Advertisement
1992ರ ವಿಶ್ವಕಪ್ ಗೆಲುವಿನ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಲು ಹವಣಿಸುತ್ತಲೇ ಇರುವ ಪಾಕಿಸ್ಥಾನ ನೆರೆಯ ಭಾರತದ ಟ್ರಾÂಕ್‌ನಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಕಂಡೀತು ಎಂಬುದೊಂದು ಪ್ರಶ್ನೆ. ಶ್ರೀಲಂಕಾದಲ್ಲಿ ನಡೆದ ಕಳೆದ ಏಷ್ಯಾ ಕಪ್ ಟೂರ್ನಿಯಲ್ಲಿ ಬೇಗನೇ ನಿರ್ಗಮಿಸಿದ್ದ ಬಾಬರ್ ಪಡೆಗೆ ವಿಶ್ವಕಪ್ ಎಂಬುದು ಎಂದಿಗಿಂತ ದೊಡ್ಡ ಸವಾಲೆಂಬುದರಲ್ಲಿ ಅನುಮಾನವೇ ಇಲ್ಲ.
ತಂಡದ ಪಾಲಿಗೊಂದು ಹೆಮ್ಮೆಯ ಸಂಗತಿ. ಉಳಿದೆಲ್ಲ ತಂಡಗಳು ನೆದರ್ಲೆಂಡ್ಸ್‌ಗಿಂತ ಹೆಚ್ಚಿನ ಅನುಭವ ಹೊಂದಿವೆ. ಒಂದೆರೆಡು ಏರುಪೇರಿನ ಫಲಿತಾಂಶ ದಾಖಲಿಸಿದರೆ ಅದೇ ಡಚ್ಚರ ಪಾಲಿಗೆ ಮೆಚ್ಚುಗೆ ಸೂಚಿಸುವ ಅಂಶವಾಗಲಿದೆ. ಇದು ಇತ್ತಂಡಗಳ ನಡುವಿನ ಮೊದಲ ವಿಶ್ವಕಪ್ ಮುಖಾಮುಖೀ. ಬೇರೆ ಬೇರೆ ಸಂದರ್ಭಗಳಲ್ಲಿ ಪಾಕಿಸ್ಥಾನ-ನೆದರ್ಲೆಂಡ್ಸ್ 6 ಸಲ ಎದುರಾಗಿವೆ. ಆರರಲ್ಲೂ ಪಾಕಿಸ್ಥಾನವೇ ಗೆದ್ದು ಬಂದಿದೆ.
Related Articles
ಇದೇ ಅಂಗಳದಲ್ಲಿ ಆಡಿದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಅನುಭವಿಸಿದ ಸೋಲು ಬಾಬರ್ ಸೇನೆಯನ್ನು ಕಾಡುತ್ತಲೇ ಇದೆ. ಮೊದಲು ನ್ಯೂಜಿಲ್ಯಾಂಡ್ ವಿರುದ್ಧ 335 ರನ್ ಪೇರಿಸಿಯೂ ಇದನ್ನು ಉಳಿಸಿಕೊಳ್ಳಲು ವಿಫಲವಾಯಿತು. ಬಳಿಕ ಆಸ್ಟ್ರೇಲಿಯ ವಿರುದ್ಧ 14 ರನ್ನುಗಳಿಂದ ಎಡವಿತು. ಈ ಎರಡೂ ನೋವಿಗೆ ಉಪಶಮನ ಮಾಡಲೋ ಎಂಬಂತೆ ಪಾಕಿಸ್ಥಾನಕ್ಕೆ ಸುಲಭ ಎದುರಾಳಿಯೇ ಆರಂಭದಲ್ಲಿ ಸಿಕ್ಕಿದೆ ಎನ್ನಬಹುದು.
Advertisement
ಪಾಕಿಸ್ಥಾನ ಬಲಾಡ್ಯ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ. ಆದರೆ ಬೌಲಿಂಗ್ ವಿಭಾಗದಲ್ಲಿ ಗಂಭೀರ ಸಮಸ್ಯೆಗಳಿವೆ. ಇದನ್ನು ಹೋಗಲಾಡಿಸಿಕೊಂಡರೆ ಮುಂದೆ ಬಲಿಷ್ಠ ತಂಡಗಳ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯ. ಇದಕ್ಕೆಲ್ಲ ನೆದರ್ಲೆಂಡ್ಸ್ ಮುಖಾಮುಖೀಯನ್ನು ಅದು ವೇದಿಕೆಯಾಗಿ ಬಳಸಿಕೊಳ್ಳಬೇಕಿದೆ.
