Advertisement

ಆಸ್ತಿಗಾಗಿ ದೊಡ್ಡಮ್ಮನ ಮಗನ ಕೊಲೆ : ಎಂಟು ತಿಂಗಳ ಬಳಿಕ ಆರೋಪಿ ಅಭಿಷೇಕ ಶೇಟ್‌ ಬಂಧನ

10:25 AM Nov 18, 2020 | sudhir |

ಮುಂಡಗೋಡ: ಎಂಟು ತಿಂಗಳ ಹಿಂದೆ ತಾಲೂಕಿನ ಕಾತೂರ ಅರಣ್ಯದಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವದ ಗುರುತು ಹಾಗೂ ಕೊಲೆಗಾರರನ್ನು ಪತ್ತೆ ಹಚ್ಚುವಲ್ಲಿ ಇಲ್ಲಿನ ಪೊಲೀಸ್‌ ತಂಡ ಯಶಸ್ವಿಯಾಗಿದೆ.

Advertisement

ಏಪ್ರಿಲ್‌ ತಿಂಗಳಲ್ಲಿ ತಾಲೂಕಿನ ಕಾತೂರ ಸನಿಹದ ಅರಣ್ಯದ ಕೆರೆ ದಡದಲ್ಲಿ ಕೊಳೆತ ಸ್ಥಿತಿಯಲ್ಲಿ ಮಾನವನ ಎಲಬುಗಳು ಪತ್ತೆಯಾಗಿದ್ದವು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಇಲ್ಲಿನ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಸಿದ್ದರು. ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಆದರೆ ಈ ವ್ಯಕ್ತಿ ಕಾಣೆಯಾದ ಬಗ್ಗೆ ಎಲ್ಲಿಯೂ ದೂರು ದಾಖಲಾಗಿರಲಿಲ್ಲ. ಇದರಿಂದಾಗಿ ಕೊಲೆಯಾದ ವ್ಯಕ್ತಿ ಯಾರು? ಕೊಲೆ ಮಾಡಿದವರ್ಯಾರು? ಎಂಬ ಪ್ರಶ್ನೆ ಕಾಡುತ್ತಿತ್ತು.

ಸತತ ಪ್ರಯತ್ನದಿಂದ ಪೊಲೀಸರು ಕೊಲೆಯಾದ ವ್ಯಕ್ತಿ ಹುಬ್ಬಳ್ಳಿ ನವನಗರದ ವರದರಾಜ ಶ್ರೀನಿವಾಸ ನಾಯಕ (32) ಎಂದು ಪತ್ತೆ ಹಚ್ಚಿದ್ದಾರೆ. ವರದರಾಜನ ಚಿಕ್ಕಮ್ಮನ ಮಗ ಅಭಿಷೇಕ ಶೇಟ್‌ ಕೊಲೆ ಆರೋಪಿಯಾಗಿದ್ದಾನೆ. ವರದರಾಜನ ಕೊಲೆ ಮಾಡಿದರೆ ಆತನ ಆಸ್ತಿ ತನಗೆ ಸಿಗುತ್ತದೆ ಎಂಬ ಅತಿಯಾಸೆಯಿಂದ ಸ್ನೇಹಿತರಾದ ಉಣಕಲ್‌ ನಿವಾಸಿಗಳಾದ ಸುರೇಶ ನೂರಪ್ಪ ಲಮಾಣಿ, ರಾಮಕುಮಾರ ಕೃಷ್ಣ ತಾಟಿಸಮ್ಲಾ ಜೊತೆ ಸೇರಿ ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಟ್ರಕ್ ಗಳ ನಡುವೆ ಭೀಕರ ಅಪಘಾತ: 11 ಮಂದಿ ದಾರುಣ ಸಾವು, 17 ಜನರಿಗೆ ಗಂಭೀರ ಗಾಯ

ವರದರಾಜನನ್ನು ಶಿರಸಿ ಕಡೆಗೆ ಪ್ರವಾಸಕ್ಕೆ ಹೋಗೋಣ ಎಂದು ಕಾರಿನಲ್ಲಿ ಕರೆದುಕೊಂಡು ಬಂದು ಕಾತೂರ ಸನಿಹದಲ್ಲಿ ಕೊಲೆ ಮಾಡಿ, ನಂತರ ಕಾತೂರ ಗ್ರಾಮದ ಸ್ನೇಹಿತ ಬಸವರಾಜ ಅಜ್ಜಮ್ಮನವರ ಎಂಬವನ ಸಹಾಯ ಪಡೆದು ಕಾತೂರ ಸನಿಹದ ಅರಣ್ಯದಲ್ಲಿ ಶವವನ್ನು ಮುಚ್ಚಿ ಹಾಕಿ ಹೋಗಿದ್ದರು.

Advertisement

ಇದೀಗ ಪೊಲೀಸರು ಈ ನಾಲ್ಕು ಜನ ಆರೋಪಿಗಳನ್ನು ಹಾಗೂ ಕೊಲೆಗೆ ಬಳಸಿದ್ದ ಸ್ವಿಪ್ಟ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್‌ಪಿ ಶಿವಪ್ರಕಾಶ ದೇವರಾಜು ಹಾಗೂ ಎಡಿಶನಲ್‌ ಎಸ್‌ಪಿ. ಎಸ್‌.ಬದರಿನಾಥ, ಶಿರಸಿ ಡಿವೈಎಸ್‌ಪಿ ಜಿ.ಟಿ. ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಪ್ರಭುಗೌಡ ಕಿರದಳ್ಳಿ ಹಾಗೂ ಪಿಎಸ್‌ಐ ಬಸವರಾಜ ಮಬನೂರ, ಮೋಹಿನಿ ಶೆಟ್ಟಿ ಹಾಗೂ ಎಎಸ್‌ಐ ಅಶೋಕ ರಾಠೊಡ, ಸಿಬ್ಬಂದಿ ಶರತ್‌ ದೇವಳ್ಳಿ, ಭಗವಾನ ಗಾಂವ್ಕರ, ವಿನೋದಕುಮಾರ ಜೆ.ಬಿ, ರಾಘವೇಂದ್ರ ನಾಯ್ಕ, ಅರುಣ ಬಾಗೇವಾಡಿ, ಕುಮಾರ ಬಣಕಾರ, ವಿವೇಕ ಪಟಗಾರ, ತಿರುಪತಿ ಚೌಡಣ್ಣವರ, ರಾಘವೇಂದ್ರ ಪಟಗಾರ ಹಾಗೂ ಎಸ್‌ಪಿ ಕಚೇರಿ ಸಿಡಿಆರ್‌ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.