ಇದು ದಪ್ಪ ತಲೆಯ ಹಕ್ಕಿ. ನೆಟ್ಟಗೆ ಕುಳಿತಿರುತ್ತದೆ. ಎಸಿಪಿóಡಿಯಾ ಕುಟುಂಬಕ್ಕೆ ಸೇರಿದೆ. ಇದು 55ರಿಂದ 75 ಸೆಂ.ಮೀ. ಎತ್ತರ ಇರುವುದು. ಇದು ರೆಕ್ಕೆ ಬಿಚ್ಚಿ ಕುಳಿತಾಗ ಇಂಗ್ಲೀಷಿನ ವಿ ಆಕರದಲ್ಲಿ ರೆಕ್ಕೆ ತುದಿ ತೋರುವುದು. ತಲೆ ದಪ್ಪ ಇದ್ದು ತಲೆಯ ಮೇಲೆ ಚಿಕ್ಕ. ಚಿಕ್ಕ ಅಚ್ಚ ಕಂದು ಬಣ್ಣದ ಚುಕ್ಕೆ ಇರುತ್ತದೆ. ತಲೆ, ಮೈ ಮಾಸಲು ಬಿಳಿ ಬಣ್ಣ ಇದ್ದು, ಅದರಮೇಲೆ ಚಿಕ್ಕ ಕಂದುಗಪ್ಪು ಬಣ್ಣದ ಚುಕ್ಕೆ ಇರುತ್ತದೆ.
ರೆಕ್ಕೆಯ ಪ್ರೈಮರಿ ಗರಿಗಳು ಉದ್ದ ಇರುತ್ತವೆ. ಬಿಳಿ ಮತ್ತು ಕಂದುಗಪ್ಪು ಬಣ್ಣದ ಗೆರೆಗಳಿಂದ ಕೂಡಿದೆ. ಬೆನ್ನಿನ ಮೇಲೆ ಅರ್ಧ ಚಂದ್ರಾಕಾರದಲ್ಲಿ ಕಂದುಗಪ್ಪು ಬಣ್ಣದ ಮಚ್ಚೆ ಯಂತೆ ಬಣ್ಣ ಕಾಣುತ್ತದೆ. ರೆಕ್ಕೆಯ ಅಡಿಭಾಗ ತಿಳಿ ಕಂದುಗೆಂಪು ಇದ್ದು. ಅದು ರೆಕ್ಕೆ ಬಿಚ್ಚಿ ಕುಳಿತಿರುವಾಗ ಸ್ಪಷ್ಟವಾಗಿ ಕಾಣಸಿಗುತ್ತದೆ. ಬಾಲದ ಪುಕ್ಕ ಅಗಲವಾಗಿದ್ದು ಅದರ ಅಡಿಯಲ್ಲಿ ಅಚ್ಚ ಕಂದುಗಪ್ಪು ಬಣ್ಣದ ಅಗಲ ಗೆರೆಯಿಂದ ಇದನ್ನು ಗುರುತಿಸಲು ಸಹಾಯಕವಾಗಿದೆ. ಇದು ಹೆಚ್ಚಾಗಿ ಹಾವು ಮತ್ತು ಸರಿಸೃಪ ವರ್ಗದ ಪ್ರಾಣಿಗಳನ್ನೆ ತಿನ್ನುವುದರಿಂದ ಇದಕ್ಕೆ ಹಾವು ಗಿಡುಗ ಎಂಬ ಹೆಸರು ಅನ್ವರ್ಥಕವಾಗಿದೆ.
