Advertisement

ಕ್ರಿಕೆಟ್‌ ಬಹಿಷ್ಕಾರ ಸಮುಚಿತ ಕ್ರಮವಲ್ಲ 

12:30 AM Feb 26, 2019 | |

ಪುಲ್ವಾಮ ಉಗ್ರ ದಾಳಿಯ ಬಳಿಕ ಪಾಕಿಸ್ತಾನ ಜತೆಗಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳನ್ನು ಬಹಿಷ್ಕರಿಸಬೇಕೆಂಬ ಚರ್ಚೆ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಂತೂ ಯಾವ ಕಾರಣಕ್ಕೂ ಪಾಕಿಸ್ತಾನದ ಜತೆಗೆ ಕ್ರಿಕೆಟ್‌ ಆಡಬಾರದು ಎಂಬ ರೋಷಾವೇಶದ ಅಭಿಪ್ರಾಯಗಳು ಪುಂಖಾನು ಪುಂಖ ವಾಗಿ ಹರಿದಾಡುತ್ತಿವೆ. ರಾಜಕೀಯ ವಲಯದಲ್ಲೂ ಈ ಕುರಿತಾಗಿ ವಾದ-ಪ್ರತಿವಾದಗಳು ನಡೆಯುತ್ತಿವೆ. ಆದರೆ ಕ್ರಿಕೆಟಿಗರಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಒಮ್ಮತದ ಅಭಿಪ್ರಾಯವಿಲ್ಲ. ಸಚಿನ್‌ ತೆಂಡೂಲ್ಕರ್‌, ಸುನಿಲ್‌ ಗಾವಸ್ಕರ್‌ ಅವರಂಥ ಕೆಲವು ಹಿರಿಯ ಕ್ರಿಕೆಟಿಗರು ಪಾಕ್‌ ಜತೆಗಿನ ಪಂದ್ಯ ಬಹಿಷ್ಕರಿಸುವುದು ನಿರರ್ಥಕ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಪಂದ್ಯ ಬಹಿಷ್ಕರಿಸಿದರೆ ಪಾಕಿಸ್ತಾನಕ್ಕೆ 2 ಅಂಕ ಪುಕ್ಕಟೆಯಾಗಿ ಸಿಗುತ್ತದೆ. ನಾವ್ಯಾಕೆ ಪಾಕ್‌ಗೆ ಈ ಔದಾರ್ಯ ತೋರಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿ ದ್ದಕ್ಕೆ ಸಚಿನ್‌ ಹಿಗ್ಗಾಮುಗ್ಗಾ ಟೀಕೆಗಳನ್ನೂ ಎದುರಿಸಿದ್ದಾರೆ. ಆದರೆ ಸಚಿನ್‌ ಅಭಿಪ್ರಾಯವನ್ನು ಬೆಂಬಲಿಸುವ ಅನೇಕ ಮಂದಿ ಕ್ರೀಡಾಪಟುಗಳೂ ಇದ್ದಾರೆ. ಇದೇ ವೇಳೆ ಇನ್ನೊಂದು ವರ್ಗದ ಕ್ರೀಡಾಪಟುಗಳು ಪಾಕ್‌ ಜತೆಗೆ ಆಡಲೇಬಾರದು. ದೇಶಪ್ರೇಮಕ್ಕಿಂತ ಎರಡು ಅಂಕ ದೊಡ್ಡದಲ್ಲ ಎಂದು ವಾದಿಸುತ್ತಿದೆ. ಇತ್ತಂಡಗಳ ವಾದವೂ ಮೇಲ್ನೋಟಕ್ಕೆ ಸರಿ ಎಂದು ಕಂಡು ಬರುತ್ತದೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಈ ಕುರಿತು ಯಾವ ತೀರ್ಮಾನವನ್ನೂ ಕೈಗೊಳ್ಳದೆ ಚೆಂಡನ್ನು ಸರಕಾರದ ಅಂಗಳಕ್ಕೆ ತಳ್ಳಿದೆ. 

