Advertisement
ಹೌದು…,ಕಷ್ಟಪಟ್ಟು ದುಡಿದು ನಾಲ್ಕು ಕಾಸು ಉಳಿಸಿಕೊಂಡು ಸಂಸ್ಕೃತಿಯ ಸಂಕೇತವಾದ ತಾಳಿ,ಬೆಂಡೋಲಿ,ಮೂಗುತಿಯನ್ನು ಕೂಡ ಹೆಣ್ಣು ಮಕ್ಕಳು ಇಟ್ಟುಕೊಳ್ಳದಷ್ಟು ಕಾಲ ಕೆಟ್ಟು ಹೋಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಕಳೆದ ಎರಡು ತಿಂಗಳಿನಲ್ಲಿ ಇಬ್ಬರು ಮಹಿಳೆಯರನ್ನು ಅಪಹರಿಸಿ ಕೊಲೆ ಮಾಡಿ ಅವರ ಮೈಮೇಲೆ ಇದ್ದ ಬಂಗಾರದ ಆಭರಣ ಕದ್ದು ಅವರ ಶವವನ್ನು ಸುಟ್ಟು ಹಾಕಿದ ಪ್ರಕರಣವನ್ನು ಧಾರವಾಡ ಜಿಲ್ಲೆಯ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೇಧಿಸಿದ್ದು ಕಡೆಗೂ ಪೈಶಾಚಿಕ ಕೃತ್ಯ ವೆಸಗಿದ ಆರು ಆರೋಪಿಗಳನ್ನು ಒದ್ದು ಒಳಗೆ ಹಾಕಿದ್ದಾರೆ.
Related Articles
Advertisement
ಉತ್ತರ ವಿಭಾಗದ ಐಜಿಪಿ ಎನ್.ಸತೀಶಕುಮಾರ್, ಹುಬ್ಬಳ್ಳಿ-ಧಾರವಾಡ ನ ಪೊಲೀಸ್ ಆಯುಕ್ತ ಲಾಭುರಾಮ್, ಡಿಎಸ್‌ಪಿ ಎಂ.ಬಿ.ಸಂಕದ, ನೇತೃತ್ವದ ಈ ತಂಡದಲ್ಲಿ ಕಲಘಟಗಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಶೈಲ ಕೌಜಲಗಿ, ರಮೇಶ ಗೋಕಾಕ, ಪ್ರಮೋದ ಯಲಿಗಾರ, ಜಯಪಾಲ ಪಾಟೀಲ, ಬಿಎಸ. ಮಂಟೂರ, ಬಿ.ಎನ್. ಸಾತನ್ನವರ ಒಳಗೊಂಡ ತನಿಖಾ ತಂಡ ಪ್ರಕರಣ ಬೇಧಿಸಿದೆ.
