ಸುಬ್ರಹ್ಮಣ್ಯ: ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ಸುನಿಲ್‌ನನ್ನು ಬುಧವಾರ ಕಡಬ ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕಿನ ನೂಜಿಬಾಳ್ತಿಲದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕಿಯನ್ನು ಅತ್ಯಾಚಾರಗೈದಿರುವ ಬಗ್ಗೆ ಬಾಲಕಿಯ ತಂದೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಬಾಲಕಿಯು ತನ್ನ ಅಜ್ಜನ ಮನೆಯಲ್ಲಿ ವಾಸವಾಗಿದ್ದು, ಆಕೆಯ ತಂದೆ ಇನ್ನೊಂದು ಮನೆಯಲ್ಲಿ ವಾಸವಾಗಿರುತ್ತಾರೆ. ತಾಯಿ 5 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವರು ವಾಪಸಾಗಿಲ್ಲ. ಆರೋಪಿಯು ಬಾಲಕಿಯ ಮನೆಯ ಪಕ್ಕದವರ ರಬ್ಬರ್ ತೋಟಕ್ಕೆ ಟ್ಯಾಪಿಂಗ್ ಕೆಲಸಕ್ಕೆ ಬರುತ್ತಿದ್ದು, ಬಾಲಕಿಯ ಅಜ್ಜನಲ್ಲಿ ಮಾತನಾಡುವ ನೆಪದಲ್ಲಿ ಅಲ್ಲಿಗೆ ಬಂದು ಬಾಲಕಿಯ ಮೊಬೈಲ್ ನಂಬರ್ ಕೇಳಿದ್ದ. ಬಾಲಕಿ ಕೊಡದೆ ಇದ್ದಾಗ ಆಕೆಯ ಅಜ್ಜಿಯಿಂದ ನಂಬರ್ ಪಡೆದು ಆಕೆ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಬರುವಾಗ ಕರೆ ಮಾಡಿ ಆತನ ಬೈಕ್‌ನಲ್ಲಿ ಬಲವಂತ ಮಾಡಿ ಕುಳ್ಳಿರಿಸಿಕೊಂಡು ಪೇಟೆಯಲ್ಲಿ ಬಿಟ್ಟು ಮರಳಿ ಸಂಜೆ ಶಾಲೆಯಿಂದ ಮನೆಗೆ ವಾಪಸಾಗುವಾಗ ಕರೆ ಮಾಡುವಂತೆ ತಾಕೀತು ಮಾಡುತ್ತಿದ್ದ. ಸೆ. 8ರಂದು ಸಂಜೆ ಆರೋಪಿಯು ಬಾಲಕಿ ಇದ್ದ ಮನೆಗೆ ಬಂದು ಆಕೆಯ ಅಜ್ಜನಿಗೆ ಮದ್ಯಪಾನ ಮಾಡಿಸಿ ಬಾಲಕಿ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದನು. ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದನು. ಬಳಿಕ ಸೆ. 26ರಂದು ಮನೆಯಲ್ಲಿ ಬಾಲಕಿಯ ಅಜ್ಜ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮತ್ತೂಮ್ಮೆ ಮನೆಗೆ ಬಂದು ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡಿರುವ ಕಡಬ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಲ್ಲಡ್ಕ: ಬಾಲಕನಿಗೆ ಲೈಂಗಿಕ ದೌರ್ಜನ್ಯ
ಬಂಟ್ವಾಳ: ಕಲ್ಲಡ್ಕದ ಹೊಟೇಲೊಂದಕ್ಕೆ ಪಾರ್ಸೆಲ್ ತರಲು ತೆರಳಿದ್ದ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಹೊಟೇಲ್ ಮಾಲಕ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಅ. 4 ರಂದು ನಡೆದಿದೆ. ಕಲ್ಲಡ್ಕದಲ್ಲಿ ವಿಟ್ಲ ರಸ್ತೆಯಲ್ಲಿರುವ ಹೊಟೇಲ್ ಮಾಲಕ ಮಹಮ್ಮದ್ ಅಶ್ರಫ್ ದೌರ್ಜನ್ಯ ನಡೆಸಿದ ಆರೋಪಿ. ಬಾಲಕನು ಕೋಳಿ ಟಿಕ್ಕಾಕ್ಕಾಗಿ ಹೊಟೇಲ್‌ಗೆ ಹೋಗಿದ್ದ ವೇಳೆ ಚೀಲಕ್ಕಾಗಿ ಹೊಟೇಲ್ ಒಳಗೆ ಕರೆಸಿ ಬಳಿಕ ತೋಟಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಈ ವಿಚಾರವನ್ನು ಮನೆಯಲ್ಲಿ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.