Advertisement

ಕ್ರಿಕೆಟ್ ಲೋಕದ “ಈ 10” ಅಪರೂಪದ ರೋಚಕ ವಿಷಯಗಳು ನಿಮಗೆ ಗೊತ್ತಾ?

11:39 AM Sep 14, 2018 | Team Udayavani |

ಭಾರತದಲ್ಲಿ ಬೇರೆ ಯಾವುದೇ ಕ್ರೀಡೆಗಳಿಗಿಂತ ಹೆಚ್ಚಿನ ಜನಪ್ರಿಯತೇ ಪಡೆದಿರುವುದು ಕ್ರಿಕೆಟ್. ಇಲ್ಲಿ ಕ್ರಿಕೆಟ್ ಒಂದು ಧರ್ಮವೇ ಆಗಿದೆ. ಅಭಿಮಾನಿಗಳು ಕ್ರೀಡೆಯ ಪ್ರತಿಯೊಂದು ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆದರೂ ಕ್ರಿಕೆಟ್ ನ ಕೆಲವು ರೋಚಕ ವಿಷಯಗಳು ಅನೇಕರಿಗೆ ಗೊತ್ತಿಲ್ಲ. 

Advertisement

1) ಸಚಿನ್ ಬ್ಯಾಟಿನಲ್ಲಿ ವಿಶ್ವದಾಖಲೆಯ ಶತಕ ಸಿಡಿಸಿದ ಅಫ್ರಿದಿ


ಪಾಕಿಸ್ತಾನದ ಸ್ಪೋಟಕ ಆಟಗಾರ ಶಾಹಿದ್ ಅಫ್ರಿದಿ ದಾಖಲೆಯ ಅತೀ ವೇಗದ ಶತಕ ಸಿಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅದರ ಹಿಂದಿನ ರಹಸ್ಯ ಹಲವರಿಗೆ ಗೊತ್ತಿಲ್ಲ. ಅದು 1996ರ ಶ್ರೀಲಂಕಾ ವಿರುದ್ದದ ಪಂದ್ಯ. ಆಗ ತಾನೆ ಅಂತಾರಾಷ್ಟ್ರೀಯ  ಪಂದ್ಯ ಆಡಲಾರಂಭಿಸಿದ ಶಾಹೀದ್ ಅಫ್ರಿದಿ ಬಳಿ ಸರಿಯಾದ ಬ್ಯಾಟ್ ಇರಲಿಲ್ಲ. ಆಗ ವಾಕರ್ ಯೂನಿಸ್ ತಮಗೆ ಸಚಿನ್ ತೆಂಡುಲ್ಕರ್ ನೀಡಿದ್ದ ಬ್ಯಾಟನ್ನು ಅಫ್ರಿದಿಗೆ ನೀಡುತ್ತಾರೆ. ಮುಂದೆ ನಡೆದಿದ್ದು ಇತಿಹಾಸ. ಅಫ್ರಿದಿ ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿ ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ ಶತಕ ಬಾರಿಸಿದ ವಿಶ್ವದಾಖಲೆ ಬರೆದರು. 

ಈ ದಾಖಲೆ 17 ವರ್ಷಗಳ ನಂತರ ನ್ಯೂಜಿಲ್ಯಾಂಡ್ ನ ಕೋರಿ ಆಂಡರ್ಸನ್ (36 ಎಸೆತ), ನಂತರ ದಕ್ಷಿಣ ಆಫ್ರಿಕಾದ ಎಬಿ.ಡಿ’ವಿಲಿಯರ್ಸ್ (31 ಎಸೆತ)ರಿಂದ ಮುರಿಯಲ್ಪಟ್ಟಿತು. 

2) ರನ್ ಗಿಂತ ಜಾಸ್ತಿ ವಿಕೆಟ್ ಪಡೆದವರೂ ಇದ್ದಾರೆ.!


ಬಿ.ಎಸ್.ಚಂದ್ರಶೇಖರ್ ಮತ್ತು ಕ್ರಿಸ್ ಮಾರ್ಟಿನ್ ರದ್ದು ವಿಶಿಷ್ಟ ದಾಖಲೆ. ಇವರಿಬ್ಬರು ತಮ್ಮ ಟೆಸ್ಟ್ ಜೀವನದಲ್ಲಿ ಗಳಿಸಿದ ಒಟ್ಟು ರನ್ ಗಿಂತ ಜಾಸ್ತಿ ವಿಕೆಟ್ ಪಡೆದಿದ್ದಾರೆ. ಚಂದ್ರಶೇಖರ್167 ರನ್ ಗಳಿಸಿದ್ದರೆ ಒಟ್ಟು 242 ವಿಕೆಟ್ ಪಡೆದಿದ್ದಾರೆ. ಕ್ರಿಸ್ ಮಾರ್ಟಿನ್ 233 ವಿಕೆಟ್ ಕಬಳಿಸಿದ್ದರೆ, ಗಳಿಸಿದ ರನ್ ಕೇವಲ 123. 

