Advertisement

Cricket: ವಾಂಖೇಡೆಯಲ್ಲಿ ಟೆಸ್ಟ್‌ ಆಡುವುದೇ ನನ್ನ ಗುರಿ: ರಹಾನೆ

10:17 PM Apr 09, 2023 | Team Udayavani |

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನ ವಾಂಖೇಡೆ ಅಂಗಳದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧವೇ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿ ಸುದ್ದಿಯಲ್ಲಿದ್ದಾರೆ ಚೆನ್ನೈ ತಂಡದ ಮುಂಬಯಿ ಆಟಗಾರ ಅಜಿಂಕ್ಯ ರಹಾನೆ!

Advertisement

ಶನಿವಾರ ರಾತ್ರಿ 158 ರನ್‌ ಚೇಸಿಂಗ್‌ ವೇಳೆ ಮುಂಬೈ ದಾಳಿಯನ್ನು ಪುಡಿಗಟ್ಟಿದ ರಹಾನೆ ಕೇವಲ 27 ಎಸೆತಗಳಲ್ಲಿ, 7 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ 61 ರನ್‌ ಬಾರಿಸಿ ಗೆಲುವಿನ ರೂವಾರಿ ಎನಿಸಿದ್ದರು. ಅವರ ಅರ್ಧ ಶತಕ ಕೇವಲ 19 ಎಸೆತಗಳಲ್ಲಿ ದಾಖಲಾಗಿತ್ತು. ಅಂದಹಾಗೆ ಇದು ಚೆನ್ನೈ ಪರ ರಹಾನೆ ಅವರ ಪಾದಾರ್ಪಣೆ ಪಂದ್ಯವಾಗಿತ್ತು!

ಈ ಕುರಿತು ಪ್ರತಿಕ್ರಿಯಿಸಿರುವ ಅಜಿಂಕ್ಯ ರಹಾನೆ, “ವಾಂಖೇಡೆಯಲ್ಲಿ ಆಡುವುದನ್ನು ನಾನು ಯಾವತ್ತೂ ಆನಂದಿಸುತ್ತೇನೆ. ಇದು ನನ್ನ ತವರಿನ ಅಂಗಳ. ಇಲ್ಲಿ ನಾನಿನ್ನೂ ಟೆಸ್ಟ್‌ ಆಡಿಲ್ಲ. ವಾಂಖೇಡೆ ಸ್ಟೇಡಿಯಂನಲ್ಲಿ ಟೆಸ್ಟ್‌ ಆಡುವುದನ್ನು ನಾನು ಬಯಸುತ್ತೇನೆ. ಇದೇ ನನ್ನ ಗುರಿ,’ ಎಂಬುದಾಗಿ ಹೇಳಿದರು.

ರಹಾನೆ ಅನಿರೀಕ್ಷಿತ ಆಯ್ಕೆ:
ಈ ಪಂದ್ಯದ ಆಡುವ ಬಳಗದಲ್ಲಿ ಅಜಿಂಕ್ಯ ರಹಾನೆ ಕಾಣಿಸಿಕೊಳ್ಳುವ ಸಾಧ್ಯತೆ ಇರಲಿಲ್ಲ. ಆದರೆ ಮೊಯಿನ್‌ ಅಲಿ ಗಾಯಾಳಾದ ಕಾರಣ ಅವಕಾಶ ಪಡೆದರು. ಇದು ಟಾಸ್‌ ವೇಳೆಯಷ್ಟೇ ರಹಾನೆಗೆ ತಿಳಿದದ್ದು.

“ನಾನು ಈ ಪಂದ್ಯದಲ್ಲಿ ಆಡುವುದೇ ಖಾತ್ರಿ ಇರಲಿಲ್ಲ. ಈ ಅವಕಾಶವನ್ನು ನಾನು ಸಮರ್ಥವಾಗಿ ಬಳಸಿಕೊಂಡೆ. ಬಹಳ ಖುಷಿಯಿಂದ ಆಡಿದೆ. ಅದು ಯಾವ ಮಾದರಿಯೇ ಆಗಿರಲಿ, ಇದಕ್ಕೆ ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ಇಂಥದೊಂದು ನಿದರ್ಶನ ಇದಾಗಿದೆ,’ ಎಂದು ರಹಾನೆ ಹೇಳಿದರು.

Advertisement

2022ರ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಅಜಿಂಕ್ಯ ರಹಾನೆ ಟೆಸ್ಟ್‌ ತಂಡದಿಂದ ಬೇರ್ಪಟ್ಟಿದ್ದರು. ಚೇತೇಶ್ವರ್‌ ಪೂಜಾರ ಪುನರಾಗಮನ ಸಾಧಿಸಿದರೂ ರಹಾನೆ ಇನ್ನೂ ದೂರವೇ ಇದ್ದಾರೆ.

ಸ್ಪಿನ್‌ ದಾಳಿಯೇ ಕಾರಣ:
ತಂಡದ ಸೋಲಿಗೆ ಅಜಿಂಕ್ಯ ರಹಾನೆ ಬ್ಯಾಟಿಂಗ್‌ಗೂ ಮಿಗಿಲಾಗಿ ರವೀಂದ್ರ ಜಡೇಜ ಮತ್ತು ಮಿಚೆಲ್‌ ಸ್ಯಾಂಟ್ನರ್‌ ಅವರ ಸ್ಪಿನ್‌ ದಾಳಿಯೇ ಮುಖ್ಯ ಕಾರಣ ಎಂದವರು ಮುಂಬೈ ಕೋಚ್‌ ಮಾರ್ಕ್‌ ಬೌಷರ್‌.

“ನಾವು ಗಳಿಸಿದ್ದು 8ಕ್ಕೆ 157 ರನ್‌ ಮಾತ್ರ. ಇದರಿಂದ ನಮ್ಮಲ್ಲಿ 7 ಮಂದಿ ಫ್ರಂಟ್‌ಲೆನ್‌ ಬೌಲರ್‌ಗಳಿದ್ದೂ ಪ್ರಯೋಜನ ಇಲ್ಲದಂತಾಯಿತು. ಒಂದಕ್ಕೆ 61 ರನ್‌ ಗಳಿಸಿ ಉತ್ತಮ ಆರಂಭ ಪಡೆದ ನಾವು 180-190ರ ಗಡಿಯನ್ನಾದರೂ ತಲುಪಬೇಕಿತ್ತು. ಹೀಗಾಗಿ ರಹಾನೆ ಬ್ಯಾಟಿಂಗ್‌ಗೂ ಮಿಗಿಲಾಗಿ ಚೆನ್ನೈ ಬೌಲರ್‌ಗಳಾದ ಜಡೇಜ ಮತ್ತು ಸ್ಯಾಂಟ್ನರ್‌ ಅವರ ಸ್ಪಿನ್‌ ನಮಗೆ ಘಾತಕವಾಗಿ ಕಂಡಿತು’ ಎಂಬುದಾಗಿ ಬೌಷರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next