Advertisement

Kasaragod ಭಾಗದ ಅಪರಾಧ ಸುದ್ದಿಗಳು: ಬಾಲಕನಿಗೆ ಕಿರುಕುಳ : ಫೋಕ್ಸೋ ಕೇಸು ದಾಖಲು

09:16 PM Jan 14, 2025 | Team Udayavani |

ಕಾಸರಗೋಡು: ತಾಯಿ ಜತೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ 16ರ ಹರೆಯದ ಬಾಲಕನಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಸ್‌ ಕಂಡಕ್ಟರ್‌ ರಾಜೇಶ್‌ ವಿರುದ್ಧ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

2024ರ ಮೇ ತಿಂಗಳಲ್ಲಿ ನೀಲೇಶ್ವರ ಬಸ್‌ ನಿಲ್ದಾಣದಿಂದ ತಾಯಿ ಹಾಗೂ ಪುತ್ರ ಕಣ್ಣೂರಿಗೆ ತೆರಳುವ ಬಸ್‌ ಹತ್ತಿದ್ದರು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಕಿರುಕುಳ ನೀಡಿದ್ದಾಗಿ ಬಾಲಕ ಕೌನ್ಸಿಲಿಂಗ್‌ ಸಂದರ್ಭದಲ್ಲಿ ಹೇಳಿದ ಹಿನ್ನೆಲೆಯಲ್ಲಿ ಕೇಸು ದಾಖಲಿಸಲಾಗಿದೆ.

ನೇಣು ಬಿಗಿದು ಆತ್ಮಹತ್ಯೆ
ಕಾಸರಗೋಡು: ಅಂಬಲತ್ತರ ಕುಂಬಳ ಮೀಂಗೋತ್ತ್ ಪೊನ್ನಪ್ಪನ್‌ ಅವರ ಪುತ್ರ ಸಜುಲಾಲ್‌(38) ನೇಣು ಬಿಗಿದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪತ್ನಿ ಸಿಟ್ಟುಗೊಂಡು ತೆರಳಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಅಂಬಲತ್ತರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಿರುಕುಳ ಪ್ರಕರಣ: ಬಂಧನ
ಕಾಸರಗೋಡು: ಆಸ್ಪತ್ರೆ ನೌಕರೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಚೆರ್ವತ್ತೂರು ಪಯ್ಯಂಗಿ ನಿವಾಸಿ ನೌಫಲ್‌ (30)ನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಕಿರುಕುಳ ನೀಡಿದ್ದಾಗಿ ಯುವತಿ ನೀಡಿದ ದೂರಿನಂತೆ ಬಂಧಿಸಲಾಗಿದೆ.

ಪೊಲೀಸ್‌ ಕೈ ತಿರುವಿ ಹಲ್ಲೆ : ಬಂಧನ
ಕಾಸರಗೋಡು: ಪೊಲೀಸ್‌ ಠಾಣೆಗೆ ನುಗ್ಗಿ ಠಾಣೆಯ ಪೊಲೀಸ್‌ ರಂಜಿತ್‌ ಅವರ ಕೈಹಿಡಿದೆಳೆದು ತಿರುವಿದ ಪ್ರಕರಣಕ್ಕೆ ಸಂಬಂಧಿಸಿ ಅಂಬಲತ್ತರ ತಾಯನ್ನೂರಿನ ಮನೋಜ್‌ ತೋಮಸ್‌(44)ನನ್ನು ಪೊಲೀಸರು ಬಂಧಿಸಿದ್ದಾರೆ. ಅನುಮತಿಯಿಲ್ಲದೆ ಠಾಣೆಗೆ ನುಗ್ಗಿ ಕೈತಿರುವಿ ಹಲ್ಲೆ ಮಾಡಿದ್ದಾಗಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿತ್ತು.

