Advertisement

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

09:40 PM Apr 08, 2024 | Team Udayavani |

ಕಾರು ಢಿಕ್ಕಿ: ಗಾಯಾಳು ಸಾವು
ಪೆರ್ಲ: ಅಡ್ಕಸ್ಥಳ ಕೋಡಿಲ ಬಾಳೆಮೂಲೆಯಲ್ಲಿ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್‌ ಸವಾರ ಕಾಟುಕುಕ್ಕೆ ಮೊಗರು ನಿವಾಸಿ ಅಮ್ಮು ನಾಯ್ಕ ಅವರ ಪುತ್ರ ಸೀತಾರಾಮ (49) ಸಾವಿಗೀಡಾದರು.

Advertisement

ಎ. 7ರಂದು ಸಂಜೆ 4.30ಕ್ಕೆ ಕಾರು ಢಿಕ್ಕಿ ಹೊಡೆದು ಸೀತಾರಾಮ ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಸಾವಿಗೀಡಾದರು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳವುಗೈದಿದ್ದ ಸ್ಕೂಟರ್‌ ಅಪಘಾತ: ಬಂಧನ
ಕಾಸರಗೋಡು: ಕಳವುಗೈದು ಸಾಗಿಸುತ್ತಿದ್ದ ಸ್ಕೂಟರ್‌ ಅಪಘಾತಕ್ಕೀಡಾಗಿ, ಅದನ್ನು ಚಲಾಯಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೆರಿಂಙೊಮ್‌ ಕೊರಂಙಡ್‌ ನಿವಾಸಿ ಫಾಸಿಲ್‌ (26)ನನ್ನು ಬಂಧಿಸಲಾಗಿದೆ.

ತೃಕ್ಕರಿಪುರ ಒಳವರದ ಕೆ. ವಿಜಯನ್‌ ಅವರ ಸ್ಕೂಟರನ್ನು ತೃಕ್ಕರಿಪುರದ ಕೆ.ವಿ. ಹಾರ್ಡ್‌ವೇರ್ಸ್‌ ಪರಿಸರದಿಂದ ಕಳೆದ ಡಿಸೆಂಬರ್‌ ತಿಂಗಳಲ್ಲಿ ಕಳವು ನಡೆಸಲಾಗಿತ್ತು. ಈ ಬಗ್ಗೆ ನೀಡಲಾದ ದೂರಿನಂತೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಮಲಪ್ಪುರಂ ಕಲ್ಲಂಜೇರಿಯಲ್ಲಿ ಈ ಸ್ಕೂಟರ್‌ ಅಪಘಾತಕ್ಕೀಡಾಗಿತ್ತು. ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಸ್ಕೂಟರ್‌ ಕಳವಾದ ವಾಹನವಾಗಿತ್ತೆಂದು ತಿಳಿದುಬಂದಿತ್ತು. ಅದರಂತೆ ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮನೆಯಿಂದ ಕಳವು: 9 ಬೆರಳ ಗುರುತು ಪತ್ತೆ
ಕುಂಬಳೆ: ಆರಿಕ್ಕಾಡಿ ನಿವಾಸಿ, ಕೊಲ್ಲಿ ಉದ್ಯೋಗಿ ಸಿದ್ದಿಕ್‌ ಅವರ ಮನೆಯಿಂದ ಐದು ಪವನ್‌ ಚಿನ್ನಾಭರಣ ಹಾಗು 10 ಸಾವಿರ ರೂ.ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ಬೆರಳ ಗುರುತು ತಜ್ಞರು 9 ಬೆರಳ ಗುರುತು ಪತ್ತೆ ಹಚ್ಚಿದ್ದಾರೆ. ಅವುಗಳ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಎಟಿಎಂ ಹಣ ದರೋಡೆ: ಕಾಸರಗೋಡು
ರೈಲು ನಿಲ್ದಾಣದಲ್ಲಿ ಆರೋಪಿಗಳ ದೃಶ್ಯ ಪತ್ತೆ
ಕಾಸರಗೋಡು: ಮಾರ್ಚ್‌ 27ರಂದು ಅಪರಾಹ್ನ ಉಪ್ಪಳ ಪೇಟೆಯಲ್ಲಿ ಎಟಿಎಂಗೆ ಹಣ ತುಂಬಿಸಲೆಂದು ಬಂದ ಸುಮಾರು 50 ಲಕ್ಷ ರೂ. ನಗದು ದರೋಡೆ ಮಾಡಿದ ಪ್ರಕರಣದ ಆರೋಪಿಗಳ ಸ್ಪಷ್ಟ ದೃಶ್ಯ ಕಾಸರಗೋಡು ರೈಲು ನಿಲ್ದಾಣದ ಸಿಸಿ ಕೆಮರಾದಿಂದ ಪೊಲೀಸರಿಗೆ ಲಭಿಸಿದೆ.

