ಬೆಂಗಳೂರು: ಮನೆ ಕಳವು ಪ್ರಕರಣದ ಆರೋಪಿಯನ್ನು ಬಂಧಿಸಲು ತೆರಳಿದ ಕಾನ್ಸ್‌ಟೇಬಲ್‌ವೊಬ್ಬರ ಮೇಲೆ ಕಳವು ಆರೋಪಿ ಮತ್ತು ಆತನ ಕುಟುಂಬ ಸದಸ್ಯರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವರ್ತೂರು ಠಾಣೆಯ ಅಪರಾಧ ವಿಭಾಗದ ಕಾನ್ಸ್‌ಟೇಬಲ್ ಮಂಜುನಾಥ್ ಹಲ್ಲೆಗೊಳಗಾದವರು. ಮಂಜುನಾಥ್ ತಲೆ ಹಾಗೂ ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಸಂಬಂಧ ಹಲ್ಲೆ ನಡೆಸಿದ ಕಳ್ಳ ನವೀನ್, ಆತನ ತಾಯಿ ನರಸಮ್ಮ, ಸಹೋದರ ಮುರುಗೇಶ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ.ನರಸಮ್ಮ ಹಾಗೂ ಮುರುಗೇಶ್‌ನನ್ನು ಬಂಧಿಸಿದ್ದು ನವೀನ್ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ತೈಲ ಬೆಲೆ ಸತತ ಏರಿಕೆ: ಬೆಂಗಳೂರು ಸೇರಿ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?
ಕಾಚಮಾರನಹಳ್ಳಿ ನಿವಾಸಿಯಾಗಿರುವ ನವೀನ್ ಮನೆಕಳವು ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿದ್ದು ನಗರದ ವಿವಿಧ ಠಾಣೆಗಳಲ್ಲಿ ಏಳು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ವರ್ತೂರು ಠಾಣೆಯಲ್ಲಿಯೂ ಆತನ ವಿರುದ್ಧ ಕೇಸ್ ಇದ್ದು ಆರೋಪಿ ನವೀನ್ ಮಂಗಳವಾರ ರಾತ್ರಿ ತನ್ನ ಮನೆಯಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಈ ನಿಟ್ಟಿನಲ್ಲಿ ಕಾನ್ಸ್‌ಟೇಬಲ್ ಮಂಜುನಾಥ್ ಹಾಗೂ ಪೊಲೀಸ್ ಬಾತ್ಮೀದಾರರು ಆತನ ಮನೆಗೆ ತೆರಳಿದಾಗ ನವೀನ್ ಸಹಿತ ಕುಟುಂಬಸ್ಥರು ಜಗಳ ತೆಗೆದಿದ್ದಾರೆ. ಅಷ್ಟೇ ಅಲ್ಲದೆ ದೊಣ್ಣೆ ಹಾಗೂ ಕೈಗಳಿಂದ ನವೀನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಹೊಯ್ಸಳ ಸಿಬ್ಬಂದಿ ಮಂಜುನಾಥ್‌ರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.