ಬೆಳಗಾವಿ: ಬಂಗಾರದ ಅಂಗಡಿಯಲ್ಲಿ ವ್ಯಾಪಾರ ಮಾಡಿದ್ದ 4.97 ಕೋಟಿ ರೂ. ಹಣವನ್ನು ಬಾಕ್ಸ್ ಮತ್ತು ಗೋಣಿ ಚೀಲದಲ್ಲಿ ತುಂಬಿ ಬೋಲೇರೋ ವಾಹನದಲ್ಲಿ ಹಾಕಿಕೊಂಡು ಹೊರಟಾಗ ದರೋಡೆಕೋರರ ತಂಡವೊಂದು ವಾಹನ ಅಡ್ಡಗಟ್ಟಿ ಪಿಸ್ತೂಲು ತೋರಿಸಿ ಹಲ್ಲೆ ಮಾಡಿ ಎಲ್ಲ ನಗದು ಹಣ ದೋಚಿ ಪರಾರಿಯಾದ ಘಟನೆ ಬೈಲಹೊಂಗಲ ತಾಲೂಕಿನ ಗದ್ದಿಕೊರವಿನಕೊಪ್ಪ ಗ್ರಾಮ ಬಳಿ ನಡೆದಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸಾಂಗೋಲಾ ತಾಲೂಕಿನ ವಾಡೇಗಾಂವ ಗ್ರಾಮದ ಸಚೀನ ಬಾನುದಾಸ ಐಹೊಳೆ ಹಾಗೂ ಜತ್ತ ಜಿಲ್ಲೆಯ ಮಾನ ತಾಲೂಕಿನ ಮಹಾದೇವ ರಾಮಚಂದ್ರ ಬನಸೋಡೆ ಎಂಬವರು ಗಾಯಗೊಂಡಿದ್ದಾರೆ.
ಬೋಲೇರೋ ಗೂಡ್ಸ್ ವಾಹನದಲ್ಲಿ 4.70 ಕೋಟಿ ರೂ. ಹಣವನ್ನು ಐದು ಗೋಣಿ ಚೀಲದಲ್ಲಿ ಹಾಗೂ 27.30 ಲಕ್ಷ ರೂ. ಹಣವನ್ನು ಬಾಕ್ಸ್ ನಲ್ಲಿ ತುಂಬಿಕೊಂಡು ಹೊರಟಾಗ ದಾಳಿ ನಡೆಸಿದ ದರೋಡೆಕೋರರು ಈ ಎಲ್ಲ ಹಣ, ಮೊಬೈಲ್ ಹಾಗೂ ವಾಹನದ ಕೀ ದೋಚಿಕೊಂಡು ಪರಾರಿಯಾಗಿದ್ದಾರೆ.
ಹಣ ದೋಚಿದ್ದು ಹೇಗೆ?: ಕೊಲ್ಲಾಪುರದಲ್ಲಿ ಲಕ್ಷ್ಮೀ ಗೋಲ್ಡ್ ಎಂಬ ಬಂಗಾರದ ಅಂಗಡಿಯಲ್ಲಿ ವ್ಯವಹಾರ ಮಾಡಿದ್ದ 4.97 ಕೋಟಿ ರೂ. ಹಣವನ್ನು ಏ. 8ರಂದು ರಾತ್ರಿ ಉಡುಪಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಚಿನ್ ಐಹೊಳೆ ಹಾಗೂ ಮಹಾದೇವ ಬನಸೋಡೆ ಎಂಬವರು ಹಣ ತೆಗೆದುಕೊಂಡು ತೆರಳುತ್ತಿದ್ದರು. ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಉಡುಪಿಗೆ ತೆರಳುವಾಗ ಹಿರೇಬಾಗೇವಾಡಿಯಿಂದ ಹೈವೇ ಬಿಟ್ಟು ಬೈಲಹೊಂಗಲ ಕಡೆಗೆ ಹೋಗುವಾಗ ಹಳ್ಳಿ ಹಳ್ಳಿ ಧಾಬಾ ಬಳಿ ಎರ್ಟಿಗಾ ವಾಹನದಲ್ಲಿ ಐವರು ದರೋಡೆಕೋರರು ಬಂದು ವಾಹನ ಅಡ್ಡಗಟ್ಟಿ ನಿಲ್ಲಿಸಲು ಯತ್ನಿಸಿದ್ದಾರೆ. ಆಗ ವಾಹನ ಚಲಾಯಿಸುತ್ತಿದ್ದ ಸಚಿನ್ ತಪ್ಪಿಸಿಕೊಂಡು ಅಲ್ಲಿಂದ ಮುಂದೆ ಹೋಗಿದ್ದಾರೆ.
ಆಗ ಬೋಲೇರೋ ವಾಹನ ಬೆನ್ನಟ್ಟಿದ್ದ ದರೋಡೆಕೋರರು ಎಂ.ಕೆ. ಹುಬ್ಬಳ್ಳಿ ಸಮೀಪದ ಗದ್ದಿಕೊರವಿನಕೊಪ್ಪ ಗ್ರಾಮ ದಾಟಿ ಮುಂದೆ ಬೋಲೇರೋ ವಾಹನವನ್ನು ಓವರ್‌ಟೆಕ್ ಮಾಡಿ ನಿಲ್ಲಿಸಿದ್ದಾರೆ. ನಂತರ ತಮ್ಮ ಬಳಿ ಇದ್ದ ಪಿಸ್ತೂಲು ಹಾಗೂ ಚಾಕು ತೋರಿಸಿ ಸಚಿನ್ ಮತ್ತು ಮಹಾದೇವನನ್ನು ಹೆದರಿಸಿದ್ದಾರೆ. ನಂತರ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾರೆ. ಬೋಲೇರೋ ವಾಹನದಲ್ಲಿದ್ದ 4.97 ಕೋಟಿ ರೂ. ನಗದು ಹಣ, ಮೊಬೈಲ್ ಹಾಗೂ ವಾಹನದ ಕೀ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಸಾಂಗಲಿ ಜಿಲ್ಲೆಯ ಆಟಪಾಟಿಯ ವಿಕಾಸ ವಿಲಾಸ ಕದಂ ಎಂಬವರು ಬೈಲಹೊಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಪಿಐ ಯು.ಎಚ್. ಸಾತೇನಹಳ್ಳಿ ಅವರು ದರೋಡೆಕೋರರು ಪತ್ತೆಗೆ ಜಾಲ ಬೀಸಿದ್ದಾರೆ. ಎಲ್ಲ ಆಯಾಮಗಳಿಂದಲೂ ತನಿಖೆ ಮುಂದುವರಿಸಿದ್ದಾರೆ.