ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನೇ ಮಾರಕಾಸ್ತ್ರದಿಂದ ಭೀಕರವಾಗಿ ಹತ್ಯೆಗೈದಿರುವ ಘಟನೆ ಬೇಗೂರು ಠಾಣೆ ವ್ಯಾಪ್ತಿಯ ಮಾಂಸದ ಅಂಗಡಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಶಿವಾಜಿನಗರ ನಿವಾಸಿ ಅಲಿ ಅಫ್ಗರ್(47) ಕೊಲೆಯಾದವ. ಕೃತ್ಯ ಎಸಗಿದ ಅಕ್ಬರ್(48) ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಆರೋಪಿ ಅಕ್ಬರ್ ಈ ಹಿಂದೆ ಅಲಿ ಅಫÕರ್ ಸಹೋದರನ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಹಣಕಾಸಿನ ವಿಚಾರಕ್ಕೆ ಜಗಳ ಮಾಡಿಕೊಂಡು ಕೆಲಸ ಬಿಟ್ಟಿದ್ದ ಅಕ್ಬರ್, ಒಂದು ವರ್ಷದಿಂದ ಎ.ಕೆ. ಕಾಲೋನಿಯಲ್ಲಿರುವ ಅಲಿ ಅಘ್ಗರ್ನ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ವಿವಿಧ ಕಾರಣ ನೀಡಿ 3.5 ಲಕ್ಷ ರೂ. ಪಡೆದುಕೊಂಡಿದ್ದ. ಆದರೆ, ವಾಪಸ್ ಕೊಟ್ಟಿರಲಿಲ್ಲ. ಈ ಮಧ್ಯೆ ಕೆಲ ದಿನಗಳ ಹಿಂದೆ ಅಲಿ ಅಘ್ಗರ್, “ನಾನು ಬೇರೆ ಅಂಗಡಿ ತೆರೆಯಬೇಕಿದೆ, ಹಣ ವಾಪಸ್ ಕೊಡು’ ಎಂದು ಆರೋಪಿ ಬಳಿ ಕೇಳಿದ್ದರು. ಆಗ ಆರೋಪಿ ಸದ್ಯ ಹಣವಿಲ್ಲ ಎಂದಿದ್ದಾನೆ. ಆಗ ಅಘ್ಗರ್ ಕನಿಷ್ಠ 20 ಸಾವಿರ ರೂ. ಕೊಡುವಂತೆ ಕೇಳಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಗಲಾಟೆ ಆಗಿದ್ದು, ಅದು ವಿಕೋಪಕ್ಕೆ ಹೋದಾಗ ಕೋಪಗೊಂಡ ಆರೋಪಿ, ಅಲ್ಲೇ ಇದ್ದ ಮಾರಕಾಸ್ತ್ರದಿಂದ ಅಲಿ ಅಫÕರ್ನ ತಲೆಗೆ ಹೊಡೆದು ಹತ್ಯೆಗೈದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸೋಕೋ ಟೀಂ ಜತೆ ಭೇಟಿ ನೀಡಿ ಪರಿಶೀಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.