ಜೋಹಾನ್ಸ್ ಬರ್ಗ್: ಭಾರತ ಕ್ರಿಕೆಟ್ ತಂಡ ಟೆಸ್ಟ್ ಮತ್ತು ಏಕದಿನ ಸರಣಿಯಾಡಲು ದಕ್ಷಿಣ ಆಫ್ರಿಕಾಗೆ ತೆರಳಿದೆ. ಈಗಾಗಲೇ ವಿರಾಟ್ ಕೊಹ್ಲಿ ಬಳಗ ಅಭ್ಯಾಸ ಆರಂಭಿಸಿದೆ. ಆದರೆ ಇದೀಗ ಭಾರತ- ದಕ್ಷಿಣ ಆಫ್ರಿಕಾ ನಡುವಿನ ಸರಣಿ ನಡೆಯುವುದೇ ಅನುಮಾನ ಎನ್ನಲಾಗಿದೆ. ಇದಕ್ಕೆ ಕಾರಣ ಹರಿಣಗಳ ನಾಡಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಸಂಖ್ಯೆ.
ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ದೇಶೀಯ ಟೂರ್ನಿಗಳನ್ನು ರದ್ದುಗೊಳಿಸಿದೆ. ದಕ್ಷಿಣ ಆಫ್ರಿಕಾ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ನಡೆಯಬೇಕಿದ್ದ ಡಿಸೆಂಬರ್ 16-19 (ವಿಭಾಗ 2) ಮತ್ತು ಡಿಸೆಂಬರ್ 19-22 (ವಿಭಾಗ 1) ದಿನಾಂಕಗಳಲ್ಲಿ ನಡೆಯಬೇಕಿದ್ದ ಐದನೇ ಸುತ್ತಿನ ಪಂದ್ಯಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಸಿಎಸ್‌ಎ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಅಂಡರ್-19 ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಯಶ್ ಧುಲ್ ನಾಯಕತ್ವ
ಈ ಪಂದ್ಯಗಳನ್ನು ಬಯೋ ಬಬಲ್ ಇಲ್ಲದೆ ಆಡಬೇಕಿತ್ತು. ಈ ಕಾರಣದಿಂದ ಮುಂದೂಡಲು ನಿರ್ಧರಿಸಲಾಗಿದೆ. ನಾಲ್ಕನೇ ಸುತ್ತು ಸೇರಿದಂತೆ ಮುಂದೂಡಲ್ಪಟ್ಟ ಪಂದ್ಯಗಳನ್ನು ಮುಂದಿನ ವರ್ಷಕ್ಕೆ ಮರು ನಿಗದಿಪಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 26ರಿಂದ ಆರಂಭವಾಗಲಿದೆ. ಇದು ಸಂಪೂರ್ಣವಾಗಿ ಬಯೋ ಬಬಲ್ ನಲ್ಲಿ ನಡೆಯಲಿದೆ. ಟೀಂ ಇಂಡಿಯಾ ಆಟಗಾರರು ಈಗಾಗಲೇ ಬಬಲ್ ನಲ್ಲಿದ್ದಾರೆ.