ಬೆಂಗಳೂರು: ಆಸ್ತಿಯ ವಿಚಾರಕ್ಕೆ ಸಂಬಂಧಿಕನೇ ಇಬ್ಬರು ವ್ಯಾಪಾರಿಗಳನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ಬುಧವಾರ ಸಂಜೆ ಕುಂಬಾರಪೇಟೆಯ ಅಂಗಡಿಯೊಂದರಲ್ಲಿ ನಡೆದಿದೆ.
ಪದ್ಮನಾಭನಗರದ ಸುರೇಶ್(55), ಮಹೇಂದ್ರ (58) ಕೊಲೆಯಾದವರು.
ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ಕುಂಬಾರ ಪೇಟೆಯಲ್ಲಿರುವ ಹರಿ ಮಾರ್ಕೇಟಿಂಗ್ ಎಂಬ ಕಿಚನ್ ಉಪಕರಣ ಮಾರಾಟ ಮಾಡುವ ಅಂಗಡಿಗೆ ನುಗ್ಗಿರುವ ದುಷ್ಕರ್ಮಿಯೊಬ್ಬ ಇಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಕನೇ ಕೃತ್ಯ ಎಸಗಿರುವುದು ಗೊತ್ತಾಗಿದೆ ಎಂದು ಎಂದು ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್ ತಿಳಿಸಿದ್ದಾರೆ.
ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಭದ್ರಿಪ್ರಸಾದ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ರಕ್ಷಣೆ ಮಾಡಲು ಮುಂದಾದವನ ಹತ್ಯೆ: ಸುರೇಶ್ ಮತ್ತು ಮಹೇಂದ್ರ ಇಬ್ಬರು ಸ್ನೇಹಿತರಾಗಿದ್ದು, ಸುರೇಶ್ ಅಂಗಡಿಗೆ ಮಹೇಂದ್ರ ಬಂದಿದ್ದ. ಇನ್ನು ಕೊಲೆಯಾದ ಸುರೇಶ್ ಮತ್ತು ಪೊಲೀಸರ ವಶದಲ್ಲಿರುವ ಆರೋಪಿ ಭದ್ರ ಇಬ್ಬರು ದೂರದ ಸಂಬಂಧಿಕರಾಗಿದ್ದು, ಆಸ್ತಿಯ ವಿಚಾರವಾಗಿ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಭದ್ರ, ಸುರೇಶ್‌ನನ್ನು ಕೊಲೆ ಮಾಡಲು ಉಪ್ಪಾರಪೇಟೆಯ ಅಂಗಡಿಗೆ ಬುಧವಾರ ರಾತ್ರಿ ಆಗಮಿಸಿದ್ದ. ಅಂಗಡಿಗೆ ಬಂದವನೆ ಏಕಾಏಕಿ ಚಾಕುವಿನಿಂದ ಸುರೇಶ್ ಮೇಲೆ ಹಲ್ಲೆ ಮುಂದಾಗಿದ್ದ. ಈ ವೇಳೆ ಆತನ ರಕ್ಷಣೆಗೆ ಧಾವಿಸಿದ್ದ ಮಹೇಂದ್ರನ ಮೇಲು ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಗೆಳೆಯ ಮೇಲೆ ಹಲ್ಲೆಯಾಗುತ್ತಿರುವುದನ್ನು ಗಮನಿಸಿ ಕೂಡಲೇ ಆತನ ರಕ್ಷಣೆಗೆ ಧಾವಿಸಿದ್ದಾನೆ. ಆದರೆ ಆತನ ಮೇಲೆಯೂ ಚಾಕುವಿನಿಂದ ಆರೋಪಿ ಭದ್ರಿ ಪ್ರಸಾದ್ ಹಲ್ಲೆ ನಡೆಸಿದ್ದಾನೆ. ಇರಿತಕ್ಕೆ ಒಳಗಾದ ಸುರೇಶ್ ಅಂಗಡಿಯ ಒಳಗಡೆ ಇದ್ದ ಕುರ್ಚಿ ಮೇಲೆಯೇ ಒದ್ದಾಡಿ ಪ್ರಾಣಬಿಟ್ಟದ್ದು, ಮಹೇಂದ್ರ ಅಂಗಡಿಯ ಹೊರಗಡೆ ಬಿದ್ದು ಒದ್ದಾಡಿ ಪ್ರಾಣಬಿಟ್ಟಿದ್ದಾನೆ. ಇನ್ನು ಆರೋಪಿ ಭದ್ರಿ ಪ್ರಸಾದ್ ಎಚ್ ಎಸ್‌ಆರ್ ಲೇಔಟ್‌ನಲ್ಲಿ ಎಲೆಕ್ಟ್ರಿಕಲ್ ಶಾಪ್ ಇಟ್ಟುಕೊಂಡಿದ್ದಾನೆ. ಸುರೇಶ್‌ಗೂ ಹಾಗೂ ಭದ್ರಿಪ್ರಸಾದ್‌ಗೆ ಆಸ್ತಿಯ ವಿಚಾರಕ್ಕೆ ಜಗಳವಾಗಿತ್ತು ಎಂದು ಪೊಲೀಸರು ಹೇಳಿದರು.
ಬುಧವಾರ ರಾತ್ರಿ ಕುಂಬಾರ ಪೇಟೆಯ ಅಂಗಡಿಯೊಂದರಲ್ಲಿ ಜೋಡಿ ಕೊಲೆ ಮಾಡಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿ ಕನೇ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗು ತ್ತಿದೆ. ತನಿಖೆ ಮುಂದುವರಿದಿದೆ.
-ಎಚ್.ಟಿ.ಶೇಖರ್, ಕೇಂದ್ರ ವಿಭಾಗದ ಡಿಸಿಪಿ