ಬ್ಯಾಟಿಂಗ್ ಬಲಿಷ್ಠ, ಆದರೂ…ಇಮಾಮ್ ಉಲ್ ಹಕ್, ಫಖಾರ್ ಜಮಾನ್, ನಾಯಕ ಬಾಬರ್ ಆಜಂ, ಕೀಪರ್ ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಆಹ್ಮದ್ ಅವರೆಲ್ಲ ಬ್ಯಾಟಿಂಗ್ ಸರದಿಯ ಆಧಾರಸ್ತಂಭಗಳಾಗಿದ್ದಾರೆ. ಇವರಲ್ಲಿ ಕೆಲವರಾದರೂ ಕ್ರೀಸ್ ಆಕ್ರಮಿಸಿಕೊಂಡರೆ ದೊಡ್ಡ ಮೊತ್ತಕ್ಕೇನೂ ಕೊರತೆ ಕಾಡದು. ಬಾಬರ್ ಹೇಳಿದಂತೆ, ಹೈದರಾಬಾದ್ ಅಂಗಳದ ಬೌಂಡರಿ ಲೈನ್ ಚಿಕ್ಕದಾಗಿದ್ದು, ಟ್ರ್ಯಾಕ್ ಕೂಡ ಬ್ಯಾಟಿಂಗ್‌ಗೆ ಸಹಕಾರ ನೀಡುತ್ತಿದೆ. ಹೀಗಾಗಿ ದೊಡ್ಡ ಮೊತ್ತ ಪೇರಿಸಲೇನೂ ಸಮಸ್ಯೆ ಆಗದು. ಓಪನಿಂಗ್ ಮೇಲೆ ಅನುಮಾನ
ಆದರೆ ಪಾಕ್ ಓಪನಿಂಗ್ ಜೋಡಿಯಾದ ಇಮಾಮ್-ಫಖಾರ್ ಮೇಲೆ ಅನುಮಾನಗಳಿವೆ. ಇದು ಅಷ್ಟೇನೂ ಅಪಾಯಕಾರಿಯಾಗಿ ಗೋಚರಿಸುತ್ತಿಲ್ಲ. ಇಮಾಮ್ ಅವರೇನೋ 50 ಪ್ಲಸ್ ಎವರೇಜ್ ಹೊಂದಿದ್ದಾರೆ, ಆದರೆ ಫಖಾರ್ ಫಾರ್ಮ್ನಲ್ಲಿಲ್ಲ. ಇವರ ಬದಲು ಅಬ್ದುಲ್ಲ ಶಫೀಕ್ ಅವರನ್ನು ಆಡಿಸುವ ಯೋಜನೆಯೂ ಇದೆ. ಆದರೆ ಶಫೀಕ್‌ಗೆ ವಿಶ್ವ ಮಟ್ಟದ ಪಂದ್ಯಾವಳಿಯಲ್ಲಿ ಅನುಭವದ ಕೊರತೆ ಇದೆ. ಹೀಗಾಗಿ ಬಾಬರ್-ರಿಜ್ವಾನ್ ಮೇಲೆ ಒತ್ತಡ ಬೀಳಬಹುದು. ಇದು ಕೂಟದುದ್ದಕ್ಕೂ ಮುಂದುವರಿದರೆ ಕಷ್ಟ. ಬೌಲಿಂಗ್ ಸಮಸ್ಯೆಗಳು…
ಆಲ್‌ರೌಂಡರ್ ಶದಾಬ್ ಖಾನ್ ಅವರ ಫಾರ್ಮ್ ಒಳ್ಳೆಯ ಹೊತ್ತಿನಲ್ಲೇ ಕೈಕೊಟ್ಟಿದೆ. ಕಳೆದ ಏಷ್ಯಾ ಕಪ್‌ನಲ್ಲಿ ಪಾಕ್ ವೈಫಲ್ಯಕ್ಕೆ ಇದೂ ಒಂದು ಕಾರಣ. ಹಾಗೆಯೇ ಅಪಾಯಕಾರಿ ಸೀಮರ್ ನಸೀಮ್ ಶಾ ಕೂಟದಿಂದಲೇ ಬೇರ್ಪಟ್ಟದ್ದು ಕೂಡ ಪಾಕ್ ಚಿಂತೆಗೆ ಕಾರಣವಾಗಿದೆ. ಬ್ಯಾಟಿಂಗ್ ಟ್ರ್ಯಾಕ್ ನಲ್ಲಿ ಅಫ್ರಿದಿ, ರವೂಫ್, ಹಸನ್ ಅಲಿ ಅವರ ದಾಳಿ ನಿರ್ಣಾಯಕವಾಗಲಿದೆ. ಸೆಮಿ ಪ್ರೊಫೆಶನಲ್ಸ್ ಟೀಮ್
