Advertisement

ತಾಯಿ ತುತ್ತಾಗಿ ಆಸ್ಪತ್ರೆಯಲ್ಲಿದ್ದಾರೆಂದು ನಂಬಿಸಿ ಜನರಿಂದ ದುಡ್ಡು ಪಡೆಯುವವರು ಸಕ್ರಿಯ

12:49 AM Oct 20, 2022 | Team Udayavani |

ಮಲ್ಪೆ: ತಮ್ಮ ಮನೆಯವರು ಕಾಯಿಲೆಗೆ ತುತ್ತಾಗಿದ್ದಾರೆ. ಚಿಕಿತ್ಸೆಗೆ ಹಣ ಇಲ್ಲ, ಹಣ ಸಂಗ್ರಹಿಸಿ ಕೊಡುತ್ತೇನೆಂದು ಬೆಂಗಳೂರಿನಿದ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದ ವ್ಯಕ್ತಿ ಈಗ ನಾಪತ್ತೆಯಾಗಿದ್ದಾನೆ. ಹೀಗೆ ಮಾತಿನಲ್ಲೇ ಮರಳು ಮಾಡುವ ತಂಡವೊಂದು ಹಲವರನ್ನು ತಮ್ಮ ಕಟ್ಟುಕತೆಗಳಿಂದಲೇ ನಂಬಿಸಿ ಹಣ ಪೀಕಿಸಿ ವಂಚಿಸಿದ ಘಟನೆ ಮಲ್ಪೆ ಬಂದರು ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

Advertisement

ಮಗುವಿನ ಜತೆಯಲ್ಲಿ ಗಂಡ-ಹೆಂಡತಿ ಎಂದು ಹೇಳಿಕೊಂಡು ಮಲ್ಪೆಗೆ ಬಂದಿದ್ದ ಈ ತಂಡದವರು ಆಂಧ್ರಪ್ರದೇಶದವರು ಎಂದು ಹೇಳಲಾಗುತ್ತಿದೆ. ಬಂದರಿನಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರನ್ನು ಭೇಟಿಯಾಗಿ ಅವರಲ್ಲಿ ತಮ್ಮ ವಿಚಾರವನ್ನು ಹೇಳಿಕೊಂಡಿದ್ದರು. ನಮಗೆ ಬಂಧು-ಬಳಗ ಯಾರೂ ಇಲ್ಲ, ತಾಯಿ ಆಸ್ಪತ್ರೆಯಲ್ಲಿದ್ದಾರೆ. ತಮ್ಮ ಕೈಲಾದ ನೆರವನ್ನು ನೀಡಿ ಸಹಕರಿಸುವಂತೆ ವಿನಂತಿಸಿದ್ದರು. ಅವರು ಸುಮಾರು 2 ಸಾವಿರ ರೂಪಾಯಿ ಸಂಗ್ರಹಿಸಿ ಅವರಿಗೆ ನೀಡಿ ರೈಲು ನಿಲ್ದಾಣಕ್ಕೆ ಕಳುಹಿಸಿ ಕೊಟ್ಟಿದ್ದರು. ಮಲ್ಪೆ ಬಂದರಿನಲ್ಲಿ ನಾನಾ ಕಥೆ ಕಟ್ಟಿದ ಈ ತಂಡ ಬೇರೆ ಬೇರೆ ಜನರಿಂದ ಸಾವಿರಾರು ರೂ. ಪಡೆದುಕೊಂಡಿದೆ ಎನ್ನಲಾಗುತ್ತಿದೆ.

ಇಂತಹ ವಂಚಕರ ತಂಡ ಸಕ್ರಿಯವಾಗಿವೆ – ಎಚ್ಚರ
ಮಹಿಳೆ, ಮಕ್ಕಳನ್ನು ಜತೆಗೆ ಕರೆದುಕೊಂಡು ಬಂದು ಜನರನ್ನು ಯಾಮಾರಿಸಿ ದುಡ್ಡು ಪಡೆಯುವ ತಂಡ ಕರಾವಳಿಯಲ್ಲಿ ಮತ್ತೆ ಸಕ್ರಿಯವಾಗುತ್ತಿದೆ. ಈ ಹಿಂದೆ ಹಲವೆಡೆಗಳಲ್ಲಿ ಹೆಚ್ಚಾಗಿ ರಾತ್ರಿ ಹೊತ್ತು ಜನರಲ್ಲಿಗೆ ಬಂದು ಯಾವುದಾದರೊಂದು ಕಷ್ಟಗಳನ್ನು (ಕಟ್ಟುಕತೆ) ಹೇಳಿ ಅವರು ಹಣ ನೀಡುವಲ್ಲಿಯವರೆಗೆ ತಮ್ಮ ಗೋಳನ್ನು ಮುಂದುವರಿಸುತ್ತಲೇ ಇರುತ್ತಾರೆ. ಇಂತಹವರ ಬಗ್ಗೆ ಪೊಲೀಸರೂ ನಿಗಾ ವಹಿಸಬೇಕಿದೆ. ಜನರು ಕೂಡ ಮಹಿಳೆ, ಮಕ್ಕಳನ್ನು ಮುಂದೆ ಬಿಟ್ಟು ಕಷ್ಟದ ಕಥೆ-ವ್ಯಥೆಗಳನ್ನು ಹೇಳುವವರ ಬಗ್ಗೆ ಎಚ್ಚರ ವಹಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next