ಹೋಬರ್ಟ್ : ಇಲ್ಲಿ ಸೋಮವಾರ ನಡೆದ ಟಿ 20 ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ಎದುರು ದಕ್ಷಿಣ ಆಫ್ರಿಕಾ ಸುಲಭ ಗೆಲುವಿಗೆ ಮಳೆ ಅಡ್ಡಿಯಾಯಿತು. ಎರಡೂ ತಂಡಗಳಿಗೆ ತಲಾ ಒಂದು ಅಂಕ ಹಂಚಿಕೆ ಮಾಡಲಾಗಿದೆ.
ಮಳೆಯಿಂದಾಗಿ ಪಂದ್ಯವನ್ನು ಈಗಾಗಲೇ ಪ್ರತಿ ತಂಡಕ್ಕೆ ಒಂಬತ್ತು ಓವರ್‌ಗಳಿಗೆ ಕಡಿತಗೊಳಿಸಿದ ನಂತರ ದಕ್ಷಿಣ ಆಫ್ರಿಕಾ ಏಳು ಓವರ್‌ಗಳಲ್ಲಿ 64 ರನ್‌ಗಳ ಕಡಿಮೆ ಗುರಿಯನ್ನು ಆರಾಮವಾಗಿ ಬೆನ್ನಟ್ಟುತ್ತಿತ್ತು. ಮೊದಲ ಓವರ್‌ನಲ್ಲಿ ಡಿ ಕಾಕ್ 23 ರನ್ ಗಳಿಸುವುದರೊಂದಿಗೆ ಭರ್ಜರಿ ಆರಂಭವನ್ನು ಮಾಡಿದ್ದರು.
ಮಳೆಯಿಂದಾಗಿ ಆಟವು ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡು ಮತ್ತೆ ಆರಂಭವಾದರೂ ಮಳೆ ನಿಲ್ಲುವ ಲಕ್ಷಣ ಕಂಡು ಬರಲಿಲ್ಲ. ದಕ್ಷಿಣ ಆಫ್ರಿಕಾ ವಿಜಯದ ಮುದ್ರೆಯೊತ್ತಲು ಕೇವಲ 13 ರನ್‌ಗಳು ಬೇಕಾಗಿದ್ದವು. ಆದರೆ ಮೂರು ಓವರ್‌ಗಳ ನಂತರ ಮಳೆ ಅಡಚಣೆ ಮುಂದುವರಿದು ಫಲಿತಾಂಶ ಬದಲಾಯಿತು.
ಹವಾಮಾನ ವರದಿಗಳ ಪ್ರಕಾರ ಭಾರತ ಮತ್ತು ಪಾಕಿಸ್ಥಾನ ನಡುವೆ ಭಾನುವಾರ ನಡೆದ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಮಳೆ ಯಾವುದೇ ಅಡ್ಡಿ ಮಾಡದೆ ರೋಚಕ ಪಂದ್ಯ ಸಾಗಿತ್ತು.
ಸಂಕ್ಷಿಪ್ತ ಸ್ಕೋರ್ : ಜಿಂಬಾಬ್ವೆ 9 ಓವರ್ ಗಳಲ್ಲಿ 5ವಿಕೆಟ್ ನಷ್ಟಕ್ಕೆ 79 ರನ್. ದಕ್ಷಿಣ ಆಫ್ರಿಕಾ 3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51.
ಗುರುವಾರ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ.