Advertisement

ಕರಾವಳಿ ಅಪರಾಧ ಸುದ್ದಿಗಳು

02:33 PM Jul 16, 2019 | keerthan |

ನಾಪತ್ತೆಯಾದಾಕೆ ಮದುವೆಯಾಗಿ ಠಾಣೆಗೆ ಹಾಜರು
ಪುಂಜಾಲಕಟ್ಟೆ: ಗುರುವಾರ ಟೈಲರಿಂಗ್‌ ಅಂಗಡಿಗೆ ತೆರಳಿ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಬಳ್ಳಮಂಜ ನಿವಾಸಿ ಸೋನಿಯಾ ಜೇಸ್ಮಾ ಫೂನ್ಸೆಕಾ (22) ಅವರು ಶುಕ್ರ ವಾರ ಮದುವೆಯಾಗಿ ಪುಂಜಾಲಕಟ್ಟೆ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾರೆ.
ಇವರು ಜೂ. 20ರಂದು ತನ್ನ ಮನೆಯಿಂದ ಮಡಂತ್ಯಾರಿನ ಬಟ್ಟೆ ಅಂಗಡಿಗೆ ಹೋಗಿ ಟೈಲರಿಂಗ್‌ ಶಾಪ್‌ಗೆ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದಾರೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈಕೆ ಗ್ರಾಮ ಪಂಚಾಯತ್‌ ಉಪಾಧ್ಯಕ್ಷನ ಜತೆಗೆ ಹೋಗಿದ್ದ ಬಗ್ಗೆ ವದಂತಿ ಕೂಡ ಕೇಳಿಬಂದಿತ್ತು. ಶುಕ್ರವಾರ ಸೋನಿಯಾ ಮತ್ತು ಸ್ಥಳೀಯ ಫ್ಯಾನ್ಸಿ ಅಂಗಡಿಯೊಂದರ ಮಾಲಕ ಹಾಗೂ ಮಚ್ಚಿನ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ ಅವರು ಮದುವೆಯಾಗಿ ಪೊಲೀಸರ ಮುಂದೆ ಹಾಜರಾದರು. ಅವರು ಮಂಗಳೂರಿನಲ್ಲಿ ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸೋನಿಯಾ ಹೆತ್ತವರ ವಿರುದ್ಧವೂ ದೂರು
ಈ ನಡುವೆ, ಸೋನಿಯಾ ಜೇಸ್ಮಾ ನಾಪತ್ತೆ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಸ್ಥಳೀಯ ನಿವಾಸಿ ಇಂದಿರಾ ಮತ್ತು ಸುಂದರ ಪೂಜಾರಿ ಅವರ ಮನೆಗೆ ತೆರಳಿ ನಿಂದಿಸಿದ್ದಾರೆ ಎಂದು ಆರೋಪಿಸಿ ಪೋಷಕರು ಸೇರಿ ಆರು ಮಂದಿ ವಿರುದ್ಧ ದೂರು ದಾಖಲಾಗಿದೆ.

Advertisement

*
ನಿಸರ್ಗ್‌ ಕೊಲೆ ಪ್ರಕರಣ: ಎಲ್ಲ ಆರೋಪಿಗಳ ಖುಲಾಸೆ
ಮಂಗಳೂರು: ಪಡೀಲ್‌ ಓವರ್‌ ಬ್ರಿಜ್‌ ಸಮೀಪದ ಕೋಡಕ್ಕಲ್‌ ಶಿವನಗರದ ನಿಸರ್ಗ್‌ (19) ಕೊಲೆ ಪ್ರಕರಣದ ಆರೋಪಿಗಳಾದ ಪಡೀಲ್‌ ವೀರನಗರದ ಪುನೀತ್‌ ಯಾನೆ ಪಚ್ಚು , ಕಣ್ಣೂರು ಪೇರ್ಲ ಹೊಸಗುಡ್ಡೆಯ ಶರತ್‌ ಕೋಡಕ್ಕಲ್‌ ಮತ್ತು ನಿಖೀಲ್‌ ಹಾಗೂ ಕೋಡಕ್ಕಲ್‌ ಶಿವನಗರದ ಪ್ರಕಾಶ್‌ ಶೆಟ್ಟಿ ಅವರು ಖುಲಾಸೆಗೊಂಡಿದ್ದಾರೆ.

