Advertisement

ಬೆಟ್ಟಿಂಗ್‌ ದಂಧೆ ಕಡಿವಾಣಕ್ಕೆ ಕ್ರಮ ಕೈಗೊಳ್ಳಿ ‌

02:15 PM Apr 30, 2022 | Team Udayavani |

ಕುದೂರು:  ಐಪಿಎಲ್‌ ಕ್ರಿಕೆಟ್‌ನಿಂದ ಬೆಟ್ಟಿಂಗ್‌ ದಂಧೆ ರಾಮನಗರ ಜಿಲ್ಲೆಯ ಎಲ್ಲೆಡೆ ನಡೆಯುತ್ತಿದೆ. ಐಪಿಎಲ್‌ ಬೆಟ್ಟಿಂಗ್‌ ದಂಧೆಯಿಂದ ಕಳೆದ ಐದು ವರ್ಷಗಳಲ್ಲಿ ಮೂರು ಜನ ಸಾವಿಗೀಡಾದ ಪ್ರಸಂಗ ಮರೆಯುವ ಮುನ್ನವೇ ಕುದೂರಿನಲ್ಲಿ ಐಪಿಎಸ್‌ ಬೆಟ್ಟಿಂಗ್‌ ದಂಧೆ ಸ್ವಲ್ಪ ಜಾಸ್ತಿಯಾಗಿದೆ.

Advertisement

ಇದರಿಂದ ಗ್ರಾಮದ ಯುವಕರು ಮೀಟರ್‌ ಬಡ್ಡಿಗೆ ಹಣ ಪಡೆದು ಊರು ಬಿಟ್ಟಿರುವ ಸಾಕಷ್ಟು ಉದಾಹರಣೆಗಳಿವೆ.

ಎಲ್ಲೆಲ್ಲಿ ದಂಧೆ: ಗ್ರಾಮದ ಹೋಟೆಲ್‌, ಅಂಗಡಿ-ಮುಂಗಟ್ಟುಗಳು, ರಸ್ತೆಗಳು ಮತ್ತು ಬಸ್‌ ನಿಲ್ದಾಣ, ಶಿವಗಂಗೆ ರಸ್ತೆಯಲ್ಲಿ ಬೆಟ್ಟಿಂಗ್‌ ದಂಧೆ ಟಾಸ್‌ನಿಂದ ಹಿಡಿದು ಕೊನೆಯ ಎಸೆತದವರೆಗೂ ವ್ಯಾಪಕವಾಗಿ ನಡೆಯುತ್ತಿದೆ. ಮುಂದಿನ ಪಂದ್ಯದ ಭವಿಷ್ಯದ ಕುರಿತು ಅಡ್ವಾನ್ಸ್‌ ಬುಕ್ಕಿಂಗ್‌ ಕೂಡ ಮಾಡಲಾಗುತ್ತಿದೆ. ಒಟ್ಟಾರೆ ಯಾರು ಗೆಲ್ಲುತ್ತಾರೆ, ಎಷ್ಟು ಕೊಡುತ್ತಾರೆ ಎನ್ನುವುದೇ ಮಾತು. ಪ್ರತಿ ವರ್ಷ ನಡೆಯುವುದು ಸಾಮಾನ್ಯ. ಆದರೆ, ಬೆಟ್ಟಿಂಗ್‌ ಆನ್‌ ಲೈನ್‌ ಆಗಿರುವುದರಿಂದ ವೆಬ್‌ಸೈಟ್‌ಗಳ ಮೂಲಕವೇ ದಂಧೆ ನಡೆಯುತ್ತಿದೆ. ಆದ್ದರಿಂದ ಸೈಬರ್‌ ಕ್ರೈಂ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಗ್ರಾಮೀಣದಲ್ಲೂ ಆನ್‌ಲೈನ್‌: ದೇಶವೇ ಡಿಜಿಟಲಿ àಕರಣಗೊಂಡ ಮೇಲೆ ಜೂಜು ಸಹ ಆನ್‌ಲೈನ್‌ ಗೊಂಡಿದೆ. ಮಧ್ಯವರ್ತಿಗಳು ಸೃಷ್ಟಿಸಿರುವ ವೆಬ್‌ ಸೈಟ್‌ ಗಳಿಂದಾಗಿ ಗ್ರಾಮೀಣ ಭಾಗದಲ್ಲಿಯೂ ಆನ್‌ಲೈನ್‌ ಬೆಟ್ಟಿಂಗ್‌ ದಂಧೆ ಪ್ರಾರಂಭವಾಗಿದೆ.