Advertisement

ಕ್ರೀಡೆಯಲ್ಲಿ ರಾಜಕೀಯ ತರಬಾರದು ಎನ್ನುವ ಮಹೋನ್ನತ ಆಶಯ ವನ್ನು ಎಲ್ಲ ದೇಶಗಳು ಪ್ರತಿಪಾದಿಸುತ್ತಿವೆ. ಕೆಲವು ದೇಶಗಳು ಪಾಲಿಸುತ್ತವೆ ಕೂಡಾ. ಆದರೆ ಭಾರತ ಮತ್ತು ಪಾಕಿಸ್ತಾನದಂಥ ಸಂಕೀರ್ಣ ಸಂಬಂಧ ಹೊಂದಿ ರುವ ದೇಶಗಳ ನಡುವೆ ಲಾಗಾಯ್ತಿನಿಂದ ಕ್ರೀಡೆಯೂ ಒಂದು ರಾಜಕೀಯ ಪ್ರಬಲ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಎರಡು ದೇಶಗಳ ನಡುವಿನ ಸಂಬಂಧ ಹದಗೆಟ್ಟಾಗಲೆಲ್ಲ ಕ್ರೀಡೆಯನ್ನು ನಡುವೆ ಎಳೆದು ತರಲಾ ಗುತ್ತಿದೆ. ಅದೇ ರೀತಿ ಕ್ರೀಡೆಯೇ ಸಂಬಂಧ ಸುಧಾರಣೆಗೆ ಮಾಧ್ಯಮವಾದದ್ದೂ ಇದೆ. ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ಬಹಳ ಕಾಲದಿಂದ ನಿಂತು ಹೋಗಿದ್ದ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸಲು ಕ್ರಿಕೆಟನ್ನು ಬಳಸಿಕೊಂಡಿದ್ದರು. ತಂಡವನ್ನು ಬೀಳ್ಕೊಡುವಾಗ “ದಿಲ್‌ ಜೀತ್‌ ಕರ್‌ ಆವೋ’ ಎಂದು ಹೇಳಿರುವ ಅಟಲ್‌ಜಿ ಮಾತುಗಳನ್ನು ಇಂದೂ ನೆನಪಿಸಿಕೊಳ್ಳುವವರಿದ್ದಾರೆ. 

ಪ್ರಸ್ತುತ ಸಂದರ್ಭದಲ್ಲಿ ಪಾಕಿಗೆ ಪಾಠ ಕಲಿಸಲು ವಿಶ್ವಕಪ್‌ ಕ್ರಿಕೆಟ್‌ ಕೂಟವನ್ನು ಬಳಸಿಕೊಳ್ಳಬೇಕೆನ್ನುವುದು ಬಹುಜನರ ಒತ್ತಾಯ. ಆದರೆ ಪ್ರಾಯೋಗಿಕವಾಗಿ ಇದು ಸಾಧ್ಯವೇ ಎಂದು ಕೂಡಾ ನಾವು ಆಲೋಚಿಸ ಬೇಕಾಗುತ್ತದೆ. ವಿಶ್ವಕಪ್‌ ಕೂಟದ ರೂಪುರೇಷೆಗಳೆಲ್ಲ ಅಂತಿಮಗೊಂಡಿವೆ. ಪಂದ್ಯಗಳ ದಿನಾಂಕವೂ ನಿಗದಿಯಾಗಿದ್ದು, ಈ ಪ್ರಕಾರ ಜೂ.16ರಂದು ಭಾರತ ಮತ್ತು ಪಾಕ್‌ ಮುಖಾಮುಖೀಯಾಗಬೇಕು. ಒಂದು ವೇಳೆ ಈ ಪಂದ್ಯವನ್ನು ಭಾರತ ಬಹಿಷ್ಕರಿಸಿದರೆ ಪಾಕಿಗೆ ಎರಡು ಅಂಕ ಪುಕ್ಕಟೆಯಾಗಿ ಸಿಗುತ್ತದೆ. ಇದು ಸಾಧ್ಯವಾಗಬಹುದಾದರೂ ಸೆಮಿ ಫೈನಲ್‌ನಲ್ಲೋ, ಫೈನಲ್‌ನಲ್ಲೋ ಪಾಕ್‌ ತಂಡ ಮತ್ತೆ ಎದುರಾದರೆ ಬಹಿಷ್ಕರಿಸಲು ಸಾಧ್ಯವೇ? ಈ ಮೂಲಕ ನಮ್ಮ ಕೈಯಾರೆ ಪಂದ್ಯವನ್ನು ಎದುರಾಳಿಗೆ ಧಾರೆ ಎರೆದು ಕೊಡುವುದು ಸಮುಚಿತ ಕ್ರಮವೇ? ಇದರಿಂದ ಸೋಲುವ ಭೀತಿಯಲ್ಲಿ ಭಾರತ ಆಡಿಲ್ಲ ಎಂಬ ಕುಹಕಕ್ಕೆ ಗುರಿಯಾಗಬೇಕಷ್ಟೆ. ವಿಶ್ವಕಪ್‌ನ ಆರು ಕೂಟಗಳಲ್ಲೂ ಪಾಕ್‌ ವಿರುದ್ಧ ಅಜೇಯ ಗೆಲುವಿನ ದಾಖಲೆಯನ್ನು ಭಾರತ ಹೊಂದಿದೆ. ಪಂದ್ಯವನ್ನು ಬಹಿಷ್ಕರಿಸುವ ಮೂಲಕ ಈ ದಾಖಲೆಗೂ ಕುಂದುಂಟು ಮಾಡಿಕೊಂಡಂತಾಗುತ್ತದೆ ಎನ್ನುವುದನ್ನು ಆಡಬಾರದು. 

ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಸರಣಿ ನಡೆಯದೇ ದಶಕವೇ ಆಗಿದೆ. ದ್ವಿಪಕ್ಷೀಯ ಸರಣಿಯಲ್ಲಾದರೆ ಆಡಬೇಕೆ ಬೇಡವೆ ಎಂದು ನಿರ್ಧರಿಸುವ ಎಲ್ಲ ಹಕ್ಕು ನಮಗಿದೆ. ಆದರೆ ಪ್ರಸ್ತುತ ಭಾರತ ಮತ್ತು ಪಾಕ್‌ ಆಡುವುದು ವಿಶ್ವಕಪ್‌ ಕೂಟದಲ್ಲಿ. ಇಲ್ಲಿ ಇತರ ದೇಶಗಳ ಅಂತೆಯೇ ಐಸಿಸಿ ನಿಯಮಾವಳಿಗಳನ್ನೂ ನೋಡಿಕೊಳ್ಳಬೇಕಾಗುತ್ತದೆ. ಇದರ ಬದಲು ವಿಶ್ವಕಪ್‌ ಕೂಟದಿಂದಲೇ ಪಾಕಿಸ್ತಾನವನ್ನು ನಿಷೇಧಿಸಿದರೆ ಅದು ಪರಿಣಾಮಕಾರಿ ಕ್ರಮವಾಗುತ್ತದೆ. ಈ ನಿಟ್ಟಿನಲ್ಲಿ ಐಸಿಸಿಗೆ ಬಿಸಿಸಿಐ ಈಗಾಗಲೇ ಪತ್ರವನ್ನು ಬರೆದಿದೆ. ಆದರೆ ಇದಕ್ಕೆ ಐಸಿಸಿಯಿಂದ ಪೂರಕವಾದ ಪ್ರತಿಸ್ಪಂದನೆ ವ್ಯಕ್ತವಾಗಿಲ್ಲ. ಪಂದ್ಯವನ್ನು ಬಹಿಷ್ಕರಿಸಿದರೆ ಅದರ ಪಾರ್ಶ್ವ ಪರಿಣಾಮಗಳು ಬೇರೆಯೇ ಇರುತ್ತವೆ. ಪಾಕಿಸ್ತಾನದ ಶೂಟಿಂಗ್‌ ಪಟುಗಳಿಗೆ ವಿಸಾ ನಿರಾಕರಿಸಿ ಅಂತರಾಷ್ಟ್ರೀಯ ಒಲಿಂಪಿಕ್‌ ಕೆಂಗಣ್ಣಿಗೆ ಭಾರತ ಗುರಿಯಾಗಿದೆ. ಸಾಧ್ಯವಾದರೆ ಭಾರತ ತನ್ನೆಲ್ಲ ಪ್ರಭಾವ ಮತ್ತು ಸಂಪರ್ಕಗಳನ್ನು ಬಳಸಿಕೊಂಡು ವಿಶ್ವಕಪ್‌ ಕೂಟದಿಂದ ಪಾಕಿಸ್ತಾನವನ್ನು ನಿಷೇಧಿಸುವ ಪ್ರಯತ್ನ ಮಾಡಬೇಕು. ಇದರಲ್ಲಿ ಯಶಸ್ಸಾದರೆ ಅದು ನಮಗೆ ಸಿಗುವ ನಿಜವಾದ ರಾಜತಾಂತ್ರಿಕ ಗೆಲುವು.

Advertisement

Udayavani is now on Telegram. Click here to join our channel and stay updated with the latest news.

Next