Advertisement

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

01:03 PM May 18, 2024 | Team Udayavani |

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ ಪ್ರಕರಣ ಬೇಧಿಸಿರುವ ಸಂಪಂಗಿರಾಮನಗರ ಠಾಣೆ ಪೊಲೀಸರು, ಒಡಿಶಾ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಒಡಿಶಾ ಮೂಲದ ರಂಜಿತ್‌ ಪ್ರಧಾನ್‌(30) ಮತ್ತು ರಮೇಶ್‌(32) ಬಂಧಿತರು.

ಆರೋಪಿಗಳು ಮೇ 9ರಂದು ಕೆ.ಎಸ್‌.ಗಾರ್ಡನ್‌ ನಿವಾಸಿ ಸತ್ಯ ಎಂಬಾತನ ಜತೆ ಜಗಳ ಮಾಡಿ, ತಳ್ಳಿದ್ದು, ಆತ ವಿದ್ಯುತ್‌ ತಂತಿ ಮೇಲೆ ಬಿದ್ದು ಮೃತಪಟ್ಟಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಒಂದೂವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಆರೋಪಿಗಳು, ಸಂಪಂಗಿರಾಮನಗರದ ಮಿಷನ್‌ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಯೇ ವಾಸವಾಗಿದ್ದರು. ಮೇ 9ರಂದು ತಡರಾತ್ರಿ ಸತ್ಯ ಮದ್ಯದ ಅಮಲಿನಲ್ಲಿ ಆರೋಪಿಗಳು ವಾಸ್ತವ್ಯ ಹೂಡಿದ್ದ ನಿರ್ಮಾಣ ಹಂತದ ಕಟ್ಟಡಕ್ಕೆ ಬಂದಿದ್ದಾನೆ. ಅದನ್ನು ಕಂಡ ಆರೋಪಿಗಳು, ಯಾರು ನೀನು? ಯಾಕೆ ಬಂದಿರುವೇ? ಎಂದು ಪ್ರಶ್ನಿಸಿದ್ದಾರೆ. ಆಗ ಆರೋಪಿಗಳು ಮತ್ತು ಸತ್ಯ ನಡುವೆ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದಾಗ, ಸತ್ಯನನ್ನು ಆರೋಪಿಗಳು ಜೋರಾಗಿ ತಳ್ಳಿದ್ದಾರೆ. ಆತ ರಸ್ತೆ ಬದಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಮೇಲೆ ಬಿದ್ದಿದ್ದು, ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅದರಿಂದ ಗಾಬರಿಗೊಂಡ ಆರೋಪಿಗಳು, ಸತ್ಯನ ಮೃತದೇಹವನ್ನು ಪಕ್ಕದಲ್ಲೇ ನಿರ್ಮಾಣವಾಗುತ್ತಿದ್ದ ಮತ್ತೂಂದು ಕಟ್ಟಡದ ಬಳಿ ಎಸೆದು ಪರಾರಿಯಾಗಿದ್ದರು.

ಮೇ 10ರಂದು ಬೆಳಗ್ಗೆ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಅಕ್ಕ-ಪಕ್ಕದ ನಿವಾಸಿಗಳನ್ನು ವಿಚಾರಿಸಿದಾಗ ಮಾಹಿತಿ ಸಿಕ್ಕಿರಲಿಲ್ಲ. ಕೆಲ ದಿನಗಳ ಬಳಿಕ ಸ್ಥಳೀಯ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಮೃತ ವ್ಯಕ್ತಿಯ ಹೆಸರು ಸತ್ಯ ಎಂಬುದು ಗೊತ್ತಾಗಿದೆ. ಬಳಿಕ ಆತನ ಪೋಷಕರಿಗೆ ಮಾಹಿತಿ ನೀಡಿದಾಗ, ಅವರು, ಪುತ್ರ ಪ್ರೀತಿಸುತ್ತಿದ್ದ ಅಪ್ರಾಪ್ತೆಯ ಕುಟುಂಬ ಸದಸ್ಯರ ವಿರುದ್ಧ ದೂರು ನೀಡಿದ್ದರು. ಆದರೆ, ಅವರು ಕೂಡ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

Advertisement

ಆ ನಂತರ ಅನುಮಾನದ ಮೇರೆಗೆ ಮೃತದೇಹ ಪತ್ತೆಯಾದ ಪಕ್ಕದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 304(ಕೊಲೆಗೆ ಸಮನಾಗದ ನರಹತ್ಯೆ) ಅಡಿ ಕೇಸ್‌ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮೃತ ಯುವಕ ಪೋಕ್ಸೋ ಪ್ರಕರಣದ ಆರೋಪಿ: ಮೃತ ಸತ್ಯನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆತನನ್ನು ಕೆಲ ತಿಂಗಳ ಹಿಂದೆ ಬಂಧಿಸಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಜಾಮೀನು ಪಡೆದು ಹೊರಬಂದಿದ್ದ ಆತ, ಜೀವನ ನಿರ್ವಹಣೆಗಾಗಿ ಪ್ಲಂಬರ್‌ ಕೆಲಸ ಮಾಡಿಕೊಂಡಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next