Advertisement

ICC ತಾರತಮ್ಯ ವಿರುದ್ಧ ಕ್ರಿಕೆಟಿಗ ಉಸ್ಮಾನ್‌ ಖ್ವಾಜಾ ಕಿಡಿ

11:19 PM Dec 26, 2023 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯದ ಆರಂಭಕಾರ, ಪಾಕಿಸ್ಥಾನಿ ಮೂಲದ ಕ್ರಿಕೆಟಿಗ ಉಸ್ಮಾನ್‌ ಖ್ವಾಜಾ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯದ ವೇಳೆ ಮತ್ತೆ ಸುದ್ದಿಯಾಗಿದ್ದಾರೆ. ಐಸಿಸಿಯ ತಾರತಮ್ಯ ನೀತಿಯನ್ನು “ಡಬಲ್‌ ಸ್ಟಾಂಡರ್ಡ್‌” ಎಂದು ಜರೆದಿದ್ದಾರೆ.

Advertisement

ಗಾಝಾ ಮೇಲೆ ಇಸ್ರೇಲ್‌ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಿ ಶಾಂತಿಯನ್ನು ಪಾಲಿಸಬೇಕು ಎಂಬ ಜಾಗೃತಿ ಮೂಡಿಸುವುದು ಉಸ್ಮಾನ್‌ ಖ್ವಾಜಾ ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಬಾಕ್ಸಿಂಗ್‌ ಡೇ ಟೆಸ್ಟ್‌ ವೇಳೆ ತಮ್ಮ ಶೂಗಳ ಮೇಲೆ ಆಲಿವ್‌ ಮರದ ಕೊಂಬೆಗಳನ್ನು ಹಿಡಿದಿರುವ ಪಾರಿವಾಳದ ಸ್ಟಿಕ್ಕರ್‌ ಬಳಸಲು ಅನುಮತಿ ಕೋರಿದ್ದರು. ಆದರೆ ಐಸಿಸಿ ಇದನ್ನು ನಿರಾಕರಿಸಿತು.
ಐಸಿಸಿಯ ಈ ನಡೆಗೆ ಪ್ರತಿಕ್ರಿಯಿಸಿರುವ ಉಸ್ಮಾನ್‌ ಖ್ವಾಜಾ, “ಉದ್ದೇಶಪೂರ್ವಕವಾಗಿ ಐಸಿಸಿ ಈ ತಾರತಮ್ಯ ಮಾಡುತ್ತಿದೆ. ಇದು ಐಸಿಸಿಯ ದ್ವಿಮುಖ ನೀತಿಯಾಗಿದೆ’ ಎಂದು ಕಿಡಿಕಾರಿದ್ದಾರೆ.