ಕೈಟ್ ಮತ್ತು ಈಗಲ್ ಎಂಬ ಎರಡು ಪ್ರಬೇಧದ ಹಕ್ಕಿಗಳನ್ನೂ ಹದ್ದು ಎಂದು ಸಾಮಾನ್ಯವಾಗಿ ಕರೆಯಲಾಗಿದೆ. ತುದಿಯಲ್ಲಿ ಕೊಕ್ಕೆಯಂತೆ ಬಗ್ಗಿರುವ ದಪ್ಪ ಬೂದುಬಣ್ಣದ ಚುಂಚು ಇದೆ. ಪ್ರಾಣಿಗಳನ್ನು ಬೇಟೆಯಾಡಿ ಹರಿದು ತಿನ್ನಲು ಇದು ಸಹಾಯಕವಾಗಿದೆ. ಹಸಿರು ಹಾವು, ಓತಿಕ್ಯಾತ, ನಾಗರಹಾವು- ಇವುಗಳನ್ನು ತಿನ್ನುವುದರ ಜೊತೆ, ಕೆಲವೊಮ್ಮ ಇತರ ಲಾರ್ವಾವಳನ್ನು ತಿನ್ನುವುದಿದೆ. ಹಾವುಗಳನ್ನು ಎತ್ತರದ ಮರಗಳಿಂದಲೇ ಗುರುತಿಸಿ, ಅವುಗಳನ್ನು ಬೆನ್ನಟ್ಟಿ ಹಾರಿ, ಇಲ್ಲವೇ ಕೆಲವೊಮ್ಮ ನೆಲದಮೇಲೆ ಅಟ್ಟಿಸಿಕೊಂಡು ಓಡಿ ಸಹ ಬೇಟೆಯಾಡುತ್ತದೆ. ಇದರ ಚುಂಚಿನ ಬುಡದಲ್ಲಿ ತಿಳಿ ಹಳದಿ ಬಣ್ಣ ಇದೆ.
ಇದರ ಕಣಿನ ಕೆಳಗೆ ಕೆನ್ನೆಯಲ್ಲಿ ಕಂದುಗಪ್ಪು ಬಣ್ಣದ ಮಚ್ಚೆ ಇದೆ. ಕಣ್ಣು ಹಳದಿಬಣ್ಣ ಇದ್ದು, ಮಧ್ಯ ಕಪ್ಪು ಚುಕ್ಕೆಯಂತಿರುವ ಕಣ್ಣು ಪಾಪೆ ಇರುವುದರಿಂದ. ಗಿಡುಗನ ನೋಟದ ಕ್ರೂರತೆ ಹೆಚ್ಚಿಸಿದೆ. ಹದ್ದುಗಳ ಕಣ್ಣು ಹಳದಿ ಇದ್ದರೂ. ಗಿಡುಗನ ಕಣ್ಣು ಅದಕ್ಕಿಂತ ಕ್ರೂರವಾಗಿದೆ. ಇದರ ತಲೆಯಲ್ಲಿ ಕುತ್ತಿಗೆ ಗಿಂತ ಮೇಲೆ ಚಿಕ್ಕ ಚೊಟ್ಟೆ ಅಂದರೆ ಗರಿಗಳ ಜುಟ್ಟು ಇದೆ. ಹಾವುಗಳನ್ನು ತಿನ್ನುವ ಜುಟ್ಟಿನ ಗಿಡುಗ ಎಂದೇ ಇದನ್ನು ಹೆಸರಿಸಲಾಗಿದೆ. ಇದರ ಜುಟ್ಟು ಚಿಕ್ಕದಿದ್ದರೂ. ಇದು ಕೂಗುವಾಗ ಇದು ನೆಟ್ಟಗೆ ನಿಲ್ಲುತ್ತದೆ. ಆಗ ಜುಟ್ಟಿನ ಗರಿಯಲ್ಲಿರುವ ಬಿಳಿ ಕಂದು ಗಪ್ಪುಬಣ್ಣ ಕಾಣುತ್ತದೆ. ಇದು ಸುಮ್ಮನೆ ಇರುವಾಗ ನೆತ್ತಿಯಲ್ಲಿ ಕಪ್ಪು ಬಿಳಿ 3 ಗೆರೆಗಳಿರುವಂತೆ ತೋರುವುದು. ಉದ್ದ ಬಲವಾದ ಹಳದಿ ಬಣ್ಣದ ಕಾಲಿದೆ. ಕಾಲುಗಳಲ್ಲಿ ಮೂರು ಬೆರಳುಗಳಿದ್ದು ಅದರ ತುದಿಯಲ್ಲಿ ಬೂದುಬಣ್ಣದ ಚೂಪಾದ ಉಗುರುಗಳಿವೆ. ಇದು ಹಾರುತ್ತಾ ಎರಗಿ ತನ್ನ ಬೇಟೆಯನ್ನು ಕಾಲಲ್ಲಿ ಹಿಡಿಯುವುದು, ಅನಂತರ ಎತ್ತರದ ಮರದಮೇಲೆ ಕುಳಿತು ಕೊಳ್ಳುತ್ತದೆ.