2017 ಸೆ. 14ರಂದು ನಿಸರ್ಗ್‌ ಮತ್ತು ಆತನ ಮಿತ್ರರಾದ ನಿಶಾಂತ್‌, ಆಶಿಕ್‌, ಸೌರವ್‌, ಮನೀಶ್‌ ಹಾಗೂ ಪ್ರವೀಣ್‌ ಜತೆ ವೀರನಗರದಲ್ಲಿ ನಡೆದ ಮೊಸರು ಕುಡಿಕೆ ಉತ್ಸವಕ್ಕೆ ಹೋಗಿ ವಾಪಸ್‌ ಬಂದು ರಾತ್ರಿ 2.30ರ ವೇಳೆಗೆ ಪಡೀಲ್‌ ಓವರ್‌ ಬ್ರಿಜ್‌ ಸಮೀಪ ರೈಲು ಹಳಿಯ ಬಳಿ ಕುಳಿತಿದ್ದರು. ಆಗ ಪರಿಚಯ ದವರೇ ಆದ ಪುನೀತ್‌ ಯಾನೆ ಪಚ್ಚು ಮತ್ತು ಇತರರು ಬಂದಿದ್ದು, ಅವರೊಳಗೆ ಮಾತಿಗೆ ಮಾತು ಬೆಳೆದಿತ್ತು. ಈ ಸಂದರ್ಭದಲ್ಲಿ ಪುನೀತ್‌ ಯಾನೆ ಪಚ್ಚು ಚೂರಿಯಿಂದ ನಿಸರ್ಗನನ್ನು ಇರಿದು ಗಾಯಗೊಳಿಸಿದ್ದ ಎಂದು ಆರೋಪಿಸಲಾಗಿತ್ತು. ನಿಸರ್ಗ್‌ ಮರುದಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.
ಕಂಕನಾಡಿ ನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಬಳಿಕ ಠಾಣಾಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಶಾರದಾ ಬಿ. ಅವರು, ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಶನ್‌ ವಿಫಲವಾಗಿದೆ ಎಂದು ಖುಲಾಸೆಗೊಳಿಸಿ ಶುಕ್ರವಾರ ತೀರ್ಪು ನೀಡಿದರು. ಆರೋಪಿಗಳ ಪರವಾಗಿ ವೇಣು ಕುಮಾರ್‌ ಮತ್ತು ಯುವರಾಜ್‌ ಕೆ. ಅಮೀನ್‌ ವಾದಿಸಿದ್ದರು.

*
ನಿಗದಿಗಿಂತ ಅಧಿಕ ದರ ವಸೂಲಿ ಆರೋಪ: ವಿಡಿಯೋ ವೈರಲ್‌
ಸುಳ್ಯ: ಅಡುಗೆ ಅನಿಲ ಪೂರೈಕೆ ಸಂಸ್ಥೆಯೊಂದರ ವಿತರಣ ಸಿಬಂದಿ ಗ್ರಾಹಕರಿಂದ ನಿಗದಿತ ದರಕ್ಕಿಂತ ಅಧಿಕ ಹಣ ವಸೂಲಿ ಮಾಡಿದ್ದಾರೆ ಎಂಬ ವೀಡಿಯೊ ಕಳೆದೆರಡು ದಿನಗಳಿಂದ ವೈರಲ್‌ ಆಗುತ್ತಿದೆ.

ಉಬರಡ್ಕ ಮಿತ್ತೂರಿನ ಅಂಗಡಿಯೊಂದರ ಮುಂಭಾಗದಲ್ಲಿ ಚಿತ್ರೀಕರಿಸಲಾದ ದೃಶ್ಯ ಸಾಮಾಜಿಕ ಜಾಲತಾಣದ ಮೂಲಕ ವೈರಲ್‌ ಆಗಿದೆ. ಇದನ್ನು ಗಮನಿಸಿದ ಆಪಾದಿತ ಸಿಬಂದಿ, ವೀಡಿಯೊ ಹರಿಯಬಿಟ್ಟು ತಮ್ಮ ಮಾನಹಾನಿ ಮಾಡಲಾಗುತ್ತಿದೆ ಎಂದು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಬಳಿಕ ಕೆಲವು ಮುಖಂಡರ ಉಪಸ್ಥಿತಿಯಲ್ಲಿ ಪ್ರಕರಣವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲಾಗಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next