ಆಮ್‌ರೋಹಾ, ಉತ್ತರ ಪ್ರದೇಶ : “ದಯವಿಟ್ಟು ನನ್ನನ್ನು ಕೊಲ್ಲಬೇಡಿ; ನಾನಿನ್ನು ಯಾವುದೇ ಅಪರಾಧ ಮಾಡುವುದಿಲ್ಲ’ ಎಂಬ ಬರಹವಿರುವ ಫಲಕವನ್ನು ತನ್ನ ಕುತ್ತಿಗೆಗೆ ನೇತು ಹಾಕಿಕೊಂಡು, ಮೋಸ್ಟ್ ವಾಂಟೆಡ್ ಕ್ರಿಮಿನಲ್ ಫೈಜಾನ್ ಅಹ್ಮದ್ ಅಲಿಯಾಸ್ ಖನ್ನಾ ಎಂಬ ಪಾತಕಿಯು ಉತ್ತರ ಪ್ರದೇಶದ ಆಮ್‌ರೋಹಾ ಜಿಲ್ಲೆಯಲ್ಲಿ, ಅಪ್ಪಟ ಸಿನಿಮಾ ಮಾದರಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಆತನ ತಲೆಗೆ 12,000 ರೂ. ಇನಾಮನ್ನು ಪೊಲೀಸರು ಈ ಹಿಂದೆ ಘೋಷಿಸಿದ್ದರು.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ, ನಖಾಸಾ ಪೊಲೀಸ್ ಠಾಣೆಗೆ ಒಳಪಡುವ, ದೀಪ್‌ಸರಾಯ್ ಗ್ರಾಮದ ನಿವಾಸಿಯಾಗಿರುವ ಪಾತಕಿ ಫೈಜಾನ್ ಅಹ್ಮದ್ “ನನ್ನನ್ನು ದಯವಿಟ್ಟು ಕೊಲ್ಲಬೇಡಿ’ ಎಂದು ಯಾಚಿಸುವ ಬರಹದ ಫಲಕವನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಆನ್ರೋಹಾ ಎಸ್‌ಪಿ ಅವರ ಕಾರ್ಯಾಲಯಕ್ಕೆ ನಿನ್ನೆ ಬುಧವಾರ ಬಂದು ಶರಣಾಗಿದ್ದಾನೆ ಎಂದು ಎಎನ್‌ಐ ವರದಿ ಮಾಡಿದೆ.
ಕೊಲೆ ಮತ್ತು ದರೋಡೆ ಯತ್ನ ಸೇರಿದಂತೆ ಹಲವಾರು ಅಪರಾಧಗಳಲ್ಲಿ ಆನ್ರೋಹಾ ಪೊಲೀಸರಿಗೆ ಬೇಕಾದವನಾಗಿದ್ದ ಫೈಜಾನ್ ಅಹ್ಮದ್ 2014ರಿಂದಲೂ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ.
ಪೊಲೀಸರು ತನ್ನನ್ನು ಎನ್‌ಕೌಂಟರ್‌ನಲ್ಲಿ ಮಟಾಶ್ ಮಾಡಬಹುದೆಂಬ ಭಯದಲ್ಲಿ ಆತ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿ ಪೊಲೀಸರಿಗೆ ಶರಣಾಗುವ ತನ್ನ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದ. ಅಂತೆಯೇ ಆತ “ನಾನಿನ್ನು ಪುನಃ ಅಪರಾಧ ಮಾಡೋದಿಲ್ಲ; ದಯವಿಟ್ಟು ನನ್ನನ್ನು ಕೊಲ್ಲಬೇಡಿ’ ಎಂಬ ಬರಹದ ಫಲಕವನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಎಸ್‌ಪಿ ಅವರ ಕಚೇರಿಗೆ ಹೋಗಿ ಶರಣಾದ.
ಪೊಲೀಸರು ಆತನನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡು ಜೈಲಿಗೆ ಕಳುಹಿಸಿದರು.