Advertisement

ಉಡುಪಿ ಮೂಲದ ಸುಲಿಗೆಕೋರರಿಗೆ ಗುಂಡೇಟು

12:29 AM Apr 06, 2022 | Team Udayavani |

ಬೆಂಗಳೂರು: ವಿದ್ಯಾರ್ಥಿಯೊಬ್ಬನನ್ನು ಅಡ್ಡಗಟ್ಟಿ ಅಪಹರಿಸಿ, ಹಣ ದರೋಡೆ ಮಾಡಿದ್ದಲ್ಲದೆ, ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಉಡುಪಿ ಮೂಲದ ಇಬ್ಬರು ನಟೋರಿಯಸ್‌ ಸುಲಿಗೆಕೋರರಿಗೆ ಕೊತ್ತನೂರು ಠಾಣೆ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.

Advertisement

ಉಡುಪಿಯ ಕಾಪು ತಾಲೂಕಿನ ಮೊಹಮ್ಮದ್‌ ಆಶೀಕ್‌ (22) ಮತ್ತು ಕುಂದಾಪುರ ತಾಲೂಕಿನ ಇಸಾಕ್‌ (21) ಎಂಬವರಿಗೆ ಗುಂಡೇಟು ತಗಲಿದೆ. ಇಬ್ಬರನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಂದ ಹತ್ತು ಮೊಬೈಲ್‌ಗಳು, ಒಂದು ಕಾರು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಆರೋಪಿಗಳ ಹಲ್ಲೆಯಿಂದ ಪಿಎಸ್‌ಐ ಉಮೇಶ್‌ಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಪ್ರಕರಣ?
ಮಾ.26 ರಂದು ಮುಂಜಾನೆ 5 ಗಂಟೆ ಸುಮಾರಿಗೆ ನಂಬರ್‌ ಪ್ಲೇಟ್‌ ಇಲ್ಲದ ಮಾರುತಿ ರಿಟ್ಜ್ ಕಾರಿನಲ್ಲಿ ಬಂದ ನಾಲ್ವರು ಆರೋಪಿಗಳು, ಮತ್ತೊಂದು ಕಾರಿನಲ್ಲಿ ದೇವಸ್ಥಾನದಿಂದ ಮನೆಗೆ ಹೋಗುತ್ತಿದ್ದ ಯುವಕನನ್ನು ಹಿಂಬಾಲಿಸಿ, ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಮಾರಕಾಸ್ತ್ರ ತೋರಿಸಿ ಆತನ ಕಾರಿನಲ್ಲಿ ಅಪಹರಿಸಿದ್ದಾರೆ. ಬಳಿಕ ಯುವಕನ ಬಳಿಯಿದ್ದ ಚಿನ್ನದ ಉಂಗುರ ಕಸಿದುಕೊಂಡಿದ್ದಾರೆ. ಬಳಿಕ 50 ಸಾವಿರ ರೂ. ನಗದು ಕೊಡಬೇಕು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು,  ಬಲವಂತವಾಗಿ ಎಟಿಎಂ ಕಾರ್ಡ್‌ ಪಡೆದುಕೊಂಡು, ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಅನಂತರ ಬೆಳ್ಳಂದೂರು, ವೈಟ್‌ಫೀಲ್ಡ್‌ ಕಡೆಗೆ ಕರೆದೊಯ್ದು ತಾವು ಕೇಳಿದಷ್ಟು ಹಣ ಕೊಡಬೇಕು. ಇಲ್ಲವಾದರೆ ಲೈಂಗಿಕವಾಗಿ ಸಹಕರಿಸಬೇಕೆಂದಿದ್ದರು. ಬಳಿಕ ಯುವಕನಿಂದ ಮತ್ತಷ್ಟು ಹಣ ಕಸಿದುಕೊಂಡು, ಬಳಿಕ ಲೈಂಗಿಕ ದೌರ್ಜನ್ಯ ಎಸಗಿ, ಮಾರ್ಗ ಮಧ್ಯೆ ಬಿಟ್ಟು ಹೋಗಿದ್ದರು.

ಈ ಸಂಬಂಧ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಸಿಸಿ ಕೆಮೆರಾ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮಂಗಳೂರು, ಉಡುಪಿ ಮತ್ತಿತರರ ಕಡೆ ಶೋಧ ನಡೆಸಿದ್ದರು.

ಇದನ್ನೂ ಓದಿ:ಡಾ| ಪ್ರಭಾಕರ ಭಟ್‌ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

Advertisement

ಬೆಂಗಳೂರಿಗೆ ಬಂದಾಗ ಗುಂಡೇಟು
ಆರೋಪಿಗಳು ನಗರದಲ್ಲಿ ಕೃತ್ಯ ಎಸಗಿದ ಬಳಿಕ ದಾವಣಗೆರೆಯಲ್ಲಿ ಸುಲಿಗೆ ಮಾಡಿದ್ದರು. ಮಂಗಳವಾರ ಮುಂಜಾನೆ ರಿಟ್ಜ್ ಕಾರಿನಲ್ಲಿ ಜಕ್ಕೂರು ಬಳಿ ಓಡಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿತ್ತು. ಆರೋಪಿಗಳನ್ನು ಹಿಡಿಯಲು ಹೋದಾಗ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಡ್ರ್ಯಾಗರ್‌ನಿಂದ ಪಿಎಸ್‌ಐ ಉಮೇಶ್‌ ಮೇಲೆ ಹಲ್ಲೆ ನಡೆಸಿದ್ದರು. ಆಗ ಪೊಲೀಸರು ಆರೋಪಿಗಳ ಕಾಲುಗಳಿಗೆ ಗುಂಡು ಹಾರಿಸಿ ಬಂಧಿಸಿದರು.

ಟೀಂ ಗರುಡಾ-900
ಚಿಕ್ಕ ವಯಸ್ಸಿನಿಂದಲೂ ಆರೋಪಿಗಳು ಸುಲಿಗೆ, ದರೋಡೆ, ಕಳ್ಳತನ, ಮನೆಗಳ್ಳತನ, ಹಸುಗಳ ಕಳ್ಳತನ ಕೃತ್ಯದಲ್ಲಿ ತೊಡಗಿದ್ದಾರೆ. ಮಂಗಳೂರು, ಉಡುಪಿ ಮತ್ತು ಕುಂದಾಪುರ ಕಡೆಗಳಲ್ಲಿ  “ಟೀಂ ಗರುಡಾ-900′ ಹೆಸರಿನಲ್ಲಿ ಗುಂಪು ಮಾಡಿಕೊಂಡು ರಾತ್ರಿ ವೇಳೆ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಈ ಆರೋಪಿಗಳು ಈಗಾಗಲೇ ಉಡುಪಿ, ಮಣಿಪಾಲ, ಕಾಪು, ಬೈಂದೂರು, ಬ್ರಹ್ಮಾವರ ಸೇರಿ ಮಂಗಳೂರು ಸುತ್ತ-ಮುತ್ತ 16 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದರು. ಅಲ್ಲಿನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನಿನಲ್ಲಿ  ಹೊರಬಂದಿರುವ ಆರೋಪಿಗಳು ಕೋರ್ಟ್‌ಗೆ

ಹಾಜರಾಗದೆ ತಲೆಮರೆಸಿಕೊಂಡಿದ್ದ ಪರಿಣಾಮ ಇವರ ಬಂಧನಕ್ಕೆ ನಾನಾ ಠಾಣೆಗಳಲ್ಲಿ 10 ವಾರಂಟ್‌ ನೀಡಲಾಗಿತ್ತು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next