ಬೆಂಗಳೂರು: ಅಕ್ರಮ ಸಂಬಂಧ ಮುಂದುವರಿಸಲು ನಿರಾಕರಿಸಿದ ಮಹಿಳೆಯ ಅಣ್ಣನನ್ನು ಅಪಹರಿಸಿದ ಭಗ್ನ ಪ್ರೇಮಿ ಸೇರಿ ಆರು ಮಂದಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಜಗೋಪಾಲನಗರದ ಶ್ರೀನಿವಾಸ್ (32) ಹಾಗೂ ಆತನ ಸಹಚರರಾದ ಪ್ರತಾಪ್ (28), ಆಕಾಶ್ (31), ಹುಚ್ಚೇಗೌಡ (34), ಶಿವ (31), ಗಂಗಾಧರ್ (34) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಶ್ರೀನಿವಾಸ್ ಫೈನ್ಯಾನ್ಸ್ ಕಂಪನಿಯೊಂದರಲ್ಲಿ ಹಣ ಪಡೆದು ಸರಿಯಾಗಿ ಹಣ ಪಾವತಿಸದಿದ್ದರೆ ಅಂತಹವರ ವಾಹನಗಳ ಜಪ್ತಿ ಮಾಡುವ ಕೆಲಸ ಮಾಡುತ್ತಿದ್ದ. ಈತನಿಗೆ ಮದುವೆಯಾಗಿದ್ದು, ಪತ್ನಿ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ಮಧ್ಯೆ ಮನೆ ಸಮೀಪದ ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದು, ಆಕೆ ಜತೆ ಅಕ್ರಮ ಸಂಬಂಧ ಹೊಂದಿದ್ದ. ಮೂರು ತಿಂಗಳ ಹಿಂದೆ ಆಕೆ ಕೂಡ ಪತಿ, ಮಕ್ಕಳನ್ನು ತೊರೆದು ಶ್ರೀನಿವಾಸ್ ಜತೆ ಲಿವಿಂಗ್ ಟುಗೆದರ್ ಮಾದರಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಜ.17ರಂದು ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಮನಸ್ತಾಪವಾಗಿತ್ತು. ಅದರಿಂದ ಮನನೊಂದ ಮಹಿಳೆ, ಶ್ರೀನಿವಾಸ್‌ನಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ : ರಾತ್ರಿ ಕರ್ಫ್ಯೂನಿಂದ ವಿನಾಯಿತಿ ನೀಡಲು ರಂಗಭೂಮಿ ಕಲಾವಿದರ ವೇದಿಕೆಯಿಂದ ಸಚಿವರಿಗೆ ಮನವಿ
ಆದರೆ, ಶ್ರೀನಿವಾಸ್, ಪ್ರೇಯಸಿಯನ್ನು ದೂರ ಇರಲು ಇಷ್ಟ ಪಡದೆ, ಪದೇ-ಪದೆ ಕರೆ ಮಾಡಿ ಮತ್ತೆ ತನ್ನೊಂದಿಗೆ ಜೀವನ ನಡೆಸುವಂತೆ ಒತ್ತಾಯ ಮಾಡುತ್ತಿದ್ದ. ಆದರೆ, ಆಕೆ ನಿರಾಕರಿಸಿದ್ದಳು. ಅದರಿಂದ ಆಕ್ರೋಶಗೊಂಡ ಶ್ರೀನಿವಾಸ್, ತನ್ನ ಸಹಚರರ ಜತೆಗೆ ಸೇರಿ ಆಕೆಯ ಸಹೊದರ ವೆಂಕಟೇಶ್‌ನನ್ನು ಅಪಹರಣ ಮಾಡಲು ಸಂಚು ರೂಪಿಸಿದ್ದ.
ಅದರಂತೆ ಜ.20ರಂದು ರಾತ್ರಿ 9 ಗಂಟೆಗೆ ವೆಂಕಟೇಶ್ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಆತನನ್ನು ಭೇಟಿಯಾದ ಶ್ರೀನಿವಾಸ್, “ನಿನ್ನ ಬಳಿ ಸ್ವಲ್ಪ ಮಾತನಾಡಬೇಕು’ ಎಂದು ಕಾರಿನಲ್ಲಿ ಕೂರಿಸಿಕೊಂಡು ಹೊಸಕೋಟೆ-ಕೋಲಾರಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದ. ನಂತರ ಪ್ರೇಯಸಿಗೆ ಕರೆ ಮಾಡಿ, “ನೀನು ನನ್ನ ಜತೆಗೆ ಜೀವಿಸದಿದ್ದರೆ, ನಿನ್ನ ಅಣ್ಣ ವೆಂಕಟೇಶ್ ನನ್ನು ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ಆತಂಕಗೊಂಡ ಮಹಿಳೆ, ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಪೊಲೀಸರು, ಶ್ರೀನಿವಾಸ್ ಮಹಿಳೆಗೆ ಕರೆ ಮಾಡಿದ ಪ್ರದೇಶವನ್ನು ಪರಿಶೀಲಿಸಿದಾಗ ಆತ ಹೊಸಕೋಟೆಯಲ್ಲಿರುವುದು ಪತ್ತೆಯಾಗಿತ್ತು. ಕೂಡಲೇ ಹೊಸಕೋಟೆ ಬಳಿ ತೆರಳಿದ ಪೊಲೀಸರ ತಂಡ ಆರೋಪಿ ಹಾಗೂ ಆತನ ಸಹಚರರನ್ನು ಬಂಧಿಸಿ, ವೆಂಕಟೇಶ್‌ನನ್ನು ರಕ್ಷಣೆ ಮಾಡಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.