Advertisement

Cricket: ಮಂಕಡ್‌, ಮಂಕಡಿಂಗ್‌

02:58 PM Jan 06, 2024 | Team Udayavani |

ಕ್ರಿಕೆಟ್‌ ಎಷ್ಟು ಜನಪ್ರಿಯವೂ ಅಷ್ಟೇ ವಿವಾದಗಳನ್ನು ತನ್ನೊಂದಿಗೆ ಸೇರಿಸಿಕೊಂಡಿದೆ. ಜಂಟಲ್‌ವುನ್‌ ಗೇಮ್‌ ಕ್ರಿಕೆಟ್‌ನಲ್ಲಿ ಸಾಕಷ್ಟು ವಿವಾದಗಳು ತಳುಕು ಹಾಕಿಕೊಂಡಿರುವುದು ವಿಪರ್ಯಾಸವೇ ಸರಿ. ಅಂತಹ ಒಂದು ವಿವಾದಗಳಲ್ಲಿ ಈ “ಮಂಕಡಿಂಗ್‌’ ಕೂಡ ಒಂದು. ಇಲ್ಲಿ ಮಂಕಡಿಂಗ್‌ ಸರಿಯೋ ತಪ್ಪೋ ಎನ್ನುವುದರ ಬಗ್ಗೆ ಚರ್ಚಿಸುತ್ತಿಲ್ಲ, ಬದಲಿಗೆ ಮಂಕಡಿಂಗ್‌ ಹೇಗೆ ಹುಟ್ಟಿಕೊಂಡಿತು? ಅದನ್ನು ಮೊದಲು ಪ್ರಯೋಗಿಸಿದ ಕ್ರಿಕೆಟಿಗ ಯಾರು? ಮಂಕಡಿಂಗ್‌ ಹೊರತಾಗಿ ಅವರ ಸಾಧನೆಗಳೇನು ಎನ್ನುವುದರ ಬಗ್ಗೆ ತಿಳಿಸುವ ಸಣ್ಣ ಪ್ರಯತ್ನ ಮಾಡಲಾಗಿದೆ.

Advertisement

ವಿನೂ ಮಂಕಂಡ್‌ ಭಾರತ ಕಂಡ ಶ್ರೇಷ್ಠ ಆಲ್‌ರೌಂಡರ್‌. ಟೆಸ್ಟ್‌ ಕ್ರಿಕೆಟ್‌ನಲ್ಲಿ ಎಲ್ಲ ಕ್ರಮಾಂಕದಲ್ಲಿಯೂ ಬ್ಯಾಟ್‌ ಬೀಸಿ ಸೈ ಎನಿಸಿಕೊಂಡ ವಿಶ್ವದ ಮೂರು ಆಟಗಾರರಲ್ಲಿ ಒಬ್ಬರು (ಆಸ್ಟ್ರೇಲಿಯದ ಸೈದ್‌ ಗ್ರೆಗೊರಿ, ಇಂಗ್ಲೆಂಡಿನ ವಿಲ್ಫೆ†ಡ್‌ ರೋಡ್ಸ್‌ ಇನ್ನುಳಿದ ಇಬ್ಬರು). ಭಾರತದ ಪರ ಟೆಸ್ಟ್‌ನಲ್ಲಿ ಸಾವಿರ ರನ್‌ ಬಾರಿಸಿದ ಮೊದಲ ಆಟಗಾರರಾದ ವಿನೂ ಮಂಕಡ್‌ ಅವರ ಪೂರ್ಣ ಹೆಸರು ಮುಲ್ವಂತರ್‌ರಾಯ್‌ ಹಿಮ್ಮತ್‌ಲಾಲ್‌ ಮಂಕಡ್‌.