3) ಇವರು ಪಡೆದಿದ್ದು ಬರೋಬ್ಬರಿ 4204 ವಿಕೆಟ್ !


ಹೌದು ನೀವಿದನ್ನು ನಂಬಲೇ ಬೇಕು. ಇಂಗ್ಲೆಂಡ್ ನ ವಿಲ್ಫ್ರೆಡ್  ರೋಡ್ಸ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಬರೋಬ್ಬರಿ 4204 ವಿಕೆಟ್ ಪಡೆದಿದ್ದಾರೆ. ಇವರು 39,969 ರನ್ ಕೂಡಾ ಮಾಡಿದ್ದಾರೆ. ಅಂದಹಾಗೆ ಇವರು ಆಡಿದ ಒಟ್ಟು ಪಂದ್ಯಗಳು 1110.

Advertisement

4) ಭಾರತದ ಈ ಆಟಗಾರ ಇಂಗ್ಲೆಂಡ್ ತಂಡಕ್ಕೂ ಆಡಿದ್ದರು.


ಭಾರತದ ಇಫ್ತಿಕಾರ್ ಅಲಿ ಖಾನ್ ಪಟೌಡಿ ಇಂಗ್ಲೆಂಡ್ ತಂಡಕ್ಕೂ ಆಡಿದ್ದರು.1932 ಮತ್ತು 1934ರಲ್ಲಿ ಇಫ್ತಿಕಾರ್ ಅಲಿ ಖಾನ್ ಪಟೌಡಿ ಇಂಗ್ಲೆಂಡ್ ತಂಡದ ಸದಸ್ಯರಾಗಿ ಆಡಿದ್ದರು. ಈ ರೀತಿ ಭಾರತ ಮತ್ತು ಇಂಗ್ಲೆಂಡ್ ಗೆ ಆಡಿದ್ದ ಏಕೈಕ ಆಟಗಾರ ಈ ನವಾಬ ಪಟೌಡಿ.

5) ಇದು 1975ರ ವಿಶ್ವಕಪ್ ನಲ್ಲಿ ಸುನೀಲ್ ಗಾವಸ್ಕರ್ ಸಾಧನೆ


ಏಕದಿನ ಕ್ರಿಕೆಟ್ ಇತಿಹಾಸದ ಮೊದಲ ವಿಶ್ವಕಪ್ ನಲ್ಲಿ ಭಾರತದ ಸುನೀಲ್ ಗಾವಸ್ಕರ್ ವಿಶಿಷ್ಟ ರೀತಿಯಲ್ಲಿ ಸುದ್ದಿಯಾಗಿದ್ದರು. ಎದುರಾಳಿ ಇಂಗ್ಲೆಂಡ್ ತಂಡ ನೀಡಿದ್ದ 335 ರನ್ ಗುರಿಯನ್ನು ಬೆನ್ನಟ್ಟಿದ್ದ ಭಾರತ 60 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು ಗಳಿಸಿದ್ದು ಮಾತ್ರ 132 ರನ್. ಇದರಲ್ಲಿ ಗಾವಸ್ಕರ್ ಸಾಧನೆ 36 ರನ್. ಆದರೆ ಇದಕ್ಕಾಗಿ ಇವರು ಎದುರಿಸಿದ ಎಸೆತ ಬರೋಬ್ಬರಿ 174 !

6) ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸ್ ಬಾರಿಸಿದ ಏಕೈಕ ಆಟಗಾರ 


ವೆಸ್ಟ್ ಇಂಡೀಸ್ ನ ಕ್ರಿಕಟ್ ದೈತ್ಯ ಕ್ರಿಸ್ ಗೈಲ್ ಟೆಸ್ಟ್ ಪಂದ್ಯದ ಮೊದಲ ಎಸೆತವನ್ನೇ ಸಿಕ್ಸರ್ ಗೆರೆ ದಾಟಿಸಿದ್ದರು.  2012ರಲ್ಲಿ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಕ್ರಿಸ್ ಗೈಲ್ ಈ ಸಾಧನೆ ಮಾಡಿದ್ದರು.

