ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಅಂಪೈರ್ ರೂಡಿ ಕೊರ್ಜೆನ್ ಅವರು ಭೀಕರ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ವಿಶ್ವ ಕ್ರಿಕೆಟ್‌ನ ಅತ್ಯಂತ ಜನಪ್ರಿಯ ಮುಖಗಳಲ್ಲಿ ಒಬ್ಬರಾಗಿದ್ದ ರೂಡಿ ಕೊರ್ಜೆನ್ ಅವರ ನಿಧನದ ಸುದ್ದಿಯನ್ನು ಪುತ್ರ ಖಚಿತ ಪಡಿಸಿದ್ದಾರೆ.
ನೆಲ್ಸನ್ ಮಂಡೇಲಾ ಬೇ ಡೆಸ್ಪಾಚ್ ನಿವಾಸಿ 73 ವರ್ಷದ ಕೊರ್ಜೆನ್ ಅವರು ಗಾಲ್ಫ್ ಆಟದ ನಂತರ ಕೇಪ್ ಟೌನ್‌ನಿಂದ ಮನೆಗೆ ಹಿಂದಿರುಗುತ್ತಿದ್ದರು. ಅವರು ಸೋಮವಾರವೇ ಹಿಂದೆ ಬರಬೇಕಿತ್ತು. ಆದರೆ ಮತ್ತಷ್ಟು ಆಟ ಆಡಿದ್ದರಿಂದ ಮಂಗಳವಾರ ಬೆಳಗ್ಗೆ ಮರಳಿದರು. ಈ ವೇಳೆ ಕಾರು ಅಪಘಾತವಾಗಿದೆ. ರೂಡಿ ಜೊತೆಗೆ ಕಾರಿನಲ್ಲಿದ್ದ ಮೂವರು ಸ್ನೇಹಿತರು ಕೂಡಾ ನಿಧನರಾಗಿದ್ದಾರೆ ಎಂದು ವರದಿ ಹೇಳಿದೆ.
ದಕ್ಷಿಣ ಆಫ್ರಿಕಾದ ರೈಲ್ವೇಯಲ್ಲಿ ಕ್ಲರ್ಕ್ ಆಗಿದ್ದ ರೂಡಿ ಕೊರ್ಜೆನ್ ಅವರು ಆ ಸಮಯದಲ್ಲಿ ಕ್ಲಬ್ ಕ್ರಿಕೆಟ್ ಆಡುತ್ತಿದ್ದರು. 1981ರಲ್ಲಿ ಕ್ರಿಕೆಟ್ ಅಂಪೈರಿಂಗ್ ಆರಂಭಿಸಿದ ರೂಡಿ ಕೊರ್ಜೆನ್ ಅವರು ಇದಾಗಿ 11 ವರ್ಷಗಳ ಬಳಿಕ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಅಂಪೈರಿಂಗ್ ಗೆ ಪದಾರ್ಪಣೆ ಮಾಡಿದರು.
ಇದನ್ನೂ ಓದಿ:ದೊಡ್ಡಲಾಲಸಾಬವಲಿ ದರ್ಗಾದಲ್ಲಿ ಅಜ್ಜನವರ ಮೊಹರಂ: ನೀರಿನಿಂದ ದೀಪ ಹಚ್ಚುವುದು ಇಲ್ಲಿನ ವಿಶೇಷ
ರೂಡಿ ಕೊರ್ಜೆನ್ ಅವರು 209 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮತ್ತು 14 ಟಿ20 ಪಂದ್ಯಗಳಿಗೆ ಅಂಪೈರಿಂಗ್ ನಡೆಸಿದ್ದಾರೆ. ಒಟ್ಟು 331 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ನಡೆಸಿದ ರೂಡಿ ಕೊರ್ಜೆನ್ ಅವರು 2010ರಲ್ಲಿ ವಿದಾಯ ಹೇಳಿದರು.
ಸೆಹವಾಗ್ ಕಂಬನಿ: ರೂಡಿ ಕೊರ್ಜೆನ್ ನಿಧನದ ಸುದ್ದಿ ಕೇಳಿ ಮಾಜಿ ಆಟಗಾರ ವೀರೆಂದ್ರ ಸೆಹವಾಗ್ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಓಂ ಶಾಂತಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಅವರೊಂದಿಗೆ ನನಗೆ ಉತ್ತಮ ಸಂಬಂಧವಿತ್ತು. ಬ್ಯಾಟಿಂಗ್ ವೇಳೆ ನಾನು ದುಡುಕಿನ ಹೊಡೆತವನ್ನು ಹೊಡೆದಾಗಲೆಲ್ಲ, “ಸರಿಯಾಗಿ ಆಟವಾಡಿ, ನಾನು ನಿಮ್ಮ ಬ್ಯಾಟಿಂಗ್ ವೀಕ್ಷಿಸಲು ಬಯಸುತ್ತೇನೆ” ಎಂದು ನನ್ನನ್ನು ಗದರಿಸುತ್ತಿದ್ದರು “ ಎಂದು ನೆನಪಿಸಿಕೊಂಡಿದ್ದಾರೆ.
ಅವರು ತಮ್ಮ ಮಗನಿಗಾಗಿ ನಿರ್ದಿಷ್ಟ ಬ್ರಾಂಡ್ ಕ್ರಿಕೆಟ್ ಪ್ಯಾಡ್ ಗಳನ್ನು ಖರೀದಿಸಲು ಬಯಸಿದ್ದರು ಮತ್ತು ಅದರ ಬಗ್ಗೆ ನನ್ನಿಂದ ವಿಚಾರಿಸಿದರು. ನಾನು ಅವನಿಗೆ ಉಡುಗೊರೆಯಾಗಿ ನೀಡಿದ್ದೆ. ಅವರು ಒಬ್ಬ ಸಂಭಾವಿತ ಮತ್ತು ಬಹಳ ಅದ್ಭುತ ವ್ಯಕ್ತಿ. ಓಂ ಶಾಂತಿ ಎಂದು ಸೆಹವಾಗ್ ಬರೆದುಕೊಂಡಿದ್ದಾರೆ.