ನೆದರ್ಲೆಂಡ್ಸ್ “ಸೆಮಿ ಪ್ರೊಫೆಶನಲ್ಸ್’ಗಳಿಂದ ಕೂಡಿದ ತಂಡ. 2011ರಲ್ಲೂ ಆಡಿದ್ದ ವೆಸ್ಲಿ ಬರೇಸಿ ಈ ತಂಡದಲ್ಲೂ ಇದ್ದಾರೆ. ದಕ್ಷಿಣ ಆಫ್ರಿಕಾ ಮಾಜಿ ಸ್ಪಿನ್ನರ್ ರೋಲ್ಫ್ ವಾನ್ ಡರ್ ಮರ್ವ್ ಮತ್ತೋರ್ವ ಹಿರಿಯ ಆಟಗಾರ. ಮಧ್ಯಮ ಕ್ರಮಾಂಕದ ಬ್ಯಾಟರ್, ಆಂಧ್ರ ಮೂಲದ ತೇಜ ನಿಡಮನೂರು, ಆಲ್‌ರೌಂಡರ್ ಬಾಸ್ ಡಿ ಲೀಡ್ ಪ್ರಮುಖ ಆಟಗಾರರು. ತೇಜ ಅವರಿಗಿದು ತವರಿನ ಅಂಗಳ. ಬಾಸ್ ಡಿ ಲೀಡ್ ಸ್ಕಾಟ್ಲೆಂಡ್ ವಿರುದ್ಧ 92 ಎಸೆತಗಳಲ್ಲಿ 123 ರನ್ ಬಾರಿಸಿ ತಂಡದ ಅರ್ಹತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ನೆದರ್ಲೆಂಡ್ ತಂಡ ಕಳೆದುಕೊಳ್ಳುವುದೇನೂ ಇಲ್ಲ ನಿಜ, ಆದರೆ ಮುಖ್ಯ ಸುತ್ತು ಪ್ರವೇಶಿಸಿದ್ದಕ್ಕೆ ಒಂದಿಷ್ಟಾದರೂ ಗೌರವ ಕೊಡಲೇಬೇಕಲ್ಲ! ಪಾಕ್ ಅಭಿಮಾನಿಗಳ ನಿರೀಕ್ಷೆಯಲ್ಲಿ ಬಾಬರ್
ಪಾಕಿಸ್ಥಾನ ತಂಡ ಭಾರತದ ನೆಲದಲ್ಲಿ ಶುಕ್ರವಾರ ಮೊದಲ ವಿಶ್ವಕಪ್ ಪಂದ್ಯವಾಡಲಿದೆ. ಬಾಬರ್ ಆಜಂ ಬಳಗಕ್ಕೆ ಹೈದರಾಬಾದ್‌ನಲ್ಲಿ ಅದ್ಧೂರಿಯ ಸ್ವಾಗತವನ್ನೂ ನೀಡಲಾಗಿತ್ತು. ಇದೀಗ ಹೋರಾಟ ಆರಂಭವಾಗಲಿದ್ದು, ತಮ್ಮ ದೇಶದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲಿಸಬೇಕು ಎಂಬುದಾಗಿ ಬಾಬರ್ ಅಭಿಲಾಷೆ ತೋಡಿಕೊಂಡಿದ್ದಾರೆ. “ಭಾರತದಲ್ಲಿ ನಮಗೆ ಆತ್ಮೀಯ ಸ್ವಾಗತ ಲಭಿಸಿದೆ. ವಿಮಾನ ನಿಲ್ದಾಣದಿಂದ ಹೊಟೇಲ್ ವರೆಗಿನ ದಾರಿಯುದ್ದಕ್ಕೂ ನಮ್ಮನ್ನು ಆದರದಿಂದಲೇ ಬರಮಾಡಿಕೊಳ್ಳಲಾಗಿದೆ. ಆದರೆ ಪಂದ್ಯದ ವೇಳೆ ನಮ್ಮನ್ನು ಹುರಿದುಂಬಿಸಲು ನಮ್ಮ ದೇಶದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಆಗಮಿಸಬೇಕೆಂಬುದು ನಮ್ಮ ಬಯಕೆ’ ಎಂಬುದಾಗಿ ಬಾಬರ್ ಆಜಂ ವಿನಂತಿಸಿಕೊಂಡಿದ್ದಾರೆ.