Advertisement

ವರ್ಣಭೇದ ನೀತಿ ವಿರುದ್ಧ ಸಿಡಿದ ಡ್ಯಾರನ್‌ ಸಮ್ಮಿ

11:26 AM Jun 08, 2020 | mahesh |

ಕಿಂಗ್‌ಸ್ಟನ್‌ (ಜಮೈಕಾ): ಅಮೆರಿಕದಲ್ಲಿ ಆಫ್ರಿಕಾ ಮೂಲದ ಪ್ರಜೆ ಯನ್ನು ಬಿಳಿ ಜನಾಂಗದ ಪೊಲೀಸ್‌ ಅಧಿಕಾರಿಯೊಬ್ಬ ಅಮಾನವೀಯವಾಗಿ ಹತ್ಯೆ ಮಾಡಿದ್ದನ್ನು ವೆಸ್ಟ್‌ ಇಂಡೀಸ್‌ ಕ್ರಿಕೆಟಿಗರಾದ ಕ್ರೀಸ್‌ ಗೇಲ್‌ ಹಾಗೂ ಡ್ಯಾರೆನ್‌ ಸಮ್ಮಿ ಖಂಡಿಸಿದ್ದಾರೆ. ವಿಶ್ವ ಕ್ರಿಕೆಟ್‌ ಕುಟುಂಬ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಒಗ್ಗಟ್ಟಾಗಿ ವರ್ಣಭೇದ ನೀತಿ ವಿರುದ್ಧ ಧ್ವನಿ ಎತ್ತಬೇಕು ಎಂದು ಸಮ್ಮಿ ಒತ್ತಾಯಿಸಿದ್ದಾರೆ. ಇದೇ ವೇಳೆ ಮಾತ ನಾಡಿರುವ ಡ್ಯಾಶಿಂಗ್‌ ಓಪನರ್‌ ಕ್ರೀಸ್‌ ಗೇಲ್‌, ಜನಾಂಗೀಯ ನಿಂದನೆ ಎನ್ನುವುದು ಫ‌ುಟ್‌ಬಾಲ್‌ಗೆ ಮಾತ್ರ ಸೀಮಿತವಾಗಿಲ್ಲ, ಕ್ರಿಕೆಟ್‌ನಲ್ಲೂ ಇದೇ ಎಂಬ ಸ್ಫೋಟಕ ಮಾಹಿತಿ ಹೊರಹಾಕಿ ಚರ್ಚೆ ಹುಟ್ಟುಹಾಕಿದ್ದಾರೆ.

Advertisement

“ಸಮಸ್ಯೆಯ ಭಾಗ ಆಗದಿರಿ’
ಜನಾಂಗೀಯ ನಿಂದನೆ ಅಥವಾ ವರ್ಣಭೇದ ನೀತಿ ವಿರುದ್ಧ ಇಡೀ ಕ್ರಿಕೆಟ್‌ ಕುಟುಂಬ ಒಂದಾಗಿ ಹೋರಾಡಬೇಕು, ಐಸಿಸಿ ಕೂಡ ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಸಮ್ಮಿ ಸರಣಿ ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ. ಹಲ್ಲೆಯ ವೀಡಿಯೋ ನೋಡಿದ ಬಳಿಕವೂ ಅನ್ಯಾಯದ ವಿರುದ್ಧ ಕ್ರಿಕೆಟ್‌ ಜಗತ್ತು ಹೋರಾಡದಿದ್ದರೆ ನೀವು ಕೂಡ ಸಮಸ್ಯೆಯ ಭಾಗವಾಗಿದ್ದೀರಿ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.  ಐಸಿಸಿ ಸೇರಿದಂತೆ ವಿವಿಧ ದೇಶಗಳ ಎಲ್ಲ ಕ್ರಿಕೆಟ್‌ ಮಂಡಳಿಗಳಿಗೆ ನನ್ನಂತೆ ಇರುವ ಜನರಿಗೆ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲವೆ? ಅವರಿಗಾಗಿರುವ ಸಾಮಾಜಿಕ ಅನ್ಯಾಯದ ವಿರುದ್ಧ ಮಾತನಾಡುವುದಿಲ್ಲವೇ? ಇದು ಕೇವಲ ಅಮೆರಿಕದ ಕತೆಯಲ್ಲ, ಇದು ಪ್ರತಿ ದಿನವೂ ಸಂಭವಿಸುತ್ತದೆ, ಬಹಳಷ್ಟು ವರ್ಷಗಳಿಂದ ಕಪ್ಪು ಜನಾಂಗದ ವ್ಯಕ್ತಿಗಳು ತುಳಿತಕ್ಕೆ ಒಳಗಾಗುತ್ತಲೇ ಬದುಕು ತ್ತಿದ್ದಾರೆ, ದೌರ್ಜನ್ಯದ ವಿರುದ್ಧ ಮೌನ ವಾಗಿರುವ ಸಮಯವಲ್ಲ ಎಂದು ನಿಮಗೆ ತಿಳಿಸಲು ಇಷ್ಟಪಡುತ್ತೇನೆ ಎಂದು ವೆಸ್ಟ್‌ ಇಂಡೀಸ್‌ ತಂಡದ ಮಾಜಿ ನಾಯಕನೂ ಆದ ಡ್ಯಾರನ್‌ ಸಮ್ಮಿ ಹೇಳಿದರು.