ಚುಂಚಿನಿಂದ ಚುಚ್ಚಿ ಬೇಟೆಯನ್ನು ಹರಿದು ತಿನ್ನುತ್ತದೆ. ವಿಷದ ಹಾವುಗಳನ್ನೂ ಬಿಡುವುದಿಲ್ಲ. ಹಾವು ಕಚ್ಚುತ್ತದೋ , ಹಾಗೆ ಕಚ್ಚಿದರೆ ಅವುಗಳ ವಿಷದಿಂದ ಗಿಡುಗ ಸಾಯುವುದಿಲ್ಲವೇ? ಎಂಬುದರ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಅಕಸ್ಮಾತ್ ಅವುಗಳಲ್ಲಿ ವಿಷ ಪ್ರತಿರೋಧ ಗುಣ ಇದ್ದರೆ? ಮಾನವರು ಮತ್ತು ಜಾನುವಾರುಗಳಿಗೆ ಹಾವಿನ ವಿಷ ತಾಗದಂತಹ ಔಷಧ ತಯಾರಿಸಲು ಸಹಾಯ ವಾದೀತು? ಇಂತಹ ಪಕ್ಷಿಗಳಲ್ಲಿರುವ ವಿಶೇಷತೆ ಕುರಿತು ಅಧ್ಯಯನ ನಡೆದರೆ ಅದು ಮಾನವರಿಗೆ ವರವಾದೀತು. ಕೂಗುವಾಗ ಇದರ ಜುಟ್ಟಿನ ಗರಿ ಎದ್ದು ನಿಲ್ಲುತ್ತದೆ. ಇದರ ಕೂಗಿನ ಮೊದಲ ಸ್ವರ ತಾರಕ-ಎಂದರ ಏರುದನಿಯಲ್ಲಿರುವುದು. ಇದು ಗೂಡು ಮಾಡುವಾಗ ಈ ದನಿ ತನ್ನ ಇರುನೆಲೆ. ತನಗೆ ಸೇರಿದ್ದು ಎನ್ನುವ ಎಚ್ಚರಿಕೆಯೂ ಹೌದು. ಮರದ ತುಟ್ಟ ತುದಿಯಲ್ಲಿ ಕುಳಿತು ಇದು ಕೂಗುತ್ತದೆ. ಗಿಡುಗ ಮರಿಯಾಗಿದ್ದಾಗ ಅವುಗಳ ಮೈಬಣ್ಣ ಬಿಳಿಯಾಗಿರುತ್ತದೆ.
ಬೆಳೆದು ಪ್ರೌಢಾವಸ್ಥೆ ತಲುಪುತಿದ್ದಂತೆ ತಲೆ ಮೈ. ಗರಿಗಳ ಮೇಲೆ ಕಂದು ಗಪ್ಪು ಬಣ್ಣದ ಚುಕ್ಕೆ ಮತ್ತು ಗೆರೆಗಳು ಮೂಡುತ್ತವೆ. ಈ ಕಂದು ಬಿಳಿ ಚಿತ್ತಾರ ಇದರ ಸೌಂದರ್ಯ ಹೆಚ್ಚಿಸಿದೆ. ಗಂಡು ಹೆಣ್ಣು ಎರಡೂ ಸಾಮಾನ್ಯವಾಗಿ ಒಂದೇರೀತಿ ಕೂಗಿ ಪರಸ್ಪರ ಸಂಭಾಷಿಸುತ್ತದೆ. ಇದರ ಕೂಗು, ಕೂಗಿನ ಭಿನ್ನತೆ, ಕೂಗಿನ ವೈವಿಧ್ಯತೆ- ಅವುಗಳ ಅರ್ಥ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಗಂಡಿನ ಕೂಗು ಬಹುದೂರ ಅಂದರೆ 16,7 ಕಿ.ಮೀ ದೂರದವರೆಗೆ ಕೇಳುತ್ತದೆ. ಹೆಣ್ಣಿನ ಕೂಗು 7 ಕೀ.ಮೀ ವರೆಗೂ ಕೆಳುವುದು ಎಂದು ರೇಡಿಯೋ ಟೆಲಿಮೆಟ್ರಿಕ್ ಅಧ್ಯಯನದಿಂದ ದೃಢ ಪಟ್ಟಿದೆ. ಈ ಪ್ರಬೇಧದಲ್ಲಿ 60 ಕ್ಕಿಂತ ಹೆಚ್ಚು ಉಪಜಾತಿಗಳಿವೆ.
