ಸುಳ್ಯ: ಇಲ್ಲಿನ ಜಯನಗರ ಶ್ರೀ ಆದಿ ಮೊಗೇರ್ಕಳ ದೈವಸ್ಥಾನದ ಹುಂಡಿಯನ್ನು ದೈವಸ್ಥಾನದ ಅಡುಗೆ ಕೋಣೆಗೆ ಕೊಂಡೊಯ್ದು ಒಡೆಯುತ್ತಿದ್ದ ಸಂದರ್ಭ ಊರವರು ಕಳ್ಳನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮೇ 25ರಂದು ನಡೆದಿದೆ.
ಆರೋಪಿಯನ್ನು ಜಯನಗರ ಆಶ್ರಯ ಕಾಲನಿ ನಿವಾಸಿ ಎಂದು ಗುರುತಿಸಲಾಗಿದೆ.
ಸ್ಥಳೀಯ ನಿವಾಸಿಗಳು ಬೆಳಗ್ಗೆ ಪೂಜೆ ಸಲ್ಲಿಸಲು ದೈವಸ್ಥಾನಕ್ಕೆ ಹೋಗಿದ್ದ ಸಂದರ್ಭ ಅಡುಗೆ ಕೋಣೆಯಿಂದ ಶಬ್ದ ಕೇಳಿದ್ದು, ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ದೈವಸ್ಥಾನದ ಹುಂಡಿಯನ್ನು ಒಡೆಯುವ ಪ್ರಯತ್ನದಲ್ಲಿದ್ದುದು ಕಂಡುಬಂದಿದೆ.
ಕೂಡಲೇ ದೈವಸ್ಥಾನದವರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಯನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ಆರೋಪಿ ಈ ಹಿಂದೆಯೂ ಕೃತ್ಯ ಎಸಗಿದ್ದು, ಎಚ್ಚರಿಕೆ ನೀಡಲಾಗಿತ್ತು ಎನ್ನಲಾಗಿದೆ.