Advertisement

ಮರಳಿ ಗೂಡು ಸೇರಿದ ಕ್ರಿಕೆಟ್‌ ಹಕ್ಕಿಗಳು

09:01 AM Apr 14, 2019 | Team Udayavani |

ನಿಷೇಧದ ಬಳಿಕ ಮತ್ತೆ ವಾರ್ನರ್‌,ಸ್ಮಿತ್‌ ಕ್ರಿಕೆಟ್‌ಗೆ
ಐಪಿಎಲ್‌ನಲ್ಲಿ ಕಾಂಗರೂ ಆಟಗಾರರಿಬ್ಬರ ಅಬ್ಬರ

Advertisement

ನಮಗೆಲ್ಲರಿಗೂ ಇನ್ನೂ ಚೆನ್ನಾಗಿ ನೆನಪಿದೆ, ಚೆಂಡು ವಿರೂಪವೆಂಬ ಪ್ರಕರಣ ಇಡೀ ವಿಶ್ವ ಕ್ರಿಕೆಟ್‌ ಲೋಕವನ್ನೇ ನಡುಗಿಸಿದ್ದು. ಆಸೀಸ್‌ನ ಬ್ಯಾನ್‌ಕ್ರಾಫ್ಟ್, ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌ ಸಹಿತ ಕಠಿಣ ಶಿಕ್ಷೆಗೆ ಗುರಿಯಾಗಿದ್ದು. ಆ ದಿನಗಳು ವಿಶ್ವ ಕ್ರಿಕೆಟ್‌ನ ಕರಾಳ ದಿನಗಳಲ್ಲಿ ಒಂದಾಗಿ ಎಂದೂ ಮರೆಯದ ಕಪ್ಪುಚುಕ್ಕೆಯಾಗಿ ದಾಖಲಾಗಿತ್ತು.

ಹೌದು, ಇದು ವರ್ಷಗಳ ಹಿಂದಿನ ಕಥೆ, ಆಗ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಕ್ರಿಕೆಟ್‌ ಸರಣಿಗಾಗಿ ಆಸೀಸ್‌ ತೆರಳಿತ್ತು. ಈ ವೇಳೆ ಬ್ಯಾನ್‌ಕ್ರಾಫ್ಟ್ ಮಾಡಿದ ಒಂದು ಎಡವಟ್ಟು ಪೂರ್ಣ ಆಸ್ಟ್ರೇಲಿಯ ಕ್ರಿಕೆಟಿಗರ ಮಾನ ಹರಾಜು ಮಾಡಿತ್ತು. ಅಂದು ಆಸೀಸ್‌ ತಂಡದ ನಾಯಕರಾಗಿದ್ದ ಸ್ಟೀವ್‌ ಸ್ಮಿತ್‌ ಹಾಗೂ ಉಪನಾಯಕ ಡೇವಿಡ್‌ ವಾರ್ನರ್‌ ನೀಡಿದ ಕುಮ್ಮಕ್ಕಿನಿಂದಲೇ ಚೆಂಡು ವಿರೂಪ ಮಾಡಿದ್ದು ಎನ್ನುವುದನ್ನು ಬಹಿರಂಗವಾಗಿತ್ತು. ಸ್ವತಃ ಬ್ಯಾನ್‌ಕ್ರಾಫ್ಟ್ ಇದನ್ನು ಹೇಳಿಕೊಂಡಿದ್ದರು. ಇದೆಲ್ಲದರ ನಂತರ‌ ಸ್ಮಿತ್‌, ವಾರ್ನರ್‌ ಕಣ್ಣೀರಾಗಿದ್ದರು. ತಮ್ಮದು ತಪ್ಪೆಂದು ಪಶ್ಚಾತಾಪ ಪಟ್ಟಿದ್ದರು. ತಲಾ 1 ವರ್ಷ ನಿಷೇಧಕ್ಕೂ ಗುರಿಯಾದರು. ಇದೀಗ 1 ವರ್ಷದ ನಿಷೇಧ ಬಳಿಕ ಐಪಿಎಲ್‌ ಮೂಲಕ ಮತ್ತೆ ಕ್ರಿಕೆಟ್‌ ಲೋಕಕ್ಕೆ ಕಾಲಿಟ್ಟಿದ್ದಾರೆ ಕಾಂಗರೂ ದೇಶದ ತಾರೆಯರು.