ಇವು ಜಗತ್ತಿನ ತುಂಬೆಲ್ಲ ಇದೆ. ಶೇ.98ಕ್ಕಿಂತಲೂ ಹೆಚ್ಚು ಈ ಪ್ರಬೇಧದ ಹಕ್ಕಿಗಳು ಎತ್ತರದ ಮರಗಳ ತುಟ್ಟತುದಿಯಲ್ಲೇ ಕುಳಿತಿರುತ್ತವೆ. ಮುಂಜಾನೆ ಇವು ಬೇಟೆಯಾಡುತ್ತವೆ. ಭಾರತದಲ್ಲಿ ಹಿಮಾಲಯಪ್ರದೇಶ, ನೇಪಾಳ ಕನಾಟಕ, ತಮಿಳುನಾಡುಗಳಲ್ಲೆಲ್ಲಾ ಈ ಗಿಡುಗ ಕಾಣಸಿಗುತ್ತದೆ. ಶ್ರೀಲಂಕಾ ಅಂಡಮಾನ್ ನಿಕೋಬಾರ್. ಕಬಿನೀ ರಕ್ಷಿತ ಅರಣ್ಯ ಪ್ರದೇಶದಲ್ಲೂ ಇವೆ.
ಇವುಗಳು ಕುಳಿತುಕೊಳ್ಳುವ ಭಂಗಿ, ಆಹಾರ ಕ್ರಮ ಮಾತ್ರ ಸಾಮಾನ್ಯವಾಗಿ ಒಂದೇರೀತಿ ಇರುತ್ತದೆ. ಚಳಿಗಾಲ ಮುಗಿದು ಬೇಸಿಗೆ ಆರಂಭವಗುತ್ತಿದ್ದಂತೆ ಇದು ಮರಿಮಾಡಲು ಸ್ಥಳದ ಆಯ್ಕೆ ಮಾಡುತ್ತದೆ. ತನ್ನ ಆಯ್ಕೆಯ ನಿರ್ಬಂಧಿತ ಪ್ರದೇಶವೆಂದು ತನ್ನ ಗೂಗಿನ ಮೂಲಕ ಸಾರುತ್ತದೆ. ನೀರಿನ ಸಮೀಪ, ಸುಮಾರು 30 ಅಡಿಯಷ್ಟು ಎತ್ತರದಲ್ಲಿ ಕಟ್ಟಿಗೆ ತುಂಡು ಸೇರಿಸಿ ಗೂಡು ಕಟ್ಟುತ್ತದೆ. ಅದರ ಮೇಲೆ ಹಸಿರೆಲೆ ಹರಡಿ ಕೇವಲ ಒಂದೇ ಮೊಟ್ಟೆ ಇಡುತ್ತದೆ. ಕೆಲವೊಮ್ಮೆ 2 ಮೊಟ್ಟೆ ಇಟ್ಟರೂ ಕೇವಲ ಒಂದು ಮೊಟ್ಟೆ ಮಾತ್ರ ಮರಿಯಾಗುತ್ತದೆ.
ಇದು ಗಂಡೋ. ಹೆಣ್ಣೋ ತಿಳಿದಿಲ್ಲ. ಪ್ರತಿಸಲ ಹೊಸದಾಗಿ ಗೂಡು ಕಟ್ಟುವುದು. ಕೆಲವೊಮ್ಮೆ ಈ ಮೊಟ್ಟೆ ಕಾರಣಾಂತರಗಳಿಂದ ಮರೆಯಾಗದಿದ್ದಾಗ 2 ಅಥವಾ 7 ವಾರದಲ್ಲಿ ಪುನಃ ಸೇರಿ ಮೊಟ್ಟೆ ಇಡುತ್ತದೆ. ಗಂಡು ಹೆಣ್ಣು ಸೇರಿ ಗೂಡು ಕಟ್ಟುತ್ತದೆ. ಹೆಣ್ಣು ಕಾವು ಕೊಟ್ಟು ಮರಿಮಾಡುತ್ತದೆ. ಮರಿಯಾಗಲು 41 ದಿನಗಳ ಕಾಲಾವಕಾಶ ಬೇಕು. 2 ತಿಂಗಳಕಾಲ ತಂದೆ-ತಾಯಿ ಆರೈಕೆಯಲ್ಲಿ ಕಳೆಯುವುದು. ಆಮೇಲೆ ಸ್ವತಂತ್ರವಾಗಿ ಹಾರಾಡುತ್ತದೆ.
ಪಿ. ವಿ. ಭಟ್ ಮೂರೂರು