Advertisement

Kasaragodu ಭಾಗದ ಅಪರಾಧ ಸುದ್ದಿಗಳು

08:50 PM Jun 11, 2024 | Team Udayavani |

ಬೈಕ್‌ ಢಿಕ್ಕಿ : ಪಾದಚಾರಿ ಸಾವು

Advertisement

ಕಾಸರಗೋಡು: ಚೌಕಿಯಿಂದ ಕಂಬಾರಿಗೆ ಜೂ. 10ರಂದು ರಾತ್ರಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬೈಕ್‌ ಢಿಕ್ಕಿ ಹೊಡೆದು ಕೂಡ್ಲು ಚೌಕಿ ಕುನ್ನಿಲ್‌ ಕೆ.ಕೆ. ಪುರಂ ಹೌಸ್‌ನ ನಿವಾಸಿ ಲಾಟರಿ ಟಿಕೆಟ್‌ ಮಾರಾಟಗಾರ ವಿಜಯನ್‌ (59) ಸಾವಿಗೀಡಾಗಿದ್ದಾರೆ.

ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬೈಕ್‌ ವಶಪಡಿಸಿಕೊಂಡ ಪೊಲೀಸರು ಬೈಕ್‌ ಚಲಾಯಿಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸಿದ್ದಾರೆ.

———————————————————————————-

ಪ್ರಚೋದನಕಾರಿ ಸಂದೇಶ : ಕೇಸು ದಾಖಲು

Advertisement

ಕಾಸರಗೋಡು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಸಂದೇಶ ಪ್ರಚಾರ ಮಾಡಿದ ಆರೋಪದಂತೆ ಕಾಸರಗೋಡು ನಗರಠಾಣೆ ಪೊಲೀಸರು ಸ್ವತಃ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಸೂರ್ಲಿನ ಮಸೀದಿಯ ಉಸ್ತಾದ್‌ ಆಗಿದ್ದ ರಿಯಾಸ್‌ ಮೌಲವಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಆರೋಪಿಯ ಫೋಟೋ ಇರುವ ಐಡಿಯಿಂದ ಸಂದೇಶ ಬಂದಿದೆ. ಈ ಪ್ರಕರಣದಲ್ಲಿ ಅಜ್ಞಾತ ವ್ಯಕ್ತಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಗಂಟೆಗಳ ಕಾಲ ತನಿಖೆಗೊಳಪಡಿಸಿದ್ದು, ಈತ ಸಂದೇಶ ಕಳುಹಿಸಿದ್ದಾನೆಂಬುದಕ್ಕೆ ಯಾವುದೇ ಸಾಕ್ಷÂಗಳು ಲಭಿಸಿಲ್ಲ. ತನ್ನ ಹೆಸರಿನಲ್ಲಿ ಯಾರೋ ಸಂದೇಶ ಕಳುಹಿಸಿದ್ದಾರೆಂದು ಈತ ಪೊಲೀಸರಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸಮಗ್ರ ತನಿಖೆ ನಡೆಸಲು ನಗರ ಠಾಣೆ ಪೊಲೀಸರು ಸೈಬರ್‌ ಸೆಲ್‌ನ ನೆರವು ಯಾಚಿಸಿದ್ದಾರೆ.

———————————————————————————-

ಬಸ್‌ ಢಿಕ್ಕಿ : ಮಹಿಳೆ ಸಾವು

ಕಾಸರಗೋಡು: ಚೆರ್ವತ್ತೂರು ಬಸ್‌ ನಿಲ್ದಾಣದಲ್ಲಿ ಬಸ್‌ ಢಿಕ್ಕಿ ಹೊಡೆದು ಪಡನ್ನಕ್ಕಾಡ್‌ ಒಳಿಂಞವಳಪ್‌ ಖಲೀಲ್‌ ಮಂಜಿಲ್‌ ನಿವಾಸಿ ಕೆ.ಫೌಸಿಯಾ (50) ಸಾವಿಗೀಡಾದರು.

ಜತೆಯಲ್ಲಿದ್ದ ಸಹೋದರನ ಪುತ್ರಿ 10ರ ಹರೆಯದ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

———————————————————————————-

ವ್ಯಾಪಾರಿಯ ನಿಗೂಢ ಸಾವು; ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭ್ಯ

ಮಂಜೇಶ್ವರ: ವರ್ಕಾಡಿ ಮಜೀರ್‌ಪಳ್ಳದಲ್ಲಿ ನಿಗೂಢವಾಗಿ ಸಾವಿಗೀಡಾದ ಗೂಡಂಗಡಿ ವ್ಯಾಪಾರಿ ಮಜೀರ್‌ಪಳ್ಳ ಬದಿಯಾರಿನ ಅಶ್ರಫ್‌ (44) ಅವರ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭಿಸಿದೆ.

ಈ ಪರೀಕ್ಷೆಯಲ್ಲಿ ಸಾವಿನ ನಿಗೂಢತೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಮರಣೋತ್ತರ ಪರೀಕ್ಷೆಯ ರಾಸಾಯನಿಕ ಫಲಿತಾಂಶದಿಂದಷ್ಟೇ ಸಾವಿಗೆ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

———————————————————————————–

ಕಸಾಯಿಖಾನೆಗೆ ತಂದ ಕೋಣ ಓಡಿ ಬಿದ್ದದ್ದು ಬಾವಿಗೆ: ಅಗ್ನಿಶಾಮಕದಿಂದ ರಕ್ಷಣೆ

ಕಾಸರಗೋಡು: ಕಸಾಯಿಖಾನೆಗೆ ತಂದ ಕೋಣವೊಂದು ಹಗ್ಗ ತುಂಡರಿಸಿ ಓಡಿ 25 ಅಡಿ ಆಳದ ಬಾವಿಗೆ ಬಿದ್ದಿದ್ದು, ಕೂಡಲೇ ಅಗ್ನಿಶಾಮಕ ದಳ ಕೋಣವನ್ನು ಮೇಲಕ್ಕೆತ್ತಿ ರಕ್ಷಿಸಿದೆ.

ವಿದ್ಯಾನಗರ ಪಡುವಡ್ಕದಲ್ಲಿ ಈ ಘಟನೆ ನಡೆದಿದೆ.

ಅಲ್ಲಿನ ಹಮೀದ್‌ ಅವರ ಹಿತ್ತಿಲಿನಲ್ಲಿರುವ ಆವರಣ ಗೋಡೆಯುಳ್ಳ ಬಾವಿಗೆ ಕೋಣ ಬಿದ್ದಿದೆ. ಕೋಣ ತಂದಿದ್ದ ಅಬೂಬಕರ್‌ ಹಾಗು ಶಾಬಿರ್‌ ನೀಡಿದ ಮಾಹಿತಿಯಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಕೋಣವನ್ನು ಮೇಲಕ್ಕೆತ್ತಿ ರಕ್ಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next