ಕ್ರಿಕೆಟ್‌ನಲ್ಲೂ ವರ್ಣಭೇದ
ವರ್ಣಭೇದ ನೀತಿ ವಿರುದ್ಧ ಕ್ರಿಸ್‌ ಗೇಲ್‌ ಕೂಡ ಸಿಡಿದೆದ್ದಿದ್ದಾರೆ.  “ನಾನು ಜಗತ್ತಿನಾದ್ಯಂತ ಪ್ರಯಾಣಿಸಿ ದ್ದೇನೆ. ಈ ವೇಳೆ ಜನಾಂಗೀಯ ನಿಂದನೆಗಳನ್ನು ಸ್ವತಃ ಅನುಭವಿಸಿದ್ದೇನೆ. ಇದಕ್ಕೆ ಕಾರಣ ನನ್ನ ಚರ್ಮದ ಬಣ್ಣ ಕಪ್ಪಾಗಿರುವುದು. ವರ್ಣ ಭೇದ ನೀತಿ ಕೇವಲ ಫ‌ುಟ್‌ಬಾಲ್‌ನಲ್ಲಿ ಮಾತ್ರ ಸೀಮಿತವಾಗಿಲ್ಲ, ಅದು ಕ್ರಿಕೆಟ್‌ ವಲಯ ದಲ್ಲೂ ಹೆಚ್ಚು ಇದೆ. ಎಲ್ಲ ತಂಡಗಳಲ್ಲೂ ನಾನು ಆಡಿದ್ದೇನೆ. ಕೊನೆಗೆ ಗೊತ್ತಾಗುವುದು ಕಪ್ಪು ವರ್ಣಿಯ ಶಕ್ತಿ ಶಾಲಿ, ಕಪ್ಪು ಮತ್ತು ಹೆಮ್ಮೆ, ಯೂನಿವರ್ಸಲ್‌ ಬಾಸ್‌’ ಎಂದು ಗೇಲ್‌ ಹೇಳಿದ್ದಾರೆ.  ಜಿಂಬಾಬ್ವೆಯ ಕೆಲವು ಕರಿಯ ಕ್ರಿಕೆಟಿಗರು ಕೂಡ ವರ್ಣಭೇದ ನೀತಿ ವಿರುದ್ಧ ದನಿಯೆತ್ತಿದ್ದಾರೆ.

ಐಪಿಎಲ್‌ ವೇಳೆ ನಿಂದನೆ
ತಾನು ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್‌ ಪರ ಆಡುತ್ತಿದ್ದಾಗ ಗೇಲಿಗೊಳಗಾಗಿದ್ದೆ ಎಂಬುದಾಗಿ ಡ್ಯಾರನ್‌ ಸಮ್ಮಿ ತಮ್ಮ ನೂತನ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಉಲ್ಲೇಖೀಸಿದ್ದಾರೆ. “ಅಲ್ಲಿ ನನ್ನನ್ನು ಮತ್ತು ಶ್ರೀಲಂಕಾದ ತಿಸರ ಪೆರೆರ ಅವರನ್ನು “ಕಾಲು’ (ಕಪ್ಪು) ಎಂದು ಕರೆಯುತ್ತಿದ್ದರು. ಆಗ ಇದೊಂದು ಮೆಚ್ಚುಗೆಯ ಪದ ಎಂದು ಭಾವಿಸಿದ್ದೆ. ಇದರರ್ಥ ನನಗೆ ಈಗ ತಿಳಿದಿದೆ. ಇದೊಂದು ಹೀಯಾಳಿಕೆಯ ಪದ. ನನಗೀಗ ವಿಪರೀತ ಸಿಟ್ಟು ಬರುತ್ತಿದೆ…’ ಎಂದಿದ್ದಾರೆ ಸಮ್ಮಿ.

Advertisement

Udayavani is now on Telegram. Click here to join our channel and stay updated with the latest news.

Next