ಮುಂಬರುವ ಇಂಗ್ಲೆಂಡ್‌ನ‌ಲ್ಲಿ ನಡೆಯಲಿರುವ ವಿಶ್ವಕಪ್‌ಗ್ೂ ಮೊದಲು ಐಪಿಎಲ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿರುವ ಆಸೀಸ್‌ ಕ್ರಿಕೆಟ್‌ ಹಕ್ಕಿಗಳು ಸದ್ಯ ಕೂಟದಲ್ಲಿ ಮಿಂಚುತ್ತಿವೆ. ಅದರಲ್ಲೂ ಡೇವಿಡ್‌ ವಾರ್ನರ್‌ ಬಿರುಸಿನ ಬ್ಯಾಟಿಂಗ್‌ ಮೂಲಕ ಸೂಕ್ತ ಸಮಯದಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡಕ್ಕೆ ನೆರವಾಗುತ್ತಿದ್ದಾರೆ. ಸ್ಮಿತ್‌ ಕೂಡ ಗಾಯದ ನಡುವೆಯೂ ರಾಜಸ್ತಾನ್‌ ರಾಯಲ್ಸ್‌ ತಂಡದ ಮುಖ್ಯ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಸಕ್ತ ಕೂಟದಲ್ಲಿ ಇವರಿಬ್ಬರು ನೀಡಿರುವ ಪ್ರದರ್ಶನದ ವಿವರವನ್ನು ಇಲ್ಲಿ ನೀಡಲಾಗಿದೆ.

ಅಬ್ಬರಿಸುತ್ತಿರುವ ವಾರ್ನರ್‌: ಪ್ರಸಕ್ತ ಕೂಟದಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡ ಮಿಂಚಿನ ಪ್ರದರ್ಶನ ನೀಡಿ ಉತ್ತಮ ಸ್ಥಿತಿಯಲ್ಲಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಡೇವಿಡ್‌ ವಾರ್ನರ್‌. ಆರಂಭಿಕರಾಗಿ ಕಣಕ್ಕೆ ಇಳಿಯುವ ವಾರ್ನರ್‌ ಮೊದಲ ಪಂದ್ಯದಿಂದಲೂ ಅಬ್ಬರಿಸುತ್ತಿದ್ದಾರೆ. ಈಗಲೂ ಅದೇ ಅಬ್ಬರವನ್ನು ಮುಂದುವರಿಸಿದ್ದಾರೆ. ಮಾತ್ರವಲ್ಲ ಇತರೆ ತಂಡಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

