ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಪೊಲೀಸರಿಗೆ ಕೊಟ್ಟಿರುವ ದೂರಿನ ಪ್ರಕಾರ ಶಮಿ ವಿರುದ್ಧ ಕೊಲೆ ಯತ್ನದ ಆರೋಪವನ್ನು ಹೊರಿಸಲಾಗಿದೆ.
ಹಸೀನ್ ಜೆಹಾನ್ ತನ್ನ ಪತಿ ಶಮಿಗೆ ಹಲವಾರು ವಿವಾಹೇತರ ಸಂಬಂಧಗಳಿರುವುದಾಗಿ ಆಪಾದಿಸಿದ್ದರು. ಜತೆಗೆ ಶಮಿ ಯ ಹಿರಿಯ ಸಹೋದರನ ವಿರುದ್ಧ ಅತ್ಯಾಚಾರದ ಆರೋಪವನ್ನೂ ಮಾಡಿದ್ದಾರೆ.
“ಕಳೆದ ವರ್ಷ ಉತ್ತರ ಪ್ರದೇಶದಲ್ಲಿನ ನನ್ನ ಮಾವನ ಮನೆಗೆ ಹೋಗಿದ್ದಾಗ ಪತಿ ಶಮಿ ಯ ಹಿರಿಯ ಸಹೋದರ ಹಸೀಬ್ ಅಹ್ಮದ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು” ಎಂದು ಜಹಾನ್ ಇಂದು ಶುಕ್ರವಾರ ಬೆಳಗ್ಗೆ ಹೇಳಿದ್ದಾರೆ.
ಜಹಾನ್ ಅವರ ವಕೀಲ ಝಕೀರ್ ಹುಸೇನ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ಕೋಲ್ಕತ ಪೊಲೀಸರು ಶಮಿ ವಿರುದ್ಧ ಜಾಮೀನುರಹಿತ ಸೆಕ್ಷನ್ ಹಾಕಿದ್ದು ಅವರು ಆತನ ವಿರುದ್ಧ ಕೇಸ್ ಆರಂಭಿಸಲಿದ್ದಾರೆ’ ಎಂದು ಹೇಳಿದರು.
ನಿನ್ನೆ ಗುರುವಾರ ಕೋಲ್ಕತ ಪೊಲೀಸ್ ಜಂಟಿ ಸಿಪಿ (ಕ್ರೈಮ್) ಪ್ರವೀಣ್ ತ್ರಿಪಾಠಿ ಅವರು, “ನಾವು ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಅವರಿಂದ ಅಧಿಕೃತ ದೂರನ್ನು ಸ್ವೀಕರಿಸಿದ್ದೇವೆ’ ಎಂದು ತಿಳಿಸಿದ್ದರು.
ಕೌಟುಂಬಿಕ ಹಿಂಸೆ, ವಿವಾಹೇತರ ಸಂಬಂಧಗಳ ಬಗ್ಗೆ ಪತ್ನಿ ಹಸೀನ್ ಜಹಾನ್ ದೂರಿರುವ ಕಾರಣ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಬಾರಿ ಮೊಹಮ್ಮದ್ ಶಮಿ ಗುತ್ತಿಗೆಯನ್ನು ನವೀಕರಿಸಿಲ್ಲ ಎನ್ನುವುದು ಗಮನಾರ್ಹ.