ಪೈಶಾಚಿಕತೆ ಮೆರೆದ ಆರೋಪಿಗಳು :
ಹಣ,ಚಿನ್ನಕ್ಕಾಗಿ ಕೊಲೆ ಮಾಡುವ ಅನೇಕ ಪ್ರಕರಣಗಳು ನಡೆಯುತ್ತವೆ. ಆದರೆ ಇಲ್ಲಿ ಹಣಕ್ಕಾಗಿಯೇ ಕೊಲೆ ಮಾಡಲು ನಿಶ್ಚಯಿಸಿ, ಸ್ಕೆಚ್ ಹಾಕಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡಲಾಗಿದೆ. ಮೊದಲು ಮಹಿಳೆಯರ ತಲೆ ಒಡೆದು ನಂತರ ಹೊಟ್ಟೆ ಹರಿದು ಕೈ,ಕಾಲುಗಳನ್ನು ಕತ್ತರಿಸಿ ಮುರಿದು ಚೀಲದಲ್ಲಿ ತುಂಬಿಕೊಂಡು ಹೋಗಿ ರಾಷ್ಟ್ರೀಯ ಹೆದ್ದಾರಿ 63 ರ ಅಕ್ಕಪಕ್ಕ ಪೆಟ್ರೋಲ್ ಸುರಿದು ಸುಡಲಾಗಿದೆ. ಅಷ್ಟೇಯಲ್ಲ, ಕೊಲೆ ಮಾಡಿದ್ದಕ್ಕೆ ಯಾವುದೇ ದಾಖಲೆ,ಸಾಕ್ಷಿಗಳು ಸಿಕ್ಕದಂತೆ ಮಾಡಲು ಯತ್ನಿಸಿದ್ದಾರೆ. ಮೊದಲ ಪ್ರಕರಣ ಮೇ 11,2022 ರಂದು ಮಹಿಳೆಯನ್ನು ಅವಳ ಮನೆಯಲ್ಲೆ ಕೊಲೆ ಮಾಡಿ ಸಾಗಿಸಿದ್ದರೆ, ಎರಡನೇ ಮಹಿಳೆಯನ್ನು ಜು 2 ರಂದು ಎಮ್ಮೆ ಮೇಯಿಸುತ್ತಿರುವಾಗಲೇ ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿ ಚೀಲದಲ್ಲಿ ತುಂಬಿಕೊಂಡು ಮಾರುತಿ ವ್ಯಾನ್‌ನಲ್ಲಿ ಸಾಗಿಸಿ ತಂಬೂರು ಕ್ರಾಸ್ ಬಳಿ ಸುಡಲಾಗಿತ್ತು. ಮಹಿಳೆಯರನ್ನು ಇಷ್ಟೊಂದು ಕ್ರೂರವಾಗಿ ಕೊಲೆ ಮಾಡಿದ ಪಾತಕರಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಎನ್‌ಕೌಂಟರ್ ಮಾಡಬೇಕಿತ್ತು ? :
ಮುಗ್ದ ಮಹಿಳೆಯರನ್ನು ಪೈಶಾಕಿಕವಾಗಿ ನಡೆಸಿಕೊಳ್ಳುವ ಪಾಪಿಗಳಿಗೆ ಎನ್‌ಕೌಂಟರ್ ಶಿಕ್ಷೆಯೇ ಸೂಕ್ತವಲ್ಲವೇ ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಎಸ್‌ಪಿ ಲೋಕೇಶ ಅವರು, ಕಾನೂನು ತನ್ನ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕು. ಪೊಲೀಸರು ಇದಕ್ಕೆ ಹೊರತಾಗಿಲ್ಲ. ಆರೋಪಿಗಳನ್ನು ಬಂಧಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ಕಾನೂನು ಅನ್ವಯ ಅವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಹೇಳಿದರು.
ಮೂರನೇ ಕೊಲೆ ತಪ್ಪಿಸಿದ್ದೇವೆ : ಎಸ್‌ಪಿ ಲೋಕೇಶ :
ಈ ಆರು ಜನ ಆರೋಪಿಗಳು ಮೋಜಿಗೆ ಹಣ ಬೇಕಾದಾಗಲೆಲ್ಲ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದು, ೨ನೇ ಪ್ರಕರಣ ಆಗುತ್ತಿದ್ದಂತೆಯೇ ತೀವ್ರ ಎಚ್ಚರಿಕೆ ವಹಿಸಿ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿದ್ದೇವೆ. ಇಲ್ಲವಾದರೆ ೩ನೇ ಮಹಿಳೆಯೂ ಕೊಲೆಯಾಗಬೇಕಿತ್ತು. ತನಿಖೆಗೆ ಅತ್ಯಂತ ಉತ್ತಮ ಸಹಕಾರ ನೀಡಿದ ಈಶ್ವರ ನಗರ ನಿವಾಸಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. –ಲೋಕೇಶ ಜಗಲಾಸರ,ಎಸ್‌ಪಿ,ಧಾರವಾಡ.