Advertisement

ಆಸ್ತಿಗಾಗಿ ತಂದೆಯ ಮೇಲೆ ಬಿಸಿನೀರು ಎರಚಿ ಚಾಕುವಿನಿಂದ ಇರಿದು ಕೊಂದ ಡ್ರಗ್ಸ್‌ ವ್ಯಸನಿ!

10:50 AM Dec 31, 2020 | Team Udayavani |

ಬೆಂಗಳೂರು: ಆಸ್ತಿ ವಿಚಾರಕ್ಕೆ ನಿವೃತ್ತ ಆರ್‌ಬಿಐ ಅಧಿಕಾರಿಯೊಬ್ಬರು ಪುತ್ರನಿಂದಲೇ ಹತ್ಯೆಗೀಡಾಗಿರುವ ಘಟನೆ ಭಾರತೀನಗರ
ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಆರ್‌ಬಿಐ ಲೇಔಟ್‌ ನಿವಾಸಿ ಅಮರನಾಥ್‌ (61) ಕೊಲೆಯಾದವರು. ಈ ಸಂಬಂಧ ಅವರ ಪುತ್ರ ಆರೋಪಿ ಮನಾಂಕ್‌ (27) ಎಂಬಾತನನ್ನು ಬಂಧಿಸಲಾಗಿದೆ.

ಅಮರನಾಥ್‌ 1 ವರ್ಷದ ಹಿಂದಷ್ಟೇ ನಿವೃತ್ತಿ ಹೊಂದಿದ್ದು, ಪತ್ನಿಗೆ ವಿಚ್ಛೇಧನ ನೀಡಿದ್ದಾರೆ. ಮುಂಬೈನಲ್ಲಿ ಪುತ್ರ ಮನಾಂಕ್‌ ಜತೆ ವಾಸವಾಗಿದ್ದರು.

ಬೆಂಗಳೂರಿನ ಆರ್‌ಬಿಐ ಲೇಔಟ್‌ನಲ್ಲಿ ಹೊಸ ಮನೆ ನಿರ್ಮಾಣ ಮಾಡಲು ಕೆಲ ತಿಂಗಳಿಂದ ಆರ್‌ಬಿಐ ಲೇಔಟ್‌ನ ಬಾಡಿಗೆ
ಮನೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ ವಿಪರೀತ ಮಾದಕ ವಸ್ತು ವ್ಯಸನಿ ಆಗಿದ್ದ ಮನಾಂಕ್‌ 3 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ತಂದೆ ಜತೆ ಆಸ್ತಿ ವಿಚಾರಕ್ಕೆ ಜಗಳವಾಡಿದ್ದ. ಹೀಗಾಗಿ ತಂದೆ ಅಮರನಾಥ್‌, ತನ್ನ ಪರಿಚಯಸ್ಥ ಆಪ್ತ ಸಮಾಲೋಚರ ಬಳಿ ಕರೆದೊಯ್ದು ಪುತ್ರನಿಗೆ ಆಪ್ತ ಸಮಾಲೋಚನೆ ಕೊಡಿಸಿದ್ದರೆಂದು ಪೊಲೀಸರು ಹೇಳಿದರು.

ಇದನ್ನೂ ಓದಿ:ವಿಭಿನ್ನ ಕರಪತ್ರದಿಂದ ಗಮನ ಸೆಳೆದ ಕಲ್ಕೆರೆಯ ಗಂಗಮ್ಮ ಪಡೆದ ಮತ ಎಷ್ಟು ಗೊತ್ತಾ?

Advertisement

ತಂದೆಯನ್ನು ಕೊಲ್ಲುವುದಾಗಿ ಹೇಳಿದ್ದ: ಆಪ್ತ ಸಮಾಲೋಚನೆ ವೇಳೆ ಆರೋಪಿ ಮನಾಂಕ್‌ ತಂದೆ-ತಾಯಿಯನ್ನು ಕೊಂದರೆ ಎಲ್ಲಾ ಆಸ್ತಿ ತನಗೆ ಸಿಗುತ್ತದೆ ಅಲ್ಲವೇ? ಎಂದು ಆಪ್ತ ಸಮಾಲೋಚಕರನ್ನು ಪ್ರಶ್ನಿಸಿದ್ದಾನೆ. ಅದರಿಂದ ದಿಗ್ಭ್ರಮೆಗೊಂಡ ಆಪ್ತಸಮಾಲೋಚಕರು, ಈ ವಿಚಾರವನ್ನು ಅಮರನಾಥ್‌ ಬಳಿ ಹೇಳಿದ್ದರು.

ಆದರೆ, ಅಮರನಾಥ್‌ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಅಲ್ಲದೆ, ಮಂಗಳವಾರ ರಾತ್ರಿ ಮನೆಗೆ ಊಟಕ್ಕೆ ಬರುವಂತೆ ಆಪ್ತ ಸಮಾಲೋಚಕರಿಗೆ ಅಮರನಾಥ್‌ ಆಹ್ವಾನ ನೀಡಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಡ್ರಗ್ಸ್‌ ಅಮಲಿನಲ್ಲೇ ಆರೋಪಿ, ಕುಳಿತಿದ್ದ ತಂದೆ ಮೇಲೆ ಬಿಸಿ ನೀರನ್ನು ಎರಚಿದ್ದಾನೆ. ಅದರಿಂದ ಗಂಭೀರವಾಗಿ ಗಾಯಗೊಂಡ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಳಿಕ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಕೆಲ ಹೊತ್ತು ಮೃತ ದೇಹದ ಬಳಿಯೇ ಕುಳಿತುಕೊಂಡಿದ್ದ. ಮತ್ತೂಂದೆಡೆ ಊಟಕ್ಕೆಂದು ಮನೆಗೆ ಬಂದ ಆಪ್ತ ಸಮಾಲೋಚಕರು, ಘಟನೆ ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆಸ್ತಿ ಪರಸ್ತ್ರೀಗೆ ಬರೆಯುತ್ತಾರೆ…
ಆರೋಪಿ ವಿಚಾರಣೆ ವೇಳೆ ಕೆಲ ಮಾಹಿತಿ ಬಹಿರಂಗ ಪಡಿಸಿದ್ದಾನೆ. “ತಾನೂ ವಿಪರೀತ ಮಾದಕ ವಸ್ತು ವ್ಯಸನಿಯಾಗಿದ್ದು, ತನಗೆ ತಂದೆ ಹಣ ಕೊಡುತ್ತಿರಲಿಲ್ಲ. ಸಾಕಷ್ಟು ಬಾರಿ ಕೇಳಿದರೂ ಡ್ರಗ್ಸ್‌ ಸೇವನೆಗೆ ಹಣ ಕೊಡುವುದಿಲ್ಲ ಎಂದು ನಿಂದಿಸಿದ್ದರು.
ಅಲ್ಲದೆ, ತಂದೆ ಅಮರನಾಥ್‌, ತನ್ನ ತಾಯಿಗೆ ವಿಚ್ಛೇಧನ ನೀಡಿ, ಪರಸ್ತ್ರೀ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ. ಹೀಗಾಗಿ ಆಸ್ತಿ ಆಕೆಗೆ ಬರೆಯುತ್ತಾರೆ ಎಂದು ಭಾವಿಸಿ ಕೊಲೆಗೈದೆ. ಡ್ರಗ್ಸ್‌ ಅಮಲಿನಲ್ಲಿ ಕೃತ್ಯ ಎಸಗಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next