ದರೋಡೆ ನಡೆಸಿದ ಬಳಿಕ ಆರೋಪಿಗಳು ಕಾಸರಗೋಡು ರೈಲು ನಿಲ್ದಾಣಕ್ಕೆ ಬಂದಿದ್ದರು. ಆ ವೇಳೆ ರೈಲು ನಿಲ್ದಾಣದ ಸಿಸಿ ಟಿವಿ ಕೆಮರಾದಲ್ಲಿ ಅವರ ದೃಶ್ಯ ಮೂಡಿತ್ತು. ಆದರೆ ಈ ನಿಲ್ದಾಣದಿಂದ ಆರೋಪಿಗಳು ಎಲ್ಲಿಗೆ ಹೋಗಿದ್ದಾರೆಂಬ ದೃಶ್ಯ ಸಿಸಿ ಟಿವಿಯಲ್ಲಿ ಕಂಡುಬಂದಿಲ್ಲ.

ಅಕ್ರಮ ಸ್ಫೋಟಕ ವಸ್ತುಗಳು ಪತ್ತೆ: ಇಬ್ಬರ ಬಂಧನ
ಮಂಜೇಶ್ವರ: ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಕಗ್ಗಲ್ಲಿನ ಕೋರೆಯಲ್ಲಿ ಸಂಗ್ರಹಿಸಡಲಾಗಿದ್ದ ಸ್ಫೋಟಕ ವಸ್ತುಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಕೋರೆಯ ಕಾರ್ಮಿಕರಾದ ಝಾರ್ಖಂಡ್‌ ಬೆಲ್ಪಹಾದಿ ನಿವಾಸಿ ಸುಜಿತ್‌ ತಿಗ್ಗ (30) ಮತ್ತು ಮಲಪ್ಪುರಂ ಚೆಲೇಪ್ರ ಚಳಿಪ್ಪಾಡಂ ಪಳ್ಳಿಪರಂಬ್‌ ದಾರೂಲ್‌ ನಿಜಾತ್‌ ಹೌಸ್‌ನ ಅಬ್ದುಲ್‌ ಖಾದರ್‌ (29)ನನ್ನು ಪೊಲೀಸರು ಬಂಧಿಸಿದ್ದಾರೆ.

ಪೈವಳಿಕೆ ಪಂಚಾಯತ್‌ನ ದೈಗೋಳಿಯಲ್ಲಿ ಕಾರ್ಯಾಚರಿಸುವ ಕಗ್ಗಲ್ಲಿನ ಕೋರೆಯಿಂದ 33 ಜಿಲ್ಲಾಸ್ಟಿನ್‌ ಸ್ಟಿಕ್‌, 25 ಇಲೆಕ್ಟ್ರಿಕಲ್‌ ಡಿಟಾನೇಟರ್‌, ಸ್ವಿಚ್‌ ಬೋರ್ಡ್‌, ಕಂಪ್ರಸ್ಸರ್‌ ಅನ್ನು ಪೊಲೀಸರು ವಶಪಡಿಸಿದ್ದಾರೆ. ಕೋರೆಯ ಮಾಲಕ ಹಾಗು ನಡೆಸುತ್ತಿರುವ ವ್ಯಕ್ತಿಯ ಬಗ್ಗೆ ತನಿಖೆ ನಡೆಯುತ್ತಿದೆ. ಕಣ್ಣೂರಿನ ಪಾನೂರಿನಲ್ಲಿ ಕೆಲವು ದಿನಗಳ ಹಿಂದೆ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವ್ಯಾಪಕವಾಗಿ ತಪಾಸಣೆ ನಡೆಸುವಂತೆ ಪೊಲೀಸ್‌ ವರಿಷ್ಠಾಧಿಕಾರಿಗಳು ಆದೇಶಿಸಿದ್ದರು. ಅದರಂತೆ ಕೋರೆಗೆ ದಾಳಿ ಮಾಡಿ ಸ್ಫೋಟಕ ವಸ್ತುಗಳನ್ನು ವಶಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next