Advertisement

ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಮದ್ಯ ಸಹಿತ ಬಂಧನ
ಕಾಸರಗೋಡು: ಅಡ್ಕತ್ತಬೈಲು ಪರಿಸರದಲ್ಲಿ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 180 ಎಂ.ಎಲ್‌.ನ 144 ಸ್ಯಾಚೆಟ್‌ ಮದ್ಯ (25.92 ಲೀಟರ್‌) ವಶಪಡಿಸಿಕೊಂಡು ಈ ಸಂಬಂಧ ಅಡ್ಕತ್ತಬೈಲು ಅರ್ಜಾಲು ಹೌಸ್‌ನ ಅನಿಲ್‌ ಕುಮಾರ್‌(36)ನನ್ನು ಬಂಧಿಸಲಾಗಿದೆ. ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.

ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ: ಐವರಿಗೆ ಗಾಯ
ಕಾಸರಗೋಡು: ಕೊಚ್ಚಿಯ ಕೆಳ ಮುಳ್ಳೇರಿಯ ಅಪಾರ್ಟ್‌ಮೆಂಟ್‌ನಲ್ಲಿ ಇಂಟರ್ನ್ಶಿಪ್‌ಗೆ ತಲುಪಿದ ಮಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ನಡೆದಿದ್ದು, ಐವರು ಗಾಯಗೊಂಡಿದ್ದಾರೆ. ಕಾಸರಗೋಡು ನಿವಾಸಿಗಳಾದ ಶಾಸಿಲ್‌, ಅಜಿನಾಸ್‌, ಸೈಫುದ್ದೀನ್‌, ಮಿಶಾಲ್‌ ಮತ್ತು ಅಪ್ಸಲ್‌ಗಾಯಗೊಂಡಿದ್ದಾರೆ.

ಸೀಫೋರ್ಟ್‌ ಏರ್‌ಪೋರ್ಟ್‌ ರಸ್ತೆ ಸಮೀಪ ಅಪ್ಸಲ್‌ ಅವರ ಮಾಲಕತ್ವದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಹೊಡೆದಾಟ ನಡೆದಿದೆ. ದೇವನಂದ ಹಾಗು ನಾಲ್ವರು ಸೇರಿ ಹಲ್ಲೆ ಮಾಡಿದ್ದಾಗಿ ನೀಡಿದ ದೂರಿನಂತೆ ಪೊಲೀಸರು ಹತ್ಯೆ ಯತ್ನ ಕೇಸು ದಾಖಲಿಸಿದ್ದಾರೆ.

ಬಾಡಿಗೆ ಕಾರಿನಲ್ಲಿ ಎಂಡಿಎಂಎ ಸಾಗಾಟ
ಬೋವಿಕ್ಕಾನ: ಬೋವಿಕ್ಕಾನ-ಕುತ್ತಿಕ್ಕೋಲ್‌ ರಸ್ತೆಯ ಮಂಜಕ್ಕಲ್‌ನಿಂದ ಆದೂರು ಪೊಲೀಸರು ವಶಪಡಿಸಿಕೊಂಡ 100 ಗ್ರಾಂ ಎಂಡಿಎಂಎಯನ್ನು ಬೆಂಗಳೂರಿನಿಂದ ಸಾಗಿಸಲಾಗಿದೆ ಎಂದು ತನಿಖೆಯಿಂದ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಸಾಗಿಸಲು ಬಾಡಿಗೆ ಕಾರನ್ನು ಬಳಸಲಾಗಿದ್ದು, ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಕಾಸರಗೋಡು ಕೋಟೆಕಣಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪಿ.ಎಂ. ಶಾನವಾಸ್‌ (42), ಆತನ ಪತ್ನಿ ಶರೀಫಾ (40), ಶಾನವಾಸ್‌ನ ಸಹೋದರಿ ಚಟ್ಟಂಚಾಲ್‌ನ ಎಂ.ಎಫ್‌. ಮಂಜಿಲ್‌ನ ಪಿ.ಎಂ. ಶುಹೈಬ (35) ಮತ್ತು ಮುಳಿಯಾರು ಮಾಸ್ತಿಕುಂಡಿನ ಎಂ.ಕೆ. ಮುಹಮ್ಮದ್‌ ಸಹದ್‌(26)ನನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಎಂಡಿಎಂಎಗೆ ಸುಮಾರು 4 ಲಕ್ಷ ರೂ. ಮೌಲ್ಯ ಎಂದು ಅಂದಾಜಿಸಲಾಗಿದೆ.