7) ಎದುರಾಳಿಯ ಈ ಮೂರು ಬ್ರಹತ್ ಮೊತ್ತಕ್ಕೆ ಕಾರಣ ಇಶಾಂತ್ ಶರ್ಮ! 


ಭಾರತದ ವಿರುದ್ದ ಬ್ರೆಂಡನ್ ಮೆಕಲಮ್ 302ರನ್, ಮೈಕಲ್ ಕ್ಲಾರ್ಕ್  329 ರನ್, ಅಲಿಸ್ಟರ್ ಕುಕ್  294 ರನ್ ಬಾರಿಸಿ ಮೆರೆದಾಡಿದ್ದರು. ಈ ಎಲ್ಲಾ ದೊಡ್ಡ ಇನ್ನಿಂಗ್ಸ್ ಗಳಿಗೆ ಇಶಾಂತ್ ಶರ್ಮ ಕಾರಣ. ಯಾಕೆಂದರೆ ಈ ಮೂರೂ  ಇನ್ನಿಂಗ್ಸ್ ನಲ್ಲಿ ಇಶಾಂತ್ ಶರ್ಮ ಈ ಮೂವರ ಕ್ಯಾಚ್ ಕೈ ಚೆಲ್ಲಿದ್ದರು.

8) ಶೇನ್ ವಾರ್ನ್ ಗಿಂತ ಜಾಸ್ತಿ ವಿಕೆಟ್ ಜಯಸೂರ್ಯ ಹೆಸರಲ್ಲಿದೆ


ಹೌದು. ಇದು ಸತ್ಯ. ಏಕದಿನ ಕ್ರಿಕೆಟ್ ನಲ್ಲಿ ಶ್ರೀಲಂಕಾದ ಜಯಸೂರ್ಯ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಗಿಂತ ಜಾಸ್ತಿ ವಿಕೆಟ್ ಪಡೆದಿದ್ದಾರೆ. ಜಯಸೂರ್ಯ 323 ವಿಕೆಟ್ ಪಡೆದಿದ್ದರೆ, ಶೇನ್ ವಾರ್ನೆ ಹೆಸರಲ್ಲಿರುವ ವಿಕೆಟ್ ಗಳು ಕೇವಲ 293.

9) ಸಚಿನ್ ತೆಂಡುಲ್ಕರ್‌ಗೆ ಮುರಿಯಲಾಗಲಿಲ್ಲ ವಾಸಿಮ್ ಅಕ್ರಮ್ ದಾಖಲೆ


ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಮಾಡಿದ ದಾಖಲೆಗಳು ಅನೇಕ. ಆದರೆ ಟೆಸ್ಟ ಕ್ರಿಕೆಟ್ ನ ಅತೀ ಹೆಚ್ಚು ವೈಯಕ್ತಿಕ ಗಳಿಕೆಯಲ್ಲಿ ಸಚಿನ್ ಗಿಂತ ವಾಸಿಮ್ ಅಕ್ರಮ್ ಮುಂದಿದ್ದಾರೆ. ಸಚಿನ್ ಹೈಯೆಸ್ಟ್ ಸ್ಕೋರ್ 248ರನ್. ಆದರೆ ವಾಸಿಮ್ ಅಕ್ರಮ್ ಗಳಿಕೆ 257. !

10. 60ಓವರ್, 50 ಓವರ್ ಮತ್ತು 20 ಓವರ್ ವಿಶ್ವಕಪ್ ಗೆದ್ದ ಏಕೈಕ ತಂಡ ಭಾರತ


ಹೌದು, ಮೂರು ಮಾದರಿಯ ವಿಶ್ವಕಪ್ ಗೆದ್ದ ಏಕೈಕ ತಂಡ ಭಾರತ. 1983ರ 60 ಓವರ್ ವಿಶ್ವಕಪ್ ಕಪಿಲ್ ದೇವ್ ನಾಯಕತ್ವದಲ್ಲಿ ಗೆದ್ದರೆ, 2007ರ ಮೊದಲ 20 ಓವರ್ ವಿಶ್ವಕಪ್ ಮತ್ತು 2011ರ 50 ಓವರ್ ವಿಶ್ವಕಪ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಗೆಲುವು ಸಾಧಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next