ಬೆಂಗಳೂರು: ಸ್ನೇಹಿತರ ಜತೆ ಕ್ಯಾಬ್‌ಗಾಗಿ ಕಾಯುತ್ತಿದ್ದ ನೇಪಾಳ ಮೂಲದ ಯುವಕನಿಗೆ ದೊಣ್ಣೆಯಿಂದ ಹೊಡೆದು ಕೊಲೆಗೈದು, ದರೋಡೆ ಮಾಡಿದ್ದ ಎಂಟು ಮಂದಿ ಆರೋಪಿಗಳನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಚಂದ್ರು ( 2 8 ) , ಜೀವನ್ (26), ಕಾರ್ತಿಕ್ (29), ಕಿರಣ್ ಕುಮಾರ್ ( 2 5 ) , ಮದನ್( 2 4 ) , ಮುನೇಶ್ ( 2 5 ), ನಿಖಿಲ್(27), ಸಚಿನ್ (30) ಬಂಧಿತರು. ಆರೋಪಿಗಳೆಲ್ಲರೂ ದೊಡ್ಡ ಬಿದರಕಲ್ಲು, ಬಾಗಲಗುಂಟೆ ನಿವಾಸಿಗಳಾಗಿದ್ದಾರೆ. ಆರೋಪಿಗಳಿಂದ 1 ಮೊಬೈಲ್, 5,200 ರೂ. ನಗದು, 1 ಗೂಡ್ಸ್ ವಾಹನ, 7 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಈ ಪೈಕಿ ಚಂದ್ರು, ಕಾರ್ತಿಕ್, ಸಚಿನ್ ವಿರುದ್ಧ ಬಾಗಲಗುಂಟೆ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ. ನ.13ರಂದು ನೇಪಾಳ ಮೂಲದ ಅನಿಲ್‌ಬೊಹರ ಎಂಬಾತನನ್ನು ಕೊಲೆಗೈದು, ದರೋಡೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.
ನೇಪಾಳ ಮೂಲದ ಅನಿಲ್ ಬೊಹರ ಮತ್ತು ಸ್ನೇಹಿತರು ಶ್ರೀರಾಮಪುರದ ಗ್ಲಾಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ನ.13ರಂದು ನಸುಕಿನ 3 ಗಂಟೆಗೆ ಊಟ ಮಾಡಿಕೊಂಡು ಮನೆಗೆ ಹೋಗಲು ಆರ್‌ಎಂಸಿ ಯಾರ್ಡ್‌ನ 1ನೇ ಗೇಟ್ ರಸ್ತೆಯ ದೇವಸ್ಥಾನದ ಮುಂದೆ ಕ್ಯಾಬ್ ಬುಕ್ ಮಾಡಿ ಕಾಯುತ್ತಿದ್ದರು. ಆಗ ಕೆಟಿಎಂ ಬೈಕ್ ಹಾಗೂ ಗೂಡ್ಸ್ ವಾಹನದಲ್ಲಿ ಬಂದ 10 ಮಂದಿ ದೊಣ್ಣೆಯಿಂದ ಅನಿಲ್ ಬೊಹರ ತಲೆಗೆ ಹೊಡೆದಿದ್ದಾರೆ. ಆತನ ಜತೆಗಿದ್ದ ಸ್ನೇಹಿತರಿಗೂ ಹಲ್ಲೆ ನಡೆಸಿ 2 ಮೊಬೈಲ್, 5,200 ರೂ. ಕಸಿದುಕೊಂಡು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿಲ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಈ ಮಧ್ಯೆ ಗಂಭೀರವಾಗಿ ಗಾಯಗೊಂಡಿದ್ದ ಅನಿಲ್ ಬೊಹೆರ ಚಿಕಿತ್ಸೆ ಫಲಕಾರಿಯಾಗದೆ ನ.22ರಂದು ಮೃತಪಟ್ಟಿದ್ದ.
ಈ ಸಂಬಂಧ ಆರೋಪಿಗಳ ವಿರುದ್ಧ ದರೋಡೆ ಜತೆಗೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಪಟಾಕಿ ತರಲು ಹೋದವರು ಕೊಲೆಗೈದರು!: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಆರೋಪಿಗಳೆಲ್ಲರೂ ಒಟ್ಟಿಗೆ ನ.13ರಂದು ರಾತ್ರಿ ಪಟಾಕಿ ತರಲು ಹೋಗಿದ್ದರು. ನ.14ರ ನಸುಕಿನ 3 ಗಂಟೆಗೆ ವಾಪಸ್ ಮನೆಗೆ ಬರುವಾಗ ತಮ್ಮ ಮೋಜು-ಮಸ್ತಿಗಾಗಿ ದರೋಡೆ ಮಾಡಿ ಹಣ ಸಂಪಾದಿಸಲು ನಿರ್ಧರಿಸಿದ್ದಾರೆ. ಅದೇ ವೇಳೆ ಆರ್‌ಎಂಸಿ ಯಾರ್ಡ್ ಗೇಟ್ ಮುಂಭಾಗ ನಿಂತಿದ್ದ ಅನಿಲ್ ಬೊಹೆರ ಹಾಗೂ ಆತನ ಸ್ನೇಹಿತರ ಮೇಲೆ ದೊಣ್ಣೆಗಳಿಂದ ಹೊಡೆದು ಕೊಲೆಗೈದು, ದರೋಡೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.