ಪಣಜಿ : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅಪರಾಧ ಪ್ರಕರಣ ತಲೆ ಎತ್ತಿದೆ. ದೌರ್ಜನ್ಯ, ಕಳ್ಳತನ, ಗುಂಡಿನ ದಾಳಿ, ಅತ್ಯಾಚಾರ, ಕೊಲೆ, ಮಾದಕ ದ್ರವ್ಯ ದಂಧೆಯಂತಹ ಘಟನೆಗಳು ಸಮಾಜದಲ್ಲಿ ಅಶಾಂತಿ ಮೂಡಿಸಿವೆ. ಪ್ರತಿಪಕ್ಷಗಳು ಕೂಡ ಈ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಮತ್ತೊಂದೆಡೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ, ಕಳೆದ ಕೆಲವು ದಿನಗಳಿಂದ ನಡೆದಿರುವ ಘಟನೆಗಳಲ್ಲಿ ರಾಜ್ಯದ ಹೊರಗಿನ ಜನರು ಭಾಗಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ರಾಜ್ಯದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ಮರಳು ಮಾಫಿಯಾಗಳ ನಡುವಿನ ಆಂತರಿಕ ಕಲಹದಿಂದ ಕೂಲಿ ಕಾರ್ಮಿಕನ ಹತ್ಯೆ, ಸೋಮವಾರ ನಸುಕಿನ ಜಾವ ಬೈನಾ ವಾಸ್ಕೋದಲ್ಲಿ ಯುವಕನೊಬ್ಬನನ್ನು ನಾಲ್ವರು ಯುವಕರು ಬರ್ಬರವಾಗಿ ಹತ್ಯೆಗೈದಿದ್ದಾರೆ. ಈ ಪ್ರಕರಣಗಳಿಂದ ಸಾಮಾಜಿಕ ವಲಯದಿಂದ ಆತಂಕ ವ್ಯಕ್ತವಾಗುತ್ತಿದೆ. ಪ್ರತಿಪಕ್ಷಗಳೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಕ್ಕೆ ಸರ್ಕಾರವೇ ಹೊಣೆ ಎಂದು ಗೋವಾ ಫಾರ್ವರ್ಡ್ ಶಾಸಕ ವಿಜಯ್ ಸರ್ದೇಸಾಯಿ ಆರೋಪಿಸಿದ್ದಾರೆ.
ಆಮ್ ಆದ್ಮಿ ಪಕ್ಷವೂ ಸರ್ಕಾರದ ನಿಷ್ಕ್ರಿಯತೆಯೇ ಅಪರಾಧ ಹೆಚ್ಚಳಕ್ಕೆ ಕಾರಣ ಎಂದು ಟೀಕಿಸಿದೆ. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಂದ ರಾಜ್ಯದ ಜನತೆ ಸುರಕ್ಷಿತವಾಗಿಲ್ಲ ಎಂದು ಗೋವಾ ಖಾಸಗಿ ಬಸ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಸುದೀಪ್ ತಾಮಣಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಪ್ರಮೋದ ಸಾವಂತ್- ರಾಜ್ಯದಲ್ಲಿ ಅಪರಾಧ ಪ್ರಕರಣ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ; ಮಮತಾ ಸರ್ಕಾರದ ಕಾನೂನು ಸಚಿವ ಘಟಕ್ ನಿವಾಸದ ಮೇಲೆ CBI ದಾಳಿ