ಕಾಡುಹಂದಿ ಉಪಟಳ: ವ್ಯಾಪಕ ಕೃಷಿ ನಾಶ
ಬೋವಿಕ್ಕಾನ: ಮುಳಿಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪ್ರದೇಶದಲ್ಲಿ ಕಾಡುಹಂದಿಗಳ ಉಪಟಳದಿಂದ ಜನರು ತೀವ್ರ ಆತಂಕಕ್ಕೀಡಾಗಿದ್ದು, ವ್ಯಾಪಕ ಕೃಷಿ ನಾಶವಾಗಿದೆ. ಬಾಳೆ, ಮರಗೆಣಸು, ಸುವರ್ಣ ಗೆಡ್ಡೆ, ತೆಂಗಿನ ಸಸಿಗಳನ್ನು ನಾಶಗೊಳಿಸುತ್ತಿವೆ. ಆಲೂರು ಪ್ರದೇಶದಲ್ಲಂತೂ ಅತ್ಯಧಿಕ ಕೃಷಿ ನಾಶವಾಗಿದೆ. ಕಳೆದ ಒಂದು ವಾರದಿಂದ ಕಾಡು ಹಂದಿಗಳು ತೋಟಗಳಿಗೆ ನುಗ್ಗಿ ಕೃಷಿ ನಾಶಗೊಳಿಸುತ್ತಿದೆ ಎಂದು ಕೃಷಿಕರು ತಿಳಿಸಿದ್ದಾರೆ.

ಗಡಿ ಪ್ರದೇಶಗಳಲ್ಲಿ ವಿಜಿಲೆನ್ಸ್‌ ಕಣ್ಗಾವಲು
ಕಾಸರಗೋಡು: ರಾಜ್ಯದ ಗಡಿ ಪ್ರದೇಶಗಳ ತಪಾಸಣ ಕೇಂದ್ರಗಳಲ್ಲಿ ಲಂಚ ಹಾಗೂ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅಂತಹ ಎಲ್ಲ ತಪಾಸಣ ಕೇಂದ್ರಗಳಲ್ಲಿ ರಾಜ್ಯ ಜಾಗ್ರತಾ ದಳ (ವಿಜಿಲೆನ್ಸ್‌) ಕಣ್ಗಾವಲು ಇರಿಸಿದೆ. ಅದರಂತೆ ಕೇರಳ-ಕರ್ನಾಟಕ ಮತ್ತು ಕೇರಳ-ತಮಿಳುನಾಡು ಗಡಿಗಳ ತಪಾಸಣ ಕೇಂದ್ರಗಳಲ್ಲಿ ವಿಜಿಲೆನ್ಸ್‌ ತೀವ್ರ ನಿಗಾ ಇರಿಸಿದೆ.

ತಪಾಸಣೆಯ ಕೇಂದ್ರಗಳಿಗೆ ವಿಜಿಲೆನ್ಸ್‌ ದಿಢೀರ್‌ ಮಿಂಚಿನ ದಾಳಿ ಮತ್ತು ತಪಾಸಣೆ ಆರಂಭಿಸಿದೆ. ಶಬರಿಮಲೆ ಮಾಲಾಧಾರಿಗಳಿಂದಲೂ ಕೆಲವು ತಪಾಸಣಾ ಕೇಂದ್ರಗಳಲ್ಲಿ ಲಂಚ ಸ್ವೀಕರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಗಡಿದಾಟಿ ಕೇರಳಕ್ಕೆ ಬರುವ ಸರಕು ಹೇರಿದ ವಾಹನಗಳನ್ನು ತಪಾಸಣ ಕೇಂದ್ರಗಳಲ್ಲಿ ತಪಾಸಣೆಗೈದ ಬಳಿಕ ಕೇರಳಕ್ಕೆ ಬಿಡಲಾಗುತ್ತಿದೆ. ಇಂತಹ ತಪಾಸಣ ಕೇಂದ್ರಗಳಲ್ಲಿ ಲಂಚ ಸ್ವೀಕರಿಸಲಾಗುತ್ತಿದೆ ಎಂಬ ಆರೋಪವಿದೆ.

Advertisement

Udayavani is now on Telegram. Click here to join our channel and stay updated with the latest news.