ಬ್ರಿಸ್ಬೇನ್: ಲಾಸ್ ಏಂಜಲೀಸ್‌ನಲ್ಲಿ ನಡೆಯುವ 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿರುವಾಗಲೇ 2032ರ ಒಲಿಂಪಿಕ್ಸ್ ಸುದ್ದಿಯಲ್ಲಿದೆ.
ಇದು ಆಸ್ಟ್ರೇಲಿಯದ ಬ್ರಿಸ್ಬೇನ್‌ನಲ್ಲಿ ನಡೆಯಲಿದ್ದು, ಇಲ್ಲಿ ಕ್ರಿಕೆಟ್ ಸೇರ್ಪಡೆಯ ಕುರಿತು “ಕ್ರಿಕೆಟ್ ಆಸ್ಟ್ರೇಲಿಯ’ ಮುಂದಡಿ ಇಡಲಿದೆ. ಈ ಕುರಿತು ಐಸಿಸಿ ಜತೆ ಮಾತುಕತೆಗೆ ಮುಂದಾಗಲಿದೆ.
“ಕ್ರಿಕೆಟ್ ಎನ್ನುವುದು ಆಸ್ಟ್ರೇಲಿಯದ ಕ್ರೀಡಾ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇದನ್ನು ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಬೇಕೆಂಬುದು ನಮ್ಮ ಅಪೇಕ್ಷೆ. ಎಲ್ಲವೂ ಐಸಿಸಿ ನಿರ್ಧಾರವನ್ನು ಅವಲಂಬಿಸಿದೆ’ ಎಂಬುದಾಗಿ ಕ್ರಿಕೆಟ್ ಆಸ್ಟ್ರೇಲಿಯ ಹೇಳಿದೆ.
ಕಳೆದ ಬರ್ಮಿಂಗ್‌ಹ್ಯಾಮ್ ಕಾಮ ನ್ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ವನಿತಾ ಕ್ರಿಕೆಟ್ ಪಂದ್ಯಾವಳಿಯನ್ನು ಪದಕ ಸ್ಪರ್ಧೆಯಾಗಿ ಅಳವಡಿಸಲಾಗಿತ್ತು. ಇದು ಸಾಕಷ್ಟು ಯಶಸ್ಸನ್ನೂ ಕಂಡಿತು.
ಹೀಗಾಗಿ ಒಲಿಂಪಿಕ್ಸ್‌ನಲ್ಲೂ ಟಿ20 ಮಾದರಿಯನ್ನು ಅಳವಡಿಸಬಹುದು ಎಂಬುದು ಕ್ರಿಕೆಟ್ ಆಸ್ಟ್ರೇಲಿಯವಷ್ಟೇ ಅಲ್ಲ, ಬಿಸಿಸಿಐ ಒಲವು ಕೂಡ ಹೌದು.
ಆಸ್ಟ್ರೇಲಿಯ ಆತಿಥೇಯ ರಾಷ್ಟ್ರ
2032ರ ಒಲಿಂಪಿಕ್ಸ್‌ಗೆ ಆಸ್ಟ್ರೇಲಿಯ ಆತಿಥೇಯ ರಾಷ್ಟ್ರವಾಗಿರುವುದರಿಂದ ಲಾಭವೇ ಆಗಲಿದೆ. ಕೆಲವು ಕ್ರೀಡೆಗಳನ್ನು ಸೇರಿಸುವ ಅಧಿಕಾರ ಆತಿಥೇಯ ರಾಷ್ಟ್ರಕ್ಕೆ ಇರುತ್ತದೆ. ಹೀಗಾಗಿ ಇಲ್ಲಿ ಕ್ರಿಕೆಟ್‌ಗೆ ಅವಕಾಶ ಸಿಗುವ ನಿರೀಕ್ಷೆ ಬಲವಾಗಿದೆ. ಈ ನಿಟ್ಟಿನಲ್ಲಿ ವರ್ಷಾಂತ್ಯದ ಟಿ20 ವಿಶ್ವಕಪ್ ಯಶಸ್ಸು ಕೂಡ ಆಸ್ಟ್ರೇಲಿಯ ಪಾಲಿಗೆ ನಿರ್ಣಾಯಕವಾಗಲಿದೆ.