ಬೆಂಗಳೂರು: ವಿವಾಹಿತ ಮಹಿಳೆಗೆ ತನ್ನೊಂದಿಗೆ ಅಕ್ರಮ ಸಂಬಂಧ ಬೆಳೆಸುವಂತೆ ಪೀಡಿಸುತ್ತಿದ್ದ ಆಟೋ ಚಾಲಕನಿಗೆ ಮಹಿಳೆಯ ಪತಿ ಹಾಗೂ ಸಹೋದರ ಸೇರಿ ಮೂವರು ಚಾಕುವಿನಿಂದ ಇರಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ನಾಯಂಡಹಳ್ಳಿ ಪಂತರಪಾಳ್ಯದಲ್ಲಿ ಘಟನೆ ನಡೆದಿದೆ.
ಹೊಸಗುಡ್ಡದಹಳ್ಳಿ ನಿವಾಸಿ ಕಾರ್ತಿಕ್ (26) ಇರಿತಕ್ಕೊಳಗಾದವ. ಸದ್ಯ ಕಾರ್ತಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಮಹಿಳೆಯ ಪತಿ ಸತೀಶ್, ಸಹೋದರ ವಿನೋದ್ ಮತ್ತು ಸೂರ್ಯ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಆಟೋ ಚಾಲಕನಾಗಿರುವ ಕಾರ್ತಿಕ್, ಪಂತರಪಾಳ್ಯದ ವಿವಾಹಿತ ಮಹಿಳೆಯ ಹಿಂದೆ ಬಿದ್ದಿದ್ದ. ಒಂದು ಮಗುವಿನ ತಾಯಿಯಾಗಿರುವ ಆ ಮಹಿಳೆಗೆ ತನ್ನೊಂದಿಗೆ ಅಕ್ರಮ ಸಂಬಂಧ ಬೆಳೆಸುವಂತೆ ಪೀಡಿಸುತ್ತಿದ್ದ. ಆಕೆ ಬುದ್ಧಿ ಹೇಳಿದರೂ ಕಾರ್ತಿಕ್, ಸದಾ ಅವರನ್ನು ಹಿಂಬಾಲಿಸಿ ತೊಂದರೆ ಕೊಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಅಲ್ಲದೆ, ಪದೇ ಪದೆ ಮಹಿಳೆಯ ಮನೆ ಬಳಿ ಹೋಗಿ ಅಸಭ್ಯವಾಗಿ ವರ್ತಿಸುತ್ತಿದ್ದ. ಮಹಿಳೆ ಎಲ್ಲೇ ಹೋದರೂ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಮಾತನಾಡುತ್ತಿದ್ದ. ಈ ವಿಚಾರ ತಿಳಿದ ಮಹಿಳೆಯ ಪತಿ ಸತೀಶ್ ಮತ್ತು ಸಹೋದರ ವಿನೋದ್, ಕಾರ್ತಿಕ್‌ಗೆ ಬುದ್ಧಿ ಹೇಳಿದ್ದರು. ಆದರೂ ಆತ ತನ್ನ ಕೆಟ್ಟ ಚಾಳಿಯನ್ನು ಮುಂದುವರಿಸಿದ್ದಾನೆ. ಅದರಿಂದ ಕೋಪಗೊಂಡ ಆರೋಪಿಗಳು ಸೋಮವಾರ ರಾತ್ರಿ ಕಾರ್ತಿಕ್ ಮತ್ತೆ ಮಹಿಳೆಯ ಮನೆ ಬಳಿ ಹೋಗಿದ್ದ. ಆಗ ಮನೆಯಲ್ಲೇ ಇದ್ದ ಸತೀಶ್ ಮತ್ತು ವಿನೋದ್, ಸ್ನೇಹಿತ ಸೂರ್ಯ ಕಾರ್ತಿಕ್ ಮೇಲೆ ಹಲ್ಲೆ ನಡೆಸಿ ಹೊಟ್ಟೆ ಹಾಗೂ ತಲೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಘಟನೆ ಸಂಬಂಧ ಕಾರ್ತಿಕ್ ಸಹೋದರ ದೂರು ನೀಡಿದ್ದು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೂವರು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.