1917 ಎಪ್ರಿಲ್‌ 12ರಂದು ಆಗಿನ ಮುಂಬಯಿಯ ಜಾಮ್‌ನಗರ್‌ನಲ್ಲಿ ಇವರು ಜನಿಸಿದರು. 1946ರ ಇಂಗ್ಲೆಂಡ್‌ ಪ್ರವಾಸಕ್ಕೆ ಆಯ್ಕೆಯಾಗಿ ತಮ್ಮ 29ನೇ ವಯಸ್ಸಿಗೆ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಈ ಸರಣಿಯ ಎರಡನೇ ಪಂದ್ಯದಲ್ಲೇ 5 ವಿಕೆಟ್‌ ಪಡೆದು ಮಿಂಚಿದ್ದರು. ಈ ಸರಣಿಯಲ್ಲಿ ಮಂಕಡ್‌ ಅವರ ಪ್ರದರ್ಶನ ಯಾವ ಮಟ್ಟಿಗೆ ಇತ್ತೆಂದರೆ ಜನಪ್ರಿಯ ಕ್ರೀಡಾ ಪತ್ರಿಕೆ “ವಿಸ್ಡನ್‌’ ಲಾಲಾ ಅಮರನಾಥ್‌ ಮತ್ತು ವಿಜಯ್‌ ಹಜಾರೆ ಅವರ ಸಾಲಿಗೆ ಸೇರುವ ಭಾರತದ ಮತ್ತೂರ್ವ ಮೌಲ್ಯಯುತ ಆಲ್‌ರೌಂಡರ್‌ ಎಂದು ಪ್ರಶಂಶಿಸಿತ್ತು.

ತಮ್ಮ 13 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ಬಾಳ್ವೆಯಲ್ಲಿ ಭಾರತದ ಪರ 44 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಮಂಕಡ್‌ 31.47ರ ಸರಸರಿಯಲ್ಲಿ ಒಂದು ದ್ವಿಶತಕ, 5 ಶತಕ, 6 ಅರ್ಧಶತಕ ಸಹಿತ 2,109ರನ್‌ ರಾಶಿ ಹಾಕಿದ್ದಾರೆ. ಬೌಲಿಂಗ್‌ನಲ್ಲಿ 32.32ರ ಸರಸರಿಯಲ್ಲಿ 162 ವಿಕೆಟ್‌ ಉರುಳಿಸಿದ್ದು, 2 ಭಾರಿ 10 ವಿಕೆಟ್‌, 8 ಭಾರಿ 5 ವಿಕೆಟ್‌ ಕಬಳಿಸಿ ಸಾಹಸ ಮೆರೆದಿದ್ದಾರೆ. 1956ರಲ್ಲಿ ನ್ಯೂಜಿಲ್ಯಾಂಡ್‌ ತಂಡದ ಭಾರತ ಪ್ರವಾಸದ ಸಂದರ್ಭದಲ್ಲಿ ಪಂಕಜ್‌ ರಾಯ್‌ ಅವರೊಂದಿಗೆ ಸೇರಿ ಮೊದಲ ವಿಕೆಟಿಗೆ 413 ರನ್‌ ಗಳಿಸಿ ವಿಶ್ವ ದಾಖಲೆ ಬರೆದಿದ್ದರು. ಇಲ್ಲಿ ಮಂಕಡ್‌ ಕೊಡುಗೆ ದಾಖಲೆಯ 231 ರನ್‌.

ಮಂಕಡಿಂಗ್‌ ಪ್ರಕರಣ

Advertisement

ಈ ವಿದ್ಯಮಾನ ನಡೆದದ್ದು 1947-48ರ ಭಾರತದ ಆಸ್ಟ್ರೇಲಿಯಾ ಪ್ರವಾಸದಲ್ಲಿ. ಬೌಲಿಂಗ್‌ ನಡೆಸುತ್ತಿದ್ದ ಮಂಕಡ್‌, ನಾನ್‌ ಸ್ಟ್ರೈಕ್‌ ಎಂಡ್‌ನ‌ಲ್ಲಿದ್ದ ಆಟಗಾರ ಬಿಲ್ಲಿ ಬ್ರೌನ್‌ ಎಸೆತಕ್ಕೂ ಮೊದಲೇ ಕ್ರೀಸ್‌ನಿಂದ ಆಚೆ ಹೋದಾಗ ಚೆಂಡನ್ನು ವಿಕೆಟ್‌ಗೆ ಬಡಿದು ಅವರನ್ನು ರನ್‌ ಔಟ್‌ ಮಾಡುತ್ತಾರೆ. ಇದು ಕ್ರಿಕೆಟ್‌ ನಿಯಮಗಳ ಉಲ್ಲಂಘನೆ ಅಲ್ಲದೇ ಇದ್ದರೂ ಕೆಲವರು ಇದನ್ನು ಕ್ರೀಡಾಪಸ್ಫೂರ್ತಿಗೆ ವಿರುದ್ಧವಾದ ಕಾರ್ಯ ಎಂದು ಕಿಡಿಕಾರುತ್ತಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮಂಕಡ್‌ ಈ ಕುರಿತು ಬ್ರೌನ್‌ಗೆ ಮೊದಲು ಎಚ್ಚರಿಕೆ ಕೊಟ್ಟಿರುತ್ತಾರೆ. ಈ ಘಟನೆಯ ಅನಂತರ ಈ ರೀತಿ ಔಟ್‌ ಆಗುವ ಪರಿಗೆ ಮಂಕಡಿಂಗ್‌ ಎಂದು ಹೆಸರಿಸಲಾಗಿದೆ.

