Advertisement
ಶ್ರೀಲಂಕಾ 8ನೇ ಸ್ಥಾನದಲ್ಲಿದ್ದರೆ (-1.048), ಇಂಗ್ಲೆಂಡ್ 9ನೇ ಸ್ಥಾನಕ್ಕೆ ಜಾರಿದೆ (-1.249). ಅಂದರೆ ಬಾಂಗ್ಲಾದೇಶಕ್ಕಿಂತ ಸ್ವಲ್ಪ ಮೇಲೆ. ಆದರೆ ಗುರುವಾರ ಒಂದು ತಂಡಕ್ಕಂತೂ ತುಸು ಮೇಲೇರುವ ಅವಕಾಶ ಪ್ರಾಪ್ತವಾಗಲಿದೆ. ಇಷ್ಟೇ ಸಾಲದು, ಉಳಿದ ಪಂದ್ಯಗಳನ್ನೂ ದೊಡ್ಡ ಅಂತರದಿಂದ ಗೆಲ್ಲಬೇಕಾದ ಅಗತ್ಯವಿದೆ. ಹಾಗೆಯೇ ಬೇರೆ ತಂಡಗಳ ಫಲಿತಾಂಶಗಳೂ ನಿರ್ಣಾಯಕ.
Related Articles
Advertisement
ದಕ್ಷಿಣ ಆಫ್ರಿಕಾ ವಿರುದ್ಧ 229 ರನ್ನುಗಳ ಭಾರೀ ಅಂತರದಿಂದ ಮುಗ್ಗರಿಸಿತು. ಈ ಸತತ ಸೋಲುಗಳಿಂದ ಹೊರಬರುವುದು ಸುಲಭವಲ್ಲ. ಇಂಗ್ಲೆಂಡ್ ಈ ಕೂಟದಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡವೆಂದು ಭಾವಿಸಲಾಗಿತ್ತು. ಆದರೆ ಇದೀಗ ಬರೀ ಕಾಗದದಲ್ಲಿ ಎಂಬುದು ಸಾಬೀತಾಗಿದೆ. ಬೆನ್ ಸ್ಟೋಕ್ಸ್ ಬಂದರೂ ಆಂಗ್ಲರ ಸ್ಥಿತಿ ಸುಧಾರಿಸದಿರುವುದು ವಿಪರ್ಯಾಸ. ಬೌಲಿಂಗ್ ಕೂಡ ಹಳಿ ತಪ್ಪಿದೆ. ಇಂಗ್ಲೆಂಡ್ ಮತ್ತೂಂದು ಜಯ ಸಾಧಿಸಬೇಕಾದರೆ ಬಾಂಗ್ಲಾದೇಶ ವಿರುದ್ಧ ತೋರ್ಪಡಿಸಿದ ಆಟವನ್ನು ಪುನರಾವರ್ತಿಸಬೇಕು. ಧರ್ಮಶಾಲಾದ ಈ ಪಂದ್ಯದಲ್ಲಿ ಇಂಗ್ಲೆಂಡ್ 9ಕ್ಕೆ 364 ರನ್ ರಾಶಿ ಹಾಕಿತ್ತು.
ಲಂಕೆಗೆ ಬೌಲಿಂಗ್ ಸಮಸ್ಯೆ: ಶ್ರೀಲಂಕಾದ ಸಮಸ್ಯೆ ಎಂದರೆ ಬೌಲಿಂಗ್ ವಿಭಾಗದ್ದು. ಅದು ದಕ್ಷಿಣ ಆಫ್ರಿಕಾಕ್ಕೆ 428 ರನ್, ಪಾಕಿಸ್ತಾನಕ್ಕೆ 345 ರನ್ ಹಾಗೂ ಆಸ್ಟ್ರೇಲಿಯಕ್ಕೆ 35.2 ಓವರ್‌ಗಳಲ್ಲಿ 215 ರನ್ ನೀಡಿ ಏಟು ತಿಂದಿತ್ತು. ನೆದರ್ಲೆಂಡ್ಸ್ ತಂಡವನ್ನು 6ಕ್ಕೆ 91 ರನ್ನಿಗೆ ನಿಯಂತ್ರಿಸಿತಾದರೂ ಬಳಿಕ ಡಚ್ಚರ ಮೊತ್ತ 262ಕ್ಕೆ ಏರಿದ್ದನ್ನು ಮರೆಯುವಂತಿಲ್ಲ. ಲಂಕೆಯ ಬ್ಯಾಟಿಂಗ್ ಪರಾಗಿಲ್ಲ ಎನ್ನಬಹುದು. ಪಾಥುಮ್ ನಿಸ್ಸಂಕ, ಚರಿತ ಅಸಲಂಕ, ಸದೀರ ಸಮರವಿಕ್ರಮ, ಕುಸಲ್ ಮೆಂಡಿಸ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಕಳೆದ ಸಲ ಇಂಗ್ಲೆಂಡ್ ಚಾಂಪಿಯನ್ ಆಗಿತ್ತಾದರೂ ಲೀಗ್ ಹಂತದಲ್ಲಿ ಲಂಕೆ 20 ರನ್ನುಗಳ ಜಯ ಸಾಧಿಸಿದ್ದನ್ನು ಉಲ್ಲೇಖೀಸದಿರುವಂತಿಲ್ಲ. ಹಾಗೆಯೇ ಕಳೆದ 4 ವಿಶ್ವಕಪ್ ಪಂದ್ಯಗಳಲ್ಲಿ ಶ್ರೀಲಂಕಾ ಇಂಗ್ಲೆಂಡನ್ನು ಸೋಲಿಸುತ್ತ ಬಂದಿದೆ. ಇಂಗ್ಲೆಂಡ್ ಕೊನೆಯ ಸಲ ವಿಶ್ವಕಪ್‌ನಲ್ಲಿ ಲಂಕೆಯನ್ನು ಮಣಿಸಿದ್ದು 1999ರಷ್ಟು ಹಿಂದೆ!
ರನ್ ಪ್ರವಾಹ ಸಾಧ್ಯತೆ: ಇಂಗ್ಲೆಂಡ್-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ರನ್ ಪ್ರವಾಹ ಹರಿದು ಬರುವ ಎಲ್ಲ ಸಾಧ್ಯತೆ ಇದೆ. ಕಾರಣ, ಬೆಂಗಳೂರಿನ ಪಿಚ್ ಬ್ಯಾಟಿಂಗ್ ಸ್ನೇಹಿ ಆಗಿರುವುದು. ಆಸ್ಟ್ರೇಲಿಯ-ಪಾಕಿಸ್ತಾನ ನಡುವೆ ಇಲ್ಲಿ ನಡೆದ ಪಂದ್ಯದಲ್ಲಿ 672 ರನ್ ಹರಿದು ಬಂದಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಕ್ಕೆ ಲಾಭ ಹೆಚ್ಚು ಎನ್ನಲಡ್ಡಿಯಿಲ್ಲ.