Advertisement

ಸಕಲೇಶಪುರ : ಸ್ನೇಹಿತರೊಂದಿಗೆ ಜಲಪಾತದಲ್ಲಿ ಈಜಲು ಹೋದ ಯುವಕ ಸಾವು

06:59 PM Oct 02, 2021 | Team Udayavani |

ಸಕಲೇಶಪುರ: ಜಲಪಾತದಲ್ಲಿ ಈಜಲು ಹೋದ ಯುವಕನೋರ್ವನ ಮುಖ ಹಾಗೂ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಮೂಕನ ಮನೆ ಜಲಪಾತದಲ್ಲಿ ನಡೆದಿದೆ.

Advertisement

ಬೆಂಗಳೂರು ಮೂಲದ ಕೆ.ಎನ್.ನಿಂಗರಾಜ್ (17) ಮೃತಪಟ್ಟ ದುರ್ದೈವಿಯಾಗಿದ್ದು ಬೆಂಗಳೂರಿನ ರಾಜಾಜಿನಗರದ ಪ್ಯಾರಾ ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿಯೆಂದು ತಿಳಿದು ಬಂದಿದೆ.

ಘಟನೆಯ ವಿವರ: ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಸರಾಂತ ಮೂಕನಮನೆ ಜಲಪಾತಕ್ಕೆ ತನ್ನ ಕಾಲೇಜಿನ ಸಹಪಾಠಿಗಳು ಹಾಗೂ ಕಾಲೇಜಿನ ಕೆಲವು ಸಿಬ್ಬಂದಿಗಳ ಜೊತೆಗೆ ಪ್ರವಾಸಕ್ಕೆ ಬಂದಿದ್ದು ತನ್ನ ಕೆಲವು ಸಹಪಾಠಿಗಳ ಜೊತೆಗೆ ಈತ ಜಲಪಾತದಲ್ಲಿ ಶನಿವಾರ ಮಧ್ಯಾಹ್ನ ಈಜಲು ಇಳಿದಿದ್ದಾನೆ. ಈ ವೇಳೆ ನೀರಿನ ಸುಳಿಗೆ ಸಿಕ್ಕಿ ಕೊಚ್ಚಿ ಹೋಗಿ ಬಂಡೆಯೊಂದಕ್ಕೆ ಮುಖ ಹಾಗೂ ತಲೆ ಅಪ್ಪಳಿಸಿದ ಪರಿಣಾಮ ತೀವ್ರ ಪೆಟ್ಟು ಬಿದ್ದಿದೆ. ಇವನನ್ನು ರಕ್ಷಿಸಲು ಸಮೀಪದಲ್ಲಿದವರು ತೀವ್ರ ಪ್ರಯತ್ನಿಸಿದರೂ ಸಹ ನೀರಿನ ವೇಗ ಹೆಚ್ಚಿದ್ದರಿಂದ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ನಂತರ ಪೊಲಿಸರು,ಅಗ್ನಿ ಶಾಮಕ ದಳದ ಸಿಬ್ಬಂದಿ ಸಹಾಯದಿಂದ ಮೃತ ದೇಹವನ್ನು ನೀರಿನಿಂದ ಹೊರ ತೆಗೆಯಲಾಯಿತು.

ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಜೊತೆಯಲ್ಲಿ ಬಂದವರು ಅಘಾತಕ್ಕಿಡಾಗಿದ್ದು ಇವರ ಆಕ್ರಂಧನ ಮುಗಿಲು ಮುಟ್ಟಿತ್ತು. ನಂತರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಶವ ಪರೀಕ್ಷೆಗೆ ಕಳುಹಿಸಲಾಯಿತು. ಸ್ಥಳಕ್ಕೆ ಯಸಳೂರು ಪಿಎಸ್ಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :ಪರಿಸರಕ್ಕೆ ಪೂರಕ ಈ ಪೆನ್ನು, ಪೆನ್ಸಿಲು ಮನೆಯಲ್ಲಿ ನೀವೇ ತಯಾರಿಸಿ

Advertisement

ತಾಲೂಕಿನ ಮೂಕನಮನೆ ಜಲಪಾತದಲ್ಲಿ ಪ್ರತಿವರ್ಷ ಒಂದಾದರು ಈ ರೀತಿಯ ಘಟನೆ ನಡೆಯುವುದು ಸಾಮಾನ್ಯವಾಗಿದೆ. ಹೊರ ಊರುಗಳಿಂದ ಬರುವ ಪ್ರವಾಸಿಗರು ನೀರಿನ ವೇಗ ಹಾಗೂ ಆಳವನ್ನು ಅರಿಯದೆ ಜಲಪಾತದ ಸೌಂದರ್ಯಕ್ಕೆ ಮರಳಾಗಿ ನೀರಿನಲ್ಲಿ ಆಡಲು ಹೋಗಿ ಬಲಿ ಪಶುಗಳಾಗುತ್ತಿದ್ದಾರೆ. ಕೂಡಲೆ ಗ್ರಾ.ಪಂ ವತಿಯಿಂದ ಇಲ್ಲೊಬ್ಬರು ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next