ಕ್ರಿಕೆಟ್‌ ದಂತಕತೆ ಬ್ರಾಡ್‌ ಮನ್‌ ತಮ್ಮ ಆತ್ಮಕಥನದಲ್ಲಿ ಮಂಕಡ್‌ ಅವರನ್ನು ಬೆಂಬಲಿಸಿ ಈ ರೀತಿ ಬರೆದುಕೊಂಡಿದ್ದರು. ಮಂಕಡ್‌ ಅವರ ನ್ಪೋರ್ಟ್‌ಮನ್‌ ಶಿಪ್‌ ಅನ್ನು ಯಾಕೆ ಪ್ರಶ್ನಿಸಲಾಗುತ್ತಿದೆಯೋ ನನಗೆ ತಿಳಿಯುತ್ತಿಲ್ಲ. ಬೌಲರ್‌ ಬಾಲ್‌ ಎಸೆಯುವ ವರೆಗೂ ನಾನ್‌ ಸ್ಟ್ರೈಕರ್‌ ಕ್ರೀಸ್‌ನಲ್ಲೇ ಇರಬೇಕೆಂದು ಕ್ರಿಕೆಟ್‌ನ ನಿಯಮಗಳು ಸ್ಪಷ್ಟವಾಗಿ ಹೇಳುತ್ತವೆ.

ಈ ನಿಯಮ ಮುರಿದಲ್ಲಿ ನಾನ್‌ ಸ್ಟ್ರೈಕರ್‌ ಅನ್ನು ರನ್‌ಔಟ್‌ ಮಾಡಬಹುದಾಗಿದೆ. ಹೀಗಿದ್ದು ನಾನ್‌ ಸ್ಟ್ರೈಕರ್‌ ಕ್ರೀಸ್‌ ಬಿಟ್ಟು ಸ್ಪಷ್ಟವಾಗಿ ಅನ್ಯಾಯ ಮಾಡುತ್ತಿದ್ದಾರೆ. ಈಗಲೂ ಕೂಡ ಮಂಕಡಿಂಗ್‌ ಕ್ರೀಡಾಸ್ಫೂರ್ತಿಗೆ ವಿರುದ್ಧವಾದುದು ಎಂಬ ಕೂಗು ಕೇಳಿಬರುತ್ತಲೇ ಇದೆ. ಕೆಲವೊಂದಿಷ್ಟು ಜನ ಇದಕ್ಕೆ ಬೆಂಬಲ ಸೂಚಿಸಿದರೆ, ಇನ್ನೊಂದಿಷ್ಟು ಜನ ಇದು ತಪ್ಪು ಎಂದು ವಾದಿಸುತ್ತಾರೆ. ಅದೇನೇ ಇರಲಿ, ಕ್ರಿಕೆಟ್‌ ನಿಯಮದ ಪ್ರಕಾರ ಮಂಕಡಿಂಗ್‌ ಕಾನೂನು ಬಾಹಿರವಂತೂ ಅಲ್ಲ.

ಸುಶ್ಮಿತಾ ನೇರಳಕಟ್ಟೆ

 

Advertisement

Udayavani is now on Telegram. Click here to join our channel and stay updated with the latest news.

Next