ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರರ ಕುಟುಂಬ ಸದಸ್ಯರು, ಯಾವಾಗ ಬೇಕೆಂದರೆ ಆಗ, ವಿದೇಶ ಪ್ರವಾಸದ ವೇಳೆ ಆಟಗಾರರನ್ನು ಭೇಟಿಯಾಗುವಂತಿಲ್ಲ. ಹಾಗೊಂದು ವೇಳೆ ಭೇಟಿಯಾಗಬೇಕೆಂದರೆ, ಬಿಸಿಸಿಐ ಪದಾಧಿಕಾರಿಗಳ ಅನುಮತಿ ಪಡೆಯುವುದು ಅನಿವಾರ್ಯ.
ಇದುವರೆಗೆ ಈ ಅಧಿಕಾರ ನಾಯಕ ಮತ್ತು ತರಬೇತುದಾರರ ಬಳಿಯಿತ್ತು. ಅದನ್ನೀಗ ಬದಲಾಯಿಸಲಾಗಿದೆ. ನಿಯಮಗಳ ಪ್ರಕಾರ ಅರ್ಧ ವಿದೇಶ ಪ್ರವಾಸ ಮುಗಿದ ನಂತರ ಪತ್ನಿಯರು, ಗೆಳತಿಯರು ಆಟಗಾರರನ್ನು ಕೂಡಿಕೊಳ್ಳಬಹುದು.
ಹತ್ತಿಹತ್ತಿರ ಮೂರುವರ್ಷಗಳ ಕಾಲ ಬಿಸಿಸಿಐ ಆಡಳಿತ ನಡೆಸಿದ್ದ, ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳು, ನಿಗದಿಗೆ ಮುನ್ನ ಭೇಟಿ ಮಾಡಬೇಕಾದರೆ, ನಾಯಕ ಮತ್ತು ತರಬೇತುದಾರರನ್ನು ಕೇಳಬೇಕೆಂದು ನಿಯಮ ಮಾಡಿದ್ದರು. ಅದನ್ನು ತಂಡದೊಳಗೆ ಹಲವರು ವಿರೋಧಿಸಿದ್ದರು. ಆಡಳಿತ ವಿಚಾರದಲ್ಲಿ ನಾಯಕನಿಗೇನು ಅಧಿಕಾರ ಎನ್ನುವುದು ಅವರ
ಆಕ್ಷೇಪವಾಗಿತ್ತು.
ಕಳೆದ ವಿಶ್ವಕಪ್ ವೇಳೆ ಒಬ್ಬ ಹಿರಿಯ ಆಟಗಾರ ನಾಯಕನ ಅನುಮತಿ ಪಡೆಯದೇ ತನ್ನ ಪತ್ನಿಯನ್ನು ಜೊತೆಗಿರಿಸಿಕೊಂಡಿದ್ದರು. ಅದು ವಿವಾದದಲ್ಲಿ ಮುಕ್ತಾಯವಾಗಿತ್ತು.