪರಿಶೀಲಿಸುವಂತೆ ಶಿಕ್ಷಣ ಇಲಾಖೆ ಪಾಲಕರಲ್ಲಿ ಮನವಿ ಮಾಡಿದೆ. ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿರುವ ಮಾಹಿತಿಯನ್ನು ಕ್ರೋಡೀಕರಿಸಿರುವ ಶಿಕ್ಷಣ ಇಲಾಖೆಯು ತನ್ನ ವೆಬ್‌ಸೈಟ್‌ https://schooleducation.karnataka.gov.in/ ನಲ್ಲಿ ಅಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸಿದೆ.

ಕ್ಯಾಪಿಟೇಷನ್‌ ಶುಲ್ಕ ಪಡೆಯಲು ಅವಕಾಶವಿಲ್ಲ
ಬೆಂಗಳೂರು: ಖಾಸಗಿ ಅನುದಾನ ರಹಿತ ಶಾಲೆಗಳು ತಾವು ನಿಗದಿಪಡಿಸಿದ ಶುಲ್ಕದ ವಿವರವನ್ನು ಬಹಿರಂಗ ಪಡಿಸಬೇಕು ಮತ್ತು ಕ್ಯಾಪಿಟೇಷನ್‌ ಶುಲ್ಕ ಪಡೆಯಲು ಅವಕಾಶವಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆ-2009ರಡಿ ಎಲ್ಲ ಖಾಸಗಿ ಶಾಲೆಗಳು ತಾವು ವಿಧಿಸುವ ಶುಲ್ಕದ ಮಾಹಿತಿಯನ್ನು ತಮ್ಮ ಶಾಲಾ ಜಾಲತಾಣದಲ್ಲಿ, ಶಾಲಾ ಸೂಚನ ಫ‌ಲಕದಲ್ಲಿ ಮತ್ತು ಇಲಾಖಾ ಜಾಲತಾಣದಲ್ಲಿ ಪ್ರಕಟಿಸಬೇಕೆಂದು ಸೂಚಿಸಲಾಗಿದೆ. ಅದೇ ರೀತಿ ಶಿಕ್ಷಣ ಹಕ್ಕು ಕಾಯ್ದೆಯಡಿ ಕ್ಯಾಪಿಟೇಷನ್‌ ಶುಲ್ಕ ವಿಧಿಸಲು ಅವಕಾಶವಿಲ್ಲ. ಶಾಲೆ ಅಧಿಸೂಚಿಸಿದ ಶುಲ್ಕವನ್ನು ಮಾತ್ರ ಸಂಗ್ರಹಿಸಬೇಕೇ ಹೊರತು ಇನ್ಯಾವುದೇ ಮಾದರಿಯಲ್ಲಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಹೇಳಿದೆ.

Advertisement

ಸಿಇಟಿಗೆ ಅಂಕ ದಾಖಲಿಸಲು ಮೇ 25ರವರೆಗೆ ಅವಕಾಶ
ಬೆಂಗಳೂರು: ಸಿಬಿಎಸ್‌ಇ, ಸಿಐಎಸ್‌ಸಿಇ, ಐಜಿಸಿಎಸ್‌ಇ ಪಠ್ಯಕ್ರಮ ಸೇರಿದಂತೆ ರಾಜ್ಯ ಪಠ್ಯಕ್ರಮ ಹೊರತು ಪಡಿಸಿ ಮತ್ತಿತ್ತರ ಬೋರ್ಡ್‌ಗಳಲ್ಲಿ ದ್ವಿತೀಯ ಪಿಯು ಅಥವಾ ಟೆನ್‌ ಪ್ಲಸ್‌ ಟು ಓದಿರುವ ವಿದ್ಯಾರ್ಥಿಗಳು ತಮ್ಮ ಹನ್ನೆರಡನೇ ತರಗತಿಯ ಅಂಕಗಳನ್ನು ಸಿಇಟಿ ರ್‍ಯಾಂಕಿಂಗ್‌ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಗೆ ಸಲ್ಲಿಸಲು ಮೇ 25ರ ಸಂಜೆ 5.30ರ ವರೆಗೆ ಸಮಯಾವಕಾಶ ನೀಡಲಾಗಿದೆ. ಈ ಹಿಂದೆ ಮೇ 20ರೊಳಗೆ ಅಂಕ ದಾಖಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಇದೀಗ ಗಡುವು ವಿಸ್ತರಿಸಲಾಗಿದೆ. ಮೇ 23 ಸಂಜೆ ನಾಲ್ಕು ಗಂಟೆಯಿಂದ ಮೇ 25ರ ಸಂಜೆ 5.30ರ ವರೆಗೆ ಅಂಕಗಳನ್ನು ಕೆಇಎ ಪೊರ್ಟಲ್‌ನಲ್ಲಿ ದಾಖಲಿಸಬಹುದು ಎಂದು ಕೆಇಎ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next