ಇತರ ನಿದರ್ಶನಗಳು
ಕೂಡಲೇ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಇತರ ಕ್ರಿಕೆಟಿಗರ ಬ್ಯಾಟ್‌ಗಳ ಮೇಲಿದ್ದ ಧಾರ್ಮಿಕ ಚಿಹ್ನೆಗಳ ಚಿತ್ರಗಳನ್ನು ಪೋಸ್ಟ್‌ ಮಾಡಿದರು. ಅದರಂತೆ ಲಬುಶೇನ್‌ ಬ್ಯಾಟ್‌ ಮೇಲೆ ಬೈಬಲ್‌ ಗುರುತು, ಕೇಶವ್‌ ಮಹಾರಾಜ್‌ ಬ್ಯಾಟ್‌ ಮೇಲೆ ಓಂ ಲಾಂಛನ ಇರುವುದನ್ನು ಕಾಣಬಹುದಿತ್ತು. ಇದನ್ನು ಉಲ್ಲೇಖೀಸಿದ ಖ್ವಾಜಾ, ಇದಕ್ಕೆಲ್ಲ ಅನುಮತಿ ನೀಡುವ ಐಸಿಸಿ ನನಗೇಕೆ ಶಾಂತಿಸೂಚಕ ಚಿತ್ರಗಳನ್ನು ಹಾಕಿಕೊಳ್ಳಲು ಸಮ್ಮತಿಸುತ್ತಿಲ್ಲ. ಐಸಿಸಿಯದ್ದು ಡಬಲ್‌ ಸ್ಟಾಂಡರ್ಡ್‌ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಣ್ಣು ಮಕ್ಕಳ ಹೆಸರು
ಇದಕ್ಕೆ ಪ್ರತಿಯಾಗಿ ಶೂಗಳ ಮೇಲೆ ತಮ್ಮ ಹೆಣ್ಣು ಮಕ್ಕಳಾದ ಆಯೇಷಾ ಮತ್ತು ಐಲಾ ಹೆಸರು ಬರೆಸಿಕೊಂಡು ಇನ್ನಿಂಗ್ಸ್‌ ಆರಂಭಿಸಲು ಇಳಿದರು. ಇದಕ್ಕೂ ಅವರು ಐಸಿಸಿ ಅನುಮತಿ ಪಡೆಯದ ಕಾರಣ ತಡೆಯೊಡ್ಡಲಾಯಿತು. ಪ್ಯಾಲಸ್ತೀನ್‌-ಇಸ್ರೇಲ್‌ ಕದನದ ವೇಳೆ ಮಕ್ಕಳ ಹತ್ಯೆಯ ವೀಡಿಯೋ ಕಂಡಾಗಲೆಲ್ಲ ನಾನು ಭಾವುಕನಾಗುತ್ತೇನೆ ಎಂದು ಪರ್ತ್‌ ಟೆಸ್ಟ್‌ ಬಳಿಕ ಖ್ವಾಜಾ ಹೇಳಿದ್ದರು.
ಅಭ್ಯಾಸ ನಡೆಸುತ್ತಿರುವಾಗ ಖ್ವಾಜಾ ತಮ್ಮ ಶೂಗಳ ಮೇಲೆ ಪ್ಯಾಲಸ್ತೀನ್‌ ಧ್ವಜದ ಬಣ್ಣಗಳಲ್ಲಿ “ಸ್ವಾತಂತ್ರ್ಯ ಮಾನವ ಹಕ್ಕು’, “ಎಲ್ಲ ಜೀವಗಳು ಸಮಾನ’ ಎಂಬ ಸಂದೇಶ ಬರೆಸಿಕೊಂಡಿದ್ದರು. ಇದಕ್ಕೂ ಐಸಿಸಿ ವಿರೋಧಿಸಿತು.

ಸರಣಿಗೂ ಮುನ್ನ ಶೂಗಳ ಮೇಲೆ “ಎಲ್ಲ ಜೀವಗಳೂ ಸಮಾನ”, “ಸ್ವಾತಂತ್ರ್ಯ ಮಾನವರ ಹಕ್ಕು’ ಎಂದು ಮುದ್ರಿಸಲು ಐಸಿಸಿ ಅನುಮತಿ ಕೋರಿದಾಗಲೂ ನಿರಾಕರಿಸಲಾಗಿತ್ತು.

Advertisement

ಕಪ್ಪುಪಟ್ಟಿ ಧರಿಸಿ ಆಟ
ಪರ್ತ್‌ ಟೆಸ್ಟ್‌ ವೇಳೆ ಬ್ಯಾಟ್‌ ಮತ್ತು ಶೂಗಳ ಮೇಲೆ ಯಾವುದೇ ಸಂದೇಶ ಬರೆಯಲು ಐಸಿಸಿ ಅನುಮತಿ ನೀಡದಿದ್ದಾಗ ಕಪ್ಪುಪಟ್ಟಿ ಧರಿಸಿ ಆಡಲಿಳಿದಿದ್ದರು. ಆಗಲೂ ಐಸಿಸಿ, ಇದು ಕ್ರಿಕೆಟ್‌ ನಿಯಮಗಳಿಗೆ ವಿರುದ್ಧ ಎಂದು ಸೂಚಿಸಿತ್ತು. ಹೀಗಾಗಿ ತಾನು ಬಾಕ್ಸಿಂಗ್‌ ಡೇ ಟೆಸ್ಟ್‌ ವೇಳೆ ಕಪ್ಪುಪಟ್ಟಿ ಧರಿಸುವುದಿಲ್ಲ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next