ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್ ಅವರ ದೂರದ ಸಂಬಂಧಿ ಸಿದ್ಧಾರ್ಥ್ ದೇವೇಂದರ್ ಸಿಂಗ್ (28) ಎಂಬವರನ್ನು ಹತ್ಯೆಗೈದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ವಿನೋದ್ (34) ಬಂಧಿತ. ಪ್ರಮುಖ ಆರೋಪಿಗಾಗಿ ಆಂಧ್ರಪ್ರದೇಶದಲ್ಲಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಯಾವ ಕಾರಣಕ್ಕೆ ಹತ್ಯೆಗೈಯಲಾಗಿದೆ ಎಂಬುದು ಪ್ರಮುಖ ಆರೋಪಿ ಬಂಧನದ ಬಳಿಕ ಪತ್ತೆಯಾಗಬೇಕಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ವೈಯಕ್ತಿಕ ಹಾಗೂ ಉದ್ಯಮ ವಿಚಾರದಲ್ಲಿ ಕೊಲೆಯಾಗಿದೆ ಎಂದು ಹೇಳಲಾಗಿದೆ. ಸಿದ್ಧಾರ್ಥ್ ದೇವೇಂದರ್ ಸಿಂಗ್‌ನ ಹತ್ಯೆಗೆ ಸುಪಾರಿ ಕೊಡಲಾಗಿದೆ ಎಂಬ ಅನುಮಾನಗಳು ಮೂಡಿವೆ. ಪ್ರಕರಣದ ಮಾಸ್ಟರ್ ಮೈಂಡ್ ಸುಪಾರಿ ಹಂತಕ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಮಧ್ಯೆ ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿ ವಿನೋದ್ ಆತ್ಮಹತ್ಯೆ ಯತ್ನಿಸಿದ್ದ ಎಂದು ಮೂಲಗಳು ತಿಳಿಸಿವೆ.
ರೈಲಿಗೆ ತಲೆ ಕೊಡಲು ಯತ್ನ:
ಜ.19ರಂದು ಮನೆಯಿಂದ ಹೊರಟ ಸಿದ್ಧಾರ್ಥ ದೇವೇಂದರ್ ಸಿಂಗ್ ಅವರನ್ನು ನೆಲ್ಲೂರು ಅರಣ್ಯ ಪ್ರದೇಶದಲ್ಲಿ ಹತ್ಯೆಗೈದು ಹೂತು ಹಾಕಿದ್ದ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆಗಿಳಿಸಿದ್ದರು. ಅಲ್ಲದೆ, ಆರೋಪಿ ವಿನೋದ್ ಬಂಧನಕ್ಕೂ ಮುಂದಾಗಿದ್ದರು. ತನ್ನನ್ನು ಪೊಲೀಸರು ಬಂಧಿಸಲಿದ್ದಾರೆ ಎಂದು ಆತಂಕಗೊಂಡ ಆರೋಪಿ, ಭಯದಿಂದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ. ಈ ವಿಚಾರ ತಿಳಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಆರೋಪಿ ಮುಖ ಮತ್ತು ಕೈ, ಕಾಲುಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾನೆ. ಇನ್ನು ಆಂಧ್ರಪ್ರದೇಶಕ್ಕೆ ತೆರಳಿರುವ ಅಮೃತಹಳ್ಳಿ ಪೊಲೀಸರ ವಿಶೇಷ ತಂಡ ಅಲ್ಲಿಯೇ ಬಿಡುಬಿಟ್ಟಿದ್ದು, ಪ್ರಮುಖ ಆರೋಪಿಯ ಬಂಧನಕ್ಕೆ ಶೋಧ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ದಾರ್ಥ್ ಸ್ವಂತ ಉದ್ಯಮ ನಡೆಸುತ್ತಿದ್ದು, ಅಮೃತಹಳ್ಳಿಯ ದಾಸರಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೆ ವಾಸವಾಗಿದ್ದರು. ಜ.19ರಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ತನ್ನ ತಂದೆಗೆ ವಾಟ್ಸ್ ಆ್ಯಪ್ ಮೂಲಕ “ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಾಕ್ಕೆ ಹೋಗುತ್ತಿರುವುದಾಗಿ’ ತಿಳಿಸಿದ್ದರು. ಆದರೆ, ಅಮೆರಿಕಾಕ್ಕೂ ಹೋಗದೆ, ವಾಪಸ್ ಮನೆಗೂ ಬಂದಿಲ್ಲ. ಅದರಿಂದ ಅನುಮಾನಗೊಂಡು ಆತನಿಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಆತ ನಾಪತ್ತೆಯಾಗಿರುವುದಾಗಿ ದೇವೇಂದರ್ ಅಮೃತ್‌ಹಳ್ಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.