ನವದೆಹಲಿ: ದೇಶದಲ್ಲಿ 2021ರಲ್ಲಿ ದಾಖಲಾದ ಒಟ್ಟು ಆತ್ಮಹತ್ಯೆ ಪ್ರಕರಣಗಳ ಪೈಕಿ ಕರ್ನಾಟಕವೊಂದರಿಂದಲೇ ಶೇ.8ರಷ್ಟು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ(ಎನ್‌ಸಿಆರ್‌ಬಿ) ವರದಿ ಪ್ರಕಾರ, ಕಳೆದ ವರ್ಷ ರಾಜ್ಯದಲ್ಲಿ ಒಟ್ಟು 13,056 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ದೇಶದ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕವು ಐದನೇ ಸ್ಥಾನದಲ್ಲಿದೆ.
ವೃತ್ತಿ ಸಂಬಂಧಿ ಸಮಸ್ಯೆಗಳು, ಏಕಾಂಗಿತನ, ಅಪರಾಧ, ಕೌಟುಂಬಿಕ ಸಮಸ್ಯೆಗಳು, ಮಾನಸಿಕ ಕಾಯಿಲೆಗಳು, ಮದ್ಯಪಾನ ಸೇರಿದಂತೆ ದುಶ್ಚಟಗಳಿಗೆ ದಾಸರಾಗುವುದು, ಆರ್ಥಿಕ ನಷ್ಟ, ದೀರ್ಘಕಾಲಿಕ ಕಾಯಿಲೆ, ಇವು ದೇಶದಲ್ಲಿ ಆತ್ಮಹತ್ಯೆಗೆ ಪ್ರಮುಖ ಅಂಶಗಳು ಎಂದು ಎನ್‌ಸಿಆರ್‌ಬಿ ಮಾಹಿತಿ ನೀಡಿದೆ.
ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 2021ರಲ್ಲಿ ಮಹಾರಾಷ್ಟ್ರದಲ್ಲಿ 22,207 ಮಂದಿ(ಶೇ. 13.5) ಆತ್ಮಹತ್ಯೆಗೆ ಶರಣಾಗಿದ್ದಾರೆ. ನಂತರದ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 18,925 ಮಂದಿ(ಶೇ. 11.5), ಮಧ್ಯಪ್ರದೇಶದಲ್ಲಿ 14,965 ಮಂದಿ(ಶೇ. 9.1), ಪಶ್ಚಿಮ ಬಂಗಾಳದಲ್ಲಿ 13,500 ಮಂದಿ(ಶೇ.8.2) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇಶದ ಶೇ.50.4ರಷ್ಟು ಆತ್ಮಹತ್ಯೆ ಪ್ರಕರಣಗಳು ಈ ಐದು ರಾಜ್ಯಗಳಲ್ಲಿ ದಾಖಲಾಗಿದ್ದು, ಉಳಿದ 49.6ರಷ್ಟು ಆತ್ಮಹತ್ಯೆ ಪ್ರಕರಣಗಳು ಉಳಿದ 23 ರಾಜ್ಯಗಳಲ್ಲಿ ದಾಖಲಾಗಿವೆ.
ಅಪಘಾತಗಳಲ್ಲಿ 1.73 ಲಕ್ಷ ಮಂದಿ ಸಾವು
2021ರಲ್ಲಿ ದೇಶದಾದ್ಯಂತ ಸಂಭವಿಸಿದ ಸುಮಾರು 4.22 ಲಕ್ಷ ಅಪಘಾತ ಪ್ರಕರಣಗಳಲ್ಲಿ ಒಟ್ಟು 1.73 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಉತ್ತರ ಪ್ರದೇಶದಲ್ಲಿ 24,711 ಮಂದಿ ಮೃತಪಟ್ಟಿದ್ದು, ಮೊದಲನೇ ಸ್ಥಾನದಲ್ಲಿದೆ. ಅಪಘಾತದಿಂದಾಗಿ ತಮಿಳುನಾಡಿನಲ್ಲಿ 16,685 ಮಂದಿ ಸಾವನಪ್ಪಿದ್ದು, ನಂತರದ ಸ್ಥಾನದಲ್ಲಿದೆ. ಎನ್‌ಸಿಆರ್‌ಬಿ ವರದಿ ಪ್ರಕಾರ, 2020ರಲ್ಲಿ ದೇಶದಲ್ಲಿ ಒಟ್ಟು 3,68,828 ಅಪಘಾತ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ಈ ಸಂಖ್ಯೆ ಏರಿಕೆಯಾಗಿದ್ದು, ಒಟ್ಟು 4,22,659 ಅಪಘಾತಗಳು ಸಂಭವಿಸಿವೆ.