Advertisement

ಟೋನಿ ಲೂಯಿಸ್‌ ಇನ್ನಿಲ್ಲ

12:12 AM Apr 03, 2020 | Sriram |

ಲಂಡನ್‌: ನಿಗದಿತ ಓವರ್‌ಗಳ ಕ್ರಿಕೆಟ್‌ ಪಂದ್ಯಗಳು ಮಳೆಯಿಂದ ತೊಂದರೆಗೊಳಗಾದ ವೇಳೆ ಅಳವಡಿಸಲಾಗುವ ಡಕ್‌ವರ್ತ್‌ ಲೂಯಿಸ್‌ ಸ್ಟೆರ್ನ್ ನಿಯಮದ ರೂವಾರಿಗಳಲ್ಲಿ ಒಬ್ಬರಾದ ಟೋನಿ ಲೂಯಿಸ್‌ (78)ಅವರು ನಿಧನ ಹೊಂದಿದರು ಎಂದು ಇಂಗ್ಲೆಂಡ್‌ ಆ್ಯಂಡ್‌ ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ತಿಳಿಸಿದೆ.

Advertisement

ಟೋನಿ ಅವರ ನಿಧನಕ್ಕೆ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಟೋನಿ ಮತ್ತು ಸಹ ಗಣಿತಜ್ಞ ಫ್ರ್ಯಾಂಕ್‌ ಡಕ್‌ವರ್ತ್‌ ಅವರು ಡಕ್‌ವರ್ತ್‌ ಲೂಯಿಸ್‌ ನಿಯಮವನ್ನು 1997ರಲ್ಲಿ ಕಂಡುಹುಡುಕಿದ್ದರು ಮತ್ತು 1999ರಲ್ಲಿ ಇಂಟರ್‌ನ್ಯಾಶನಲ್‌ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಆಧಿಕೃತವಾಗಿ ಅನುಷ್ಠಾನ ಮಾಡಿಕೊಂಡಿತ್ತು. 2014ರಲ್ಲಿ ಇದರ ಹೆಸರನ್ನು ಡಕ್‌ವರ್ತ್‌ ಲೂಯಿಸ್‌ ಸ್ಟೆರ್ನ್ ನಿಯಮವೆಂದು ಪುನರ್‌ ಹೆಸರಿಸಲಾಗಿತ್ತು.

ಎಂಬಿಇ ಗೌರವ
ಟೋನಿ ಮತ್ತು ಫ್ರ್ಯಾಂಕ್‌ ಅವರು ಕ್ರಿಕೆಟಿಗೆ ನೀಡಿರುವ ಸೇವೆ ಅವಿಸ್ಮರಣೀಯ ಎಂದು ತಿಳಿಸಿದ ಇಸಿಬಿ ಟೋನಿ ಅವರ ಕುಟುಂಬ ಸದಸ್ಯರಿಗೆ ದುಃಖ ಸಹಿಸುವ ಸಾಮರ್ಥ್ಯ ದೇವರು ಕರುಣಿಸಲಿ ಎಂದು ತಿಳಿಸಿದೆ. ಕ್ರಿಕೆಟ್‌ ಮತ್ತು ಗಣಿತಶಾಸ್ತ್ರಕ್ಕೆ ನೀಡಿದ ಸೇವೆಗಾಗಿ ಟೋನಿ ಅವರಿಗೆ 2010ರಲ್ಲಿ ಮೆಂಬರ್‌ ಆಫ್ ದ ಆರ್ಡರ್‌ ಆಫ್ ದ ಬ್ರಿಟಿಷ್‌ ಎಂಪೈರ್‌ (ಎಂಬಿಇ) ಗೌರವ ನೀಡಲಾಗಿತ್ತು.

ಒಂದು ಎಸೆತ 22 ರನ್‌ ಗುರಿ
1992ರ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯಕ್ಕೆ ಮಳೆ ತೊಂದರೆ ನೀಡಿದ ವೇಳೆ ದಕ್ಷಿಣ ಆಫ್ರಿಕಾ ಗೆಲುವಿಗೆ ಅಸಾಮಾನ್ಯ ಗುರಿ ನೀಡಲ್ಪಟ್ಟ ಹಿನ್ನೆಲೆಯಲ್ಲಿ ಈ ಸಂಬಂಧ ಸೂಕ್ತವಾದ ನಿಯಮವೊಂದನ್ನು ಜಾರಿಗೊಳಿಸುವತ್ತ ಕ್ರಿಕೆಟ್‌ ವಲಯಗಳಲ್ಲಿ ಚರ್ಚೆ ಆರಂಭವಾಗಿತ್ತು.
ಈ ಹಿಂದೆ ತಂಡಗಳ ಇನ್ನಿಂಗ್ಸ್‌ನ ಕಡಿಮೆ ರನ್‌ ಗಳಿಸಿದ ಓವರ್‌ಗಳನ್ನು ತೆಗೆದ ಆಧಾರದಲ್ಲಿ ಗುರಿ ನೀಡಲಾಗುತ್ತಿತ್ತು. ಈ ಆಧಾರದಲ್ಲಿ ಇಂಗ್ಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವಿಗೆ 13 ಎಸೆತಗಳಿಂದ 22 ರನ್‌ ಇರುವಾಗ ಮಳೆ ಬಂದು ತೊಂದರೆ ನೀಡಿತು. ಮಳೆ ನಿಂತ ಬಳಿಕ ಆಟ ಆರಂಭವಾದಾಗ ದಕ್ಷಿಣ ಆಫ್ರಿಕಾಕ್ಕೆ 1 ಎಸೆತದಲ್ಲಿ 21 ರನ್‌ ತೆಗೆಯುವ ಗುರಿಯನ್ನು ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next