Advertisement

ಕೆಕೆಆರ್‌ ವಿರುದ್ಧ ಆಡುವ ಮೂಲಕ ಸನ್‌ರೈಸರ್ಸ್‌ ಹೈದ್ರಾಬಾದ್‌ ಐಪಿಎಲ್‌ 12ನೇ ಆವೃತ್ತಿ ಪ್ರಯಾಣವನ್ನು ಆರಂಭಿಸಿತು. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ವಾರ್ನರ್‌ 53 ಎಸೆತದಿಂದ 9 ಬೌಂಡರಿ, 3 ಸಿಕ್ಸರ್‌ ನೆರವಿನಿಂದ ಒಟ್ಟು 85 ರನ್‌ ಅರ್ಧಶತಕ ಬಾರಿಸಿದ್ದರು. ವಿಶೇಷವೆಂದರೆ ಇವರ ಸ್ಫೋಟಕ ಬ್ಯಾಟಿಂಗ್‌ ಹೊರತಾಗಿಯೂ ಆ ಪಂದ್ಯದಲ್ಲಿ ಹೈದ್ರಾಬಾದ್‌ ತಂಡ ಸೋಲು ಅನುಭವಿಸಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಆದರೆ ರಾಜಸ್ಥಾನ್‌ ರಾಯಲ್ಸ್‌ ತಂಡದ ವಿರುದ್ಧ ಎರಡನೇ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ 69 ರನ್‌ ಸಿಡಿಸಿ ಮತ್ತೂಮ್ಮೆ ಅಬ್ಬರಿಸಿದ್ದರು. 37 ಎಸೆತದಿಂದ 9 ಬೌಂಡರಿ, 2 ಸಿಕ್ಸರ್‌ ಮೂಲಕ ಗರ್ಜಿಸಿದ್ದರು ವಾರ್ನರ್‌. ಈ ಪಂದ್ಯದಲ್ಲಿ ಹೈದ್ರಾಬಾದ್‌ ತಂಡವು 5 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಆರ್‌ಸಿಬಿ ವಿರುದ್ಧ ನಡೆದ 3ನೇ ಪಂದ್ಯದಲ್ಲಿ ವಾರ್ನರ್‌ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದರು. 55 ಎಸೆತದಿಂದ 5 ಬೌಂಡರಿ. 5 ಸಿಕ್ಸರ್‌ ಮೂಲಕ ಅಜೇಯ 100 ರನ್‌ಗಳಿಸಿದ್ದರು. ಈ ಪಂದ್ಯದಲ್ಲಿ ಹೈದ್ರಾಬಾದ್‌ ಪ್ರಚಂಡ 118 ರನ್‌ಗಳಿಂದ ಗೆಲುವುಗಳಿಸಿತ್ತು. ಡೆಲ್ಲಿ ವಿರುದ್ಧ 10ರನ್‌, ಮುಂಬೈ ವಿರುದ್ಧ 15 ರನ್‌ ಗಳಿಸಲಷ್ಟೇ ವಾರ್ನರ್‌ಗೆ ಸಾಧ್ಯವಾಗಿತ್ತು. ಆದರೆ 6ನೇ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ವಿರುದ್ಧ ವಾರ್ನರ್‌ ಬಿರುಗಾಳಿ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. 62 ಎಸೆತ ಎದುರಿಸಿದ ಅವರು 6 ಬೌಂಡರಿ. 1 ಸಿಕ್ಸರ್‌ ಅಬ್ಬರಿಸಿದರು. ಸದ್ಯ ಹೈದ್ರಾಬಾದ್‌ ತಂಡದ ಪರ 6 ಪಂದ್ಯ ಆಡಿರುವ ವಾರ್ನರ್‌ ಒಟ್ಟಾರೆ 349 ರನ್‌ಗಳಿಸಿ ಕೂಟದ ಆರೆಂಜ್‌ ಕ್ಯಾಪ್‌ ಪಡೆದುಕೊಂಡಿದ್ದಾರೆ.

ಸ್ಮಿತ್‌ಗೆ ಗಾಯದ ಸಮಸ್ಯೆ
ಸ್ವೀವನ್‌ ಸ್ಮಿತ್‌ ಕೂಟದಲ್ಲಿ ರಾಜಸ್ಥಾನ್‌ ಪರ ದೊಡ್ಡದಾದ ಮೊತ್ತವನ್ನು ಹೊಡೆದಿಲ್ಲವಾದರೂ ಗಾಯದ ಕಾರಣದಿಂದ ನಲುಗಿದ್ದಾರೆ. ವಿಶ್ವಕಪ್‌ಗ್ೂ ಮೊದಲು ಇವರು ಗಾಯಕ್ಕೆ ತುತ್ತಾಗಿರುವುದು ಆಸೀಸ್‌ ತಂಡದ ಆತಂಕವನ್ನು ಹೆಚ್ಚಿಸಿದೆ. ಸ್ಮಿತ್‌ ಸಿಡಿಯುವರೇ ಎನ್ನುವುದನ್ನು ಮುಂದಿನ ಪಂದ್ಯಗಳಲ್ಲಿ ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next