ಪಟ್ಟಣದ ವ್ಯಾಪ್ತಿಯಲ್ಲಿನ ಕ್ರಿಕೆಟ್‌ ಮಧ್ಯವರ್ತಿಗಳು ಸ್ಥಳೀಯ ವಾಗಿಯೇ ಒಂದು ವೆಬ್‌ಸೈಟ್‌ ಲಿಂಕನ್ನು ಬೆಟ್ಟಿಂಗ್‌ ಮಾಡುವವರಿಗೆ ಸಂದೇಶದ ಮೂಲಕ ಕಳುಹಿಸ ಲಾಗುತ್ತದೆ. ಈ ಲಿಂಕ್‌ ತೆರೆಯಲು ಖಾತೆದಾರರ ಹೆಸರು, ಪಾಸ್‌ವರ್ಡ್‌ ಅವಶ್ಯ. ಲಿಂಕ್‌ ಕಳುಹಿಸುವ ಮಧ್ಯವರ್ತಿಗಳಿಗೆ ನಗದು ಮೂಲಕ ನೀಡುವ ಅಷ್ಟು ಹಣವನ್ನು ಈ ಲಿಂಕ್‌ನಲ್ಲಿ ಪಾಯಿಂಟ್ಸ್‌ ಮೂಲಕ ನೀಡಲಾಗುತ್ತದೆ. ಅಷ್ಟು ಹಣ ಖಾಲಿಯಾಗುವವರೆಗೂ ಯಾವ ತಂಡದ ಮೇಲಾದರೂ ಬೆಟ್ಟಿಂಗ್‌ ಕಟ್ಟಬಹುದು. ಹೀಗೆ ಲಿಂಕ್‌ ಮೂಲಕ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಆನ್‌ಲೈನ್‌ ರೂಪ ಪಡೆದುಕೊಂಡಿದೆ. ಆದರೆ, ಬೆಟ್ಟಿಂಗ್‌ ಕಟ್ಟುವವರು ಇದನ್ನು ಬಹಿರಂಗಪಡೆಸಲು ಮುಂದಾಗುತ್ತಿಲ್ಲ.

Advertisement

ಈ ಲಿಂಕ್‌ನಲ್ಲಿ ಹಣ ಇದ್ದರೆ ಮಾತ್ರ ಪುಟ ತೆರದುಕೊಳ್ಳುತ್ತದೆ. ಇಲ್ಲವಾದರೆ ಲೋ ಬ್ಯಾಲೆನ್ಸ್‌ ಎಂದು ಲಿಂಕ್‌ ಕಟ್‌ ಆಗುತ್ತದೆ. ಮಧ್ಯವರ್ತಿಗಳಿಗೆ ಹಣ ನೀಡಿದ ಬಳಿಕವಷ್ಟೇ ಲಿಂಕ್‌ ತೆರೆಯುತ್ತದೆ. ಇಲ್ಲಿ ಯಾವ ಯಾವ ತಂಡದ ಮೇಲೆ ಬೇಕಾದರೂ, ಹೇಗೆ ಬೇಕಾದರೂ ಬೆಟ್ಟಿಂಗ್‌ ಕಟ್ಟಿಕೊಳ್ಳಬಹುದು. ಕೊನೆ ಕ್ಷಣದವರೆಗೂ ಗೆಲ್ಲುವ ತಂಡದ ಮೇಲೆ ಬಾಜಿ ಕಟ್ಟಬಹುದು.

ದಂಧೆ ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟ: ಆನ್‌ಲೈನ್‌ ಬೆಟ್ಟಿಂಗ್‌ ದಂಧೆ ಹಳ್ಳಿ ಹಳ್ಳಿಗಳಿಗೂ ವ್ಯಾಪಿಸಿದೆ ಎನ್ನುವುದೇ ಆತಂಕದ ವಿಚಾರ. ಆನ್‌ಲೈನ್‌ ಬೆಟ್ಟಿಂಗ್‌ ದಂಧೆ ತಲೆ ನೋವಾಗಿ ಪರಿಣಮಿಸಿದೆ. ಏಕೆಂದರೆ ಇದೇ ಜಾಡು ಹಿಡಿಯುವುದು, ಬೆಟ್ಟಿಂಗ್‌ ದಂಧೆ ಹೇಗೆ ನಡೆಯುತ್ತದೆ ಎಂಬುದನ್ನು ಪತ್ತೆ ಹಚ್ಚಿ ಇದನ್ನು ಸಾಭೀತುಪಡಿಸುವುದು ಪೊಲೀಸರಿಗೆ ತುಂಬಾ ಕಷ್ಟವಾಗಿದೆ.

ಆನ್‌ಲೈನ್‌ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಜೂಜುಕೊರರೇ ಮಧ್ಯವರ್ತಿಗಳಿಗೆ ರಿಮೋಟ್‌ ಕಂಟ್ರೋಲ್‌, ಇಲ್ಲಿ ಎಲ್ಲರಿಗೂ ಲಿಂಕ್‌ ಸಿಗುವುದಿಲ್ಲ. ಲಿಂಕ್‌ ಹೊಂದಿರುವ ಶಿಪಾರಸ್ಸು ಇದ್ದರೆ ಮಾತ್ರವೇ ಈ ಲಿಂಕ್‌ ಜೊತೆಗೆ ಯೂಸರ್‌ ನೇಮ್‌, ಪಾಸ್‌ವರ್ಡ್‌ ದೊರೆಯುತ್ತದೆ. ಜೂಜುಕೊರರನ್ನೇ ರಿಮೋಟ್‌ ಕಂಟ್ರೋಲ್‌ ಆಗಿ ಬಳಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳಲಾಗುತ್ತದೆ. ಇಲ್ಲಿ ಯಾರು ಬೆಟ್ಟಿಂಗ್‌ ಕಟ್ಟಿದ್ದಾರೆ. ಎಷ್ಟು ಕಟ್ಟಿದ್ದಾರೆ ಎಂಬ ಮಾಹಿತಿ ಮಧ್ಯವರ್ತಿಗಳಿಗೂ ತಿಳಿಸಿರುವುದಿಲ್ಲ. ಎಲ್ಲವೂ ರಹಸ್ಯವಾಗಿ ನಡೆಯುತ್ತದೆ. ಜೂಜಿಗೆ ಬಲಿಯಾಗಿ ಹಲವು ಮಂದಿ ಬೀದಿಪಾಲಾಗಿರುವ ಉದಾಹರಣೆಗಳಿವೆ. ಈಗ ಆನ್‌ಲೈನ್‌ ಜೂಜು ಯುವ ಸಮುದಾಯವನ್ನು ಟಾರ್ಗೆಟ್‌ ಮಡಿರುವುದು ವಿಪರ್ಯಾಸ.

ಬೆಟ್ಟಿಂಗ್‌ ನಿಷೇಧಕ್ಕೆ ಮನವಿ: ಯುವ ಸಮುದಾಯ, ವಿದ್ಯಾರ್ಥಿಗಳು ಇಂತಹ ದಂಧೆಗೆ ಇಳಿಯಬಾರದು. ಈ ತರಹದ ಚಟುವಟಿಕೆಗಳು ಆನ್‌ಲೈನ್‌ಗೊಂಡಿರುವುದರಿಂದ ಎಲ್ಲರೂ ಮೊಬೈಲ್‌ ಹಿಡಿದು ಕುಳಿತುಕೊಂಡಿರುತ್ತಾರೆ. ಆದರೆ, ಇವರಲ್ಲಿ ಬೆಟ್ಟಿಂಗ್‌ ಆಡುವವರು ಯಾರು ಎಂದು ಕಂಡು ಹಿಡಿಯಲು ಕಷ್ಟವಾಗುತ್ತದೆ. ಸರ್ಕಾರ ಇಂತಹ ಬೆಟ್ಟಿಂಗ್‌ ದಂಧೆಯನ್ನು ನಿಷೇಧ ಮಾಡಬೇಕು ಎಂದು ಪೊಲೀಸ್‌ ಇಲಾಖೆ ಮನವಿ ಮಾಡಿದೆ.

ಕ್ರಿಕೆಟ್‌ ಬೆಟ್ಟಿಂಗ್‌ ಕುದೂರು ಗ್ರಾಮದಲ್ಲಿ ಜೋರಾಗಿ ನಡೆಯುತ್ತಿದೆ. ಬೆಟ್ಟಿಂಗ್‌ನಲ್ಲಿ ಹಣ ಕಟ್ಟಿ ಸೋತು, ಆ ಹಣವನ್ನು ಕಟ್ಟಲಾಗದೆ ಕೆಲವರು ಊರು ಬಿಟ್ಟು ಹೋಗಿರುವ ಪ್ರಸಂಗಗಳು ನಡೆದಿವೆ. ಇನ್ನೂ ಮಕ್ಕಳು ಕೂಡ ಇದರಿಂದ ಹಾಳಾಗುತ್ತಿದ್ದಾರೆ. ಸಿಸಿಬಿ ಪೊಲೀಸರು ಮತ್ತು ಕುದೂರು ಪೊಲೀಸ್‌ ಠಾಣೆಯ ಸಿಪಿಐ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ಈ ದಂಧೆಯನ್ನು ಮಟ್ಟ ಹಾಕಬೇಕು. -ಯತಿರಾಜು, ಮಾಜಿ ಅಧ್ಯಕ್ಷ, ತಾಪಂ

Advertisement

Udayavani is now on Telegram. Click here to join our channel and